ಧಾರವಾಡ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ(ನರೇಗಾ) ಕೆಲಸ ಮಾಡಿದ ಕೂಲಿಕಾರರಿಗೆ ನೀಡಬೇಕಾದ ಬಾಕಿ ಹಣವನ್ನು ಪಾವತಿಸಬೇಕು ಹಾಗೂ ರೈತರ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿ ಅಖಿಲ ಭಾರತ ರೈತ ಕೃಷಿ ಕಾರ್ಮಿಕರ ಸಂಘಟನೆಯ (ಎಐಕೆಕೆಎಂಎಸ್) ಜಿಲ್ಲಾ ಸಮಿತಿಯವರು ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.
ಕಡಪಾ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ನರೇಗಾ ಕೂಲಿ ಕಾರ್ಮಿಕರು ಹಾಗೂ ರೈತರು ಪ್ರತಿಭಟನಾ ಮೆರವಣಿಗೆ ನಡೆಸಿದರು. ಜಿಲ್ಲಾಧಿಕಾರಿ ಕಚೇರಿ ಎದುರು ಸಮಾವೇಶಗೊಂಡು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು.
ಎಐಕೆಕೆಎಂಎಸ್ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷೆ ದೀಪಾ ಧಾರವಾಡ ಮಾತನಾಡಿ, ರೈತರ ಕೃಷಿ ಬಿಕ್ಕಟ್ಟು ನಿವಾರಣೆಗೆ ಸರ್ಕಾರಗಳು ಎಂ.ಎಸ್.ಸ್ವಾಮಿನಾಥನ್ ಆಯೋಗದ ವರದಿಯಂತೆ ಕೃಷಿ ಉತ್ಪಾದನಾ ವೆಚ್ಚಕ್ಕೆ ಶೇ 50ರಷ್ಟು ಲಾಭಾಂಶ ಸೇರಿಸಿ ಕನಿಷ್ಠ ಬೆಂಬಲ ಬೆಲೆ ಖಾತರಿಯಾಗಿ ದೊರೆಯುವಂತೆ ಮಾಡುವ ಕಾಯ್ದೆಯನ್ನು ರೂಪಿಸಬೇಕು ಎಂದು ಒತ್ತಾಯಿಸಿದರು.
ಸಾಲ ಬಾಧೆಯಿಂದ ಜಿಲ್ಲೆಯಲ್ಲಿ 15 ತಿಂಗಳಲ್ಲಿ 100ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಎಲ್ಲ ರೈತರ ಹಾಗೂ ಕೃಷಿ ಕೂಲಿಕಾರರ ಸಾಲಮನ್ನಾ ಮಾಡಬೇಕು. ರೈತರಿಗೆ ಬಡ್ಡಿ ರಹಿತ ಸಾಲವನ್ನು ಸರ್ಕಾರವೇ ನೀಡಬೇಕು. ರೈತರ ಆತ್ಮಹತ್ಯೆ ತಡೆಗಟ್ಟಲು ಕ್ರಮವಹಿಸಬೇಕು ಎಂದು ಆಗ್ರಹಿಸಿದರು.
ರೈತರ ಪಂಪ್‌ಸೆಟ್‍ಗಳಿಗೆ ಮೀಟರ್ ಅಳವಡಿಕೆ ಕೈ ಬಿಡಬೇಕು. ಬೀಜ ರಸಗೊಬ್ಬರ ಹಾಗೂ ಕೀಟನಾಶಕಗಳ ಬೆಲೆ ನಿಯಂತ್ರಿಸಬೇಕು. ಮಳೆಯಿಂದ ಹಾನಿಗೊಳಗಾದ ಮನೆಗಳಿಗೆ ಪರಿಹಾರ ಬಿಡುಗಡೆ ಮಾಡಬೇಕು. ಬೆಳೆ ಸಮೀಕ್ಷೆ ನಡೆಸಿ ಪರಿಹಾರ ನೀಡಬೇಕು ಎಂದರು.