ಗುರುವಾರ , ಸೆಪ್ಟೆಂಬರ್ 29, 2022
26 °C
‘ಪ್ರಜಾವಾಣಿ’ ಫೇಸ್‌ಬುಕ್‌ ಸಂವಾದದಲ್ಲಿ ಡಾ.ಸಿದ್ಲಿಂಗೇಶ ಅಭಿಮತ

ಸರಿಯಾದ ಆಹಾರ ಕ್ರಮವೇ ದಿವ್ಯೌಷಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ಊಟ ಬಲ್ಲವನಿಗೆ ರೋಗವಿಲ್ಲ ಅನ್ನೋ ಮಾತೇ ಇದೆ. ಸರಿಯಾದ ಆಹಾರ ಕ್ರಮ ಅನುಸರಿಸುವವರಿಗೆ, ಸಮತೋಲಿತ ಆಹಾರ ಸೇವನೆ ರೂಢಿಸಿಕೊಂಡಿರುವವರಿಂದ ಕಾಯಿಲೆಗಳು ದೂರ’ ಎಂದು ಕಿಮ್ಸ್‌ನ ವೈದ್ಯಕೀಯ ಔಷಧಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಸಿದ್ಲಿಂಗೇಶ ಸಾಲಿಮಠ ಹೇಳಿದರು.

ಪೌಷ್ಟಿಕ ಆಹಾರ ಸಪ್ತಾಹದ (ಸೆ.1–7) ಸಂದರ್ಭದಲ್ಲಿ ‘ಪ್ರಜಾವಾಣಿ’ ಫೇಸ್‌ಬುಕ್‌ ಸಂವಾದದಲ್ಲಿ ಮಾತನಾಡಿದ ಅವರು, ಪೌಷ್ಟಿಕ ಆಹಾರ ಎಷ್ಟು ಮುಖ್ಯ ಎನ್ನುವ ಕುರಿತು ಉಪಯುಕ್ತ ಮಾಹಿತಿ ನೀಡಿದರು.

ತಪ್ಪು ಆಹಾರ ಕ್ರಮವೇ ಎಲ್ಲ ಕಾಯಿಲೆಗಳಿಗೆ ಬುನಾದಿಯಾಗಿರಲಿದೆ. ಇಂದಿನ ಒತ್ತಡದ ಜೀವನಕ್ರಮದಲ್ಲಿ ಜಂಕ್‌ಫುಡ್‌, ರೆಡಿ ಟು ಈಟ್‌ ಫುಡ್‌ ಸೇವನೆಯಿಂದ ಮಧುಮೇಹ, ಕ್ಯಾನ್ಸರ್‌, ಹೃದಯ ಸಮಸ್ಯೆ, ಮೂಲವ್ಯಾಧಿಯಂಥ ಕಾಯಿಲೆಗಳಿಗೆ ದಾರಿಯಾಗುತ್ತಿದೆ. ಸಮತೋಲಿತ ಆಹಾರವನ್ನು ಅರಿತು ತಿಂದರೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಅವರು ಹೇಳಿದರು.

ಹಿರಿಯರಲ್ಲಿ ಜೀರ್ಣಶಕ್ತಿ ಕ್ಷೀಣಿಸುವುದರಿಂದ ಅವರು ಮಿತ ಆಹಾರ ಕ್ರಮದ ಜೊತೆ ಪ್ರೊಟೀನ್‌ಯುಕ್ತ ಆಹಾರ ಸೇವಿಸಬೇಕು. ಕಾಳು, ಸೋಯಾ, ಹಾಲು, ರಾಗಿ, ಮೊಟ್ಟೆ ಆಹಾರದಲ್ಲಿದ್ದರೆ ಆರೋಗ್ಯ ಕಾಪಾಡಿಕೊಳ್ಳಬಹುದು. ಮಕ್ಕಳಿಗೆ ಕ್ಯಾಲ್ಸಿಯಂ, ಪ್ರೊಟೀನ್‌ಯುಕ್ತ ಆಹಾರ ನೀಡಬೇಕು. ಅವರು ಸೇವಿಸುವ ಆಹಾರದ ಜೊತೆಗೆ 2 ಕಪ್‌ ಹಾಲು, ಬೇಯಿಸಿದ 2 ಮೊಟ್ಟೆ, ರಾಗಿ ಗಂಜಿ ನೀಡಿದರೆ ಬೆಳವಣಿಗೆ ಚೆನ್ನಾಗಿ ಆಗಲಿದೆ. ಯಾವುದೇ ಕಾರಣಕ್ಕೂ ಸ್ನ್ಯಾಕ್ಸ್‌ (ಬಿಸ್ಕತ್‌, ಬೇಕರಿ ಫುಡ್‌, ಚಿಪ್ಸ್‌, ಕುಕ್ಕಿಸ್‌) ಕೊಡಲೇ ಬಾರದು. ಹಣ್ಣುಗಳನ್ನು ತಿನ್ನಿಸಬೇಕು. ತಿನ್ನಲು ಬೇಸರಿಸಿಕೊಳ್ಳುವ ಮಕ್ಕಳಿಗೆ ನಿತ್ಯ ವಿಧವಿಧದ ಆಹಾರ ಸಿದ್ಧಪಡಿಸಿ ನೀಡಿದರೆ ತಿನ್ನಲು ಇಷ್ಟಪಡುತ್ತಾರೆ ಎಂದು ಸಲಹೆ ನೀಡಿದರು.

ಮನೆ ಒಳಗೆ, ಹೊರಗೆ ದುಡಿಯುವ ಮಹಿಳೆಯರು ತಮ್ಮ ಆರೋಗ್ಯದತ್ತ ವಿಶೇಷ ಕಾಳಜಿ ವಹಿಸಲು ಸಮತೋಲಿತ ಆಹಾರ ಸೇವಿಸುವುದು ಅತಿಅಗತ್ಯ. ಅವರು ತಮ್ಮ ಊಟದ ಬಾಕ್ಸ್‌ನಲ್ಲಿ 2 ಕಪ್‌ ಕಾಳಿನ ಪಲ್ಯ, 1 ಕಪ್‌ ತರಕಾರಿ ಪಲ್ಯ, 1 ಕಪ್‌ ತರಕಾರಿ ಸಲಾಡ್‌, ಅನ್ನ, ರೊಟ್ಟಿ ಜೊತೆಗೆ ಹಣ್ಣು ತಿನ್ನುವುದು ಉತ್ತಮ. ಕಚೇರಿಯಿಂದ ಮನೆಗೆ ಬರುವಾಗ ಎದು
ರಾಗುವ ಜಂಕ್‌ಫುಡ್‌, ಬೇಕರಿ ಆಹಾರ
ಗಳನ್ನು ಯಾವುದೇ ಕಾರಣಕ್ಕೂ ತಿನ್ನಬೇಡಿ
ಎಂದು ಕಿವಿಮಾತು ಹೇಳಿದರು.

ಕ್ಯಾನ್ಸರ್‌ ರೋಗಿಗಳಿಗೆ ಹಸಿವು ಕಡಿಮೆ. ವಾಕರಿಕೆ, ಬಾಯಿಹುಣ್ಣು ಇರುವುದರಿಂದ ಆಹಾರ ಸೇವನೆಗೆ ಸಹಜವಾಗಿ ಹಿಂಜರಿಕೆ ಇರಲಿದೆ. ಅವರು ಸುಲಭವಾಗಿ ಪಚನವಾಗುವ ಆಹಾರ ಸೇವಿಸಬೇಕು. ದಾಲ್‌ಕಿಚಡಿ, ಹಣ್ಣಿನ ಜ್ಯೂಸ್‌, ಪಾಯಸ ಸೇವಿಸಬೇಕು. ತರಕಾರಿಯನ್ನು ಕಡಿಮೆ ಸೇವಿಸಿದರೆ ಉತ್ತಮ ಎಂದು ಡಾ. ಸಾಲಿಮಠ ಸಲಹೆ ನೀಡಿದರು.

ಮಧುಮೇಹಿಗಳಿಗೆ ರಾಗಿ ಊಟ ಬೇಡ

ಮಧುಮೇಹ ಕಾಯಿಲೆಯೇ ಅಲ್ಲ. ಅದನ್ನು ಸಮತೋಲಿತ ಆಹಾರ ಕ್ರಮದಿಂದಲೇ ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಕಡಿಮೆ ಕ್ಯಾಲೊರಿಯುಳ್ಳ ಆಹಾರ ಸೇವಿಸುವುದು ಉತ್ತಮ. ಬಟಾಟೆ, ಬೀಟರೂಟ್‌ ಸೇವನೆ ಬೇಡ. ಆಹಾರ ಸೇವನೆಗೆ ಒಂದೂವರೆ ತಾಸು ಮೊದಲು ಹಾಗೂ ನಂತರ ವ್ಯಾಯಾಮ ಮಾಡುವುದು ಉತ್ತಮ. ರಾಗಿ ಪದಾರ್ಥ ಬಳಕೆ ಬೇಡ. ಎಲ್ಲ ಬಗೆಯ ಹಣ್ಣುಗಳನ್ನು ನಿಸ್ಸಂದೇಹವಾಗಿ ತಿನ್ನಬಹುದು. ತುಂಬಾ ಕಳಿತ ಬಾಳೆಹಣ್ಣು, ಮಾವು, ಸಪೋಟ ಹಣ್ಣುಗಳನ್ನು ತಿನ್ನುವ ಬದಲು ಅವು ಅತಿಯಾಗಿ ಹಣ್ಣಾಗುವ ಮೊದಲೇ ತಿಂದರೆ ತೊಂದರೆಯಿಲ್ಲ ಎಂದು ಡಾ.ಸಿದ್ಲಿಂಗೇಶ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು