ಮಂಗಳವಾರ, ಅಕ್ಟೋಬರ್ 26, 2021
21 °C

ಮಸೀದಿಗಳಲ್ಲಿ ಧ್ವನಿವರ್ಧಕ ಬಳಸಿ ‘ಅಜಾನ್‌’ ಮಾಡುವುದನ್ನು ನಿಲ್ಲಿಸಬೇಕು: ಮುತಾಲಿಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ‘ಮಸೀದಿಗಳಲ್ಲಿ ಧ್ವನಿವರ್ಧಕ ಬಳಸಿ ‘ಅಜಾನ್‌’ (ಪ್ರಾರ್ಥನೆ)ಮಾಡುವುದನ್ನು ಕೂಡಲೇ ನಿಲ್ಲಿಸಬೇಕು. ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳದಿದ್ದರೆ, ಶ್ರೀರಾಮ ಸೇನೆಯಿಂದ ಧ್ವನಿವರ್ಧಕ ತೆರವು ಮಾಡಲಾಗುವುದು’ ಎಂದು ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ ಮುತಾಲಿಕ್‌ ಎಚ್ಚರಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,‘ಮಸೀದಿಗಳಲ್ಲಿ ಧ್ವನಿವರ್ಧಕ ಬಳಸಿ ದಿನಕ್ಕೆ ಐದು ಬಾರಿ ಪ್ರಾರ್ಥನೆ ಮಾಡುತ್ತಿದ್ದಾರೆ. ಇದರಿಂದ ನಿಶಬ್ದ(ಆಸ್ಪತ್ರೆ, ಶಿಕ್ಷಣ ಸಂಸ್ಥೆ ಮತ್ತು ಧಾರ್ಮಿಕ ಕೇಂದ್ರ)ವಲಯಗಳಲ್ಲಿ ಶಬ್ದ ಮಾಲಿನ್ಯವಾಗುತ್ತಿದೆ. ರಾತ್ರಿ 10 ರಿಂದ ಬೆಳಿಗ್ಗೆ 6ರವರೆಗೆ ಧ್ವನಿವರ್ಧಕ ಬಳಸಬಾರದು ಎಂದು ಸುಪ್ರೀಂಕೋರ್ಟ್‌ ಆದೇಶ ಮಾಡಿದ್ದರೂ, ಪಾಲಿಸದೆ ನ್ಯಾಯಾಂಗ ನಿಂದನೆ ಮಾಡಲಾಗುತ್ತಿದೆ’ ಎಂದು ದೂರಿದರು.

‘ಸೂಕ್ಷ್ಮ ವಿಚಾರ ಎಂದು ಕೋರ್ಟ್‌ ನಿಯಮವನ್ನೇ ಉಲ್ಲಂಘಿಸಿ ದೇಶದಲ್ಲಿ ಅಪಾಯಕಾರಿ ವಾತಾವರಣ ಸೃಷ್ಟಿಸಲಾಗುತ್ತಿದೆ. ಧಾರ್ಮಿಕ ಕಟ್ಟಡಗಳ ತೆರವು ಮಾಡುವುದರಲ್ಲೂ ಅನಧಿಕೃತ ದರ್ಗಾ ಮತ್ತು ಮಸೀದಿಗಳನ್ನು ತೆರವು ಮಾಡಲಿಲ್ಲ. ಈ ರೀತಿ ಮಾಡುವುದಾದರೆ ‍ಪೊಲೀಸ್‌ ಠಾಣೆ, ಕೋರ್ಟ್‌ಗಳನ್ನು ಮುಚ್ಚಿಬಿಡಿ’ ಎಂದರು.

ಮತಾಂತರ ವಿರುದ್ಧ ಹೋರಾಟ: ‘ಮತಾಂತರ ತಡೆಗೆ ನಿರ್ದಿಷ್ಟ ಕಾನೂನು ರೂಪಿಸಬೇಕು. ಗೋಹತ್ಯೆ ನಿಷೇಧ ಕಾನೂನು ರೂ‍ಪಿಸಿದರೂ ಗೋಹತ್ಯೆ ನಿಂತಿಲ್ಲ. ಗೋಹತ್ಯೆ ತಡೆಯುವ ಹಿಂದೂ ಕಾರ್ಯಕರ್ತರು ಮಾತ್ರ ಕಾಣಿಸುತ್ತಾರೆ. ಗೋಹತ್ಯೆ ಏಕೆ ತಡೆಯುವುದಿಲ್ಲ? ಪೊಲೀಸರು ಕತ್ತೆ ಕಾಯುತ್ತಿದ್ದಾರೆಯೇ’ ಎಂದು ಪ್ರಶ್ನಿಸಿದರು.

‘ಬಿಜೆಪಿ ಅವರನ್ನು ನಂಬಿ ಹಿಂದೂಪರ ಸಂಘಟನೆಗಳು ಹಾಗೂ ಹಿಂದೂಗಳು ಮತ ಹಾಕಿದ್ದಾರೆ. ಶಾಸಕ ಗೂಳಿಹಟ್ಟಿ ಶೇಖರ್ ಅವರ ತಾಯಿ ಮತಾಂತರ ಆದ ಮೇಲೆ ಶಾಸಕರಿಗೆ ಜ್ಞಾನೋದಯ ಆಗಿದೆ. ಬಿಜೆಪಿಯವರಿಗೆ ಅವರ ಮನೆಯ ಹೆಣ್ಣು ಮಕ್ಕಳನ್ನು ಒಯ್ದಾಗ ಲವ್‌ ಜಿಹಾದ್‌ ನೆನಪಾಗುತ್ತೆ’ ಎಂದು ಟೀಕಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು