ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಸ್‌ಐ ಪರೀಕ್ಷೆ ರದ್ದು: ಒಂದು ತೊಟ್ಟು ವಿಷ ಕೊಟ್ಟುಬಿಡಿ– ಆಯ್ಕೆಯಾದವರ ಆಕ್ರೋಶ

ನಿರ್ಧಾರ ಮರುಪರಿಶೀಲನೆಗೆ ಆಗ್ರಹ
Last Updated 29 ಏಪ್ರಿಲ್ 2022, 13:31 IST
ಅಕ್ಷರ ಗಾತ್ರ

ಹುಬ್ಬಳ್ಳಿ: ’ಕೆಲವರು ಅಕ್ರಮ ಎಸಗಿದ್ದಾರೆ ಎಂದ ಮಾತ್ರಕ್ಕೆ ಮರುಪರೀಕ್ಷೆ ಮಾಡುವುದಾಗಿ ಘೋಷಿಸಿ ಸರ್ಕಾರ ಅನ್ಯಾಯ ಮಾಡಿದೆ. ಇದರ ಬದಲು ಸರ್ಕಾರವೇ ನಮಗೆ ಒಂದು ತೊಟ್ಟು ವಿಷ ಕೊಟ್ಟುಬಿಡಲಿ...’

ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ 75ನೇ ರ್‍ಯಾಂಕ್‌ ಪಡೆದಿರುವ ಬೆಳಗಾವಿ ಜಿಲ್ಲೆಯ ಸವದತ್ತಿಯ ಅರುಣ್ ಮೇಟಿ ಅವರ ಆಕ್ರೋಶದ ಮಾತುಗಳು ಇವು.

ನಗರದಲ್ಲಿ ಶುಕ್ರವಾರ ಎಚ್‌.ಡಿ. ಕುಮಾರಸ್ವಾಮಿ ಅವರನ್ನು ಭೇಟಿಯಾದ ಬಳಿಕ ‘ಪ್ರಜಾವಾಣಿ’ ಜೊತೆ ಮಾತನಾಡಿದ ಅವರು ‘ಪ್ರಾಮಾಣಿಕವಾಗಿ ಪರೀಕ್ಷೆ ಬರೆದವರ ಸಂಖ್ಯೆ ಹೆಚ್ಚಿದೆ. ಇನ್ನೂ ತನಿಖೆ ಪೂರ್ಣಗೊಂಡಿಲ್ಲ, ಆಗಲೇ ಮರುಪರೀಕ್ಷೆ ಎಂದರೆ ಹಗಲಿರುಳು ಕಷ್ಟಪಟ್ಟು ಓದಿ ಪರೀಕ್ಷೆ ಪಾಸಾದವರ ಗತಿ ಏನು’ ಎಂದು ಪ್ರಶ್ನಿಸಿದರು.

‘ಒಂದು ಸಲ ಪರೀಕ್ಷೆ ಪಾಸಾಗಲು ಕುಟುಂಬಕ್ಕೂ ಸಮಯ ನೀಡದೆ ಮೂರು ವರ್ಷ ಕಷ್ಟಪಟ್ಟು ಓದಿದ್ದೇನೆ. ಸರ್ಕಾರದ ನಿರ್ಧಾರದಿಂದ ಪ್ರಾಮಾಣಿಕರಿಗೆ ಅನ್ಯಾಯವಾಗುತ್ತದೆ. ತನಿಖಾ ತಂಡ ಯಾವುದೇ ವಿಚಾರಣೆ ಮಾಡಿದರೂ ಎದುರಿಸಲು ಸಿದ್ಧನಿದ್ದೇನೆ’ ಎಂದರು.

‘ಅಕ್ರಮ ಎಸಗಿದವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಂಡು ನ್ಯಾಯಕೊಡುತ್ತದೆ ಎಂದು ಬಲವಾಗಿ ನಂಬಿಕೊಂಡಿದ್ದೆ. ಈಗ ಸರ್ಕಾರವೇ ನಮಗೆ ವಿಷ ಉಣಿಸುತ್ತಿದೆ. ಸಾಯುವುದು ಬಿಟ್ಟು ನಮಗೆ ಬೇರೆ ದಾರಿ ತೋಚುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

31ನೇ ರ್‍ಯಾಂಕ್‌ ಪಡೆದ ಬೆಳಗಾವಿ ಜಿಲ್ಲೆಯ ರಾಯಬಾಗದ ವಿದ್ಯಾಶ್ರೀ ಬಳಿಗಾರ’ಮರುಪರೀಕ್ಷೆ ನಿರ್ಧಾರ ಸರಿಯಲ್ಲ. ಕೋವಿಡ್‌ ಲಾಕ್‌ಡೌನ್‌ ಸಮಯದಲ್ಲಿಯೂ ಮನೆಬಿಟ್ಟು ಬಂದು ಧಾರವಾಡದಲ್ಲಿದ್ದು ಓದಿದ್ದೇನೆ. ಪ್ರಾಮಾಣಿಕವಾಗಿ ಆಯ್ಕೆಯಾದವರಿಗೆ ಸರ್ಕಾರ ನ್ಯಾಯ ಕೊಡಬೇಕು. ಮರು ಪರೀಕ್ಷೆಯೂ ಅಕ್ರಮವಿಲ್ಲದೇ ನಡೆಯುತ್ತದೆ ಎನ್ನುವುದಕ್ಕೆ ಏನು ಗ್ಯಾರಂಟಿ’ ಎಂದು ಪ್ರಶ್ನಿಸಿದರು.

ಪಿಎಸ್‌ಐ ಪರೀಕ್ಷೆಯಲ್ಲಿ ಉತ್ತೀರ್ಣರಾದ ಗದಗ, ಬೆಳಗಾವಿ, ವಿಜಯಪುರ ಹಾಗೂ ಧಾರವಾಡ ಜಿಲ್ಲೆಯ 20ಕ್ಕೂ ಹೆಚ್ಚು ಜನ ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT