ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಸು ಹಗುರವಾಗಿದ್ದರೆ ಯಶಸ್ಸು ಹತ್ತಿರ

‘ಪ್ರಜಾವಾಣಿ’ ‘ಫೋನ್–ಇನ್’ ಕಾರ್ಯಕ್ರಮ: ಪದವಿಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೃಷ್ಣ ನಾಯ್ಕ ಸಲಹೆ
Last Updated 23 ಫೆಬ್ರವರಿ 2023, 4:23 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಸ್ನೇಹಿತರು ಅಥವಾ ಯಾರೋ ಹೇಳಿದ ಮಾತುಗಳಿಗೆ ಕಿವಿಗೊಡಬಾರದು. ಏನೇ ಅನುಮಾನ ಇದ್ದರೂ ತಮ್ಮ ಶಿಕ್ಷಕರನ್ನು ಭೇಟಿಯಾಗಿ ಪರಿಹಾರ ಕಂಡುಕೊಳ್ಳಬೇಕು. ಗೊಂದಲಗಳಿಲ್ಲದ ಹಗುರ ಮನಸುಗಳಿಂದ ಪರೀಕ್ಷೆ ಬರೆದರೆ ಖಂಡಿತ ಯಶಸ್ಸು ನಿಮ್ಮದಾಗುತ್ತದೆ...

ದ್ವಿತೀಯ ಪಿಯುಸಿ ಅಂತಿಮ ಪರೀಕ್ಷೆ ಎದುರು ನೋಡುತ್ತಿರುವ ವಿದ್ಯಾರ್ಥಿಗಳಿಗಾಗಿ ‘ಪ್ರಜಾವಾಣಿ’ ಬುಧವಾರ ಆಯೋಜಿಸಿದ್ದ ‘ಫೋನ್–ಇನ್’ ಕಾರ್ಯಕ್ರಮದಲ್ಲಿ ಧಾರವಾಡದ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೃಷ್ಣ ನಾಯ್ಕ ಹೇಳಿದ ಕಿವಿಮಾತುಗಳಿವು.

ಈ ಬಾರಿಯ ಪರೀಕ್ಷೆಯನ್ನು ಹಿಂದಿಗಿಂತಲೂ ವಿದ್ಯಾರ್ಥಿ ಸ್ನೇಹಿಯಾಗಿಸಲು ಪದವಿಪೂರ್ವ ಶಿಕ್ಷಣ ಇಲಾಖೆ ಕೈಗೊಂಡಿರುವ ಕ್ರಮಗಳ ಕುರಿತು ಅವರು ಸವಿಸ್ತಾರವಾಗಿ ತಿಳಿಸಿದರು. ಪ್ರಶ್ನೆ ಪತ್ರಿಕೆಯ ಸ್ವರೂಪದಲ್ಲಿ ಮಾಡಲಾದ ಬದಲಾವಣೆಯ ಕುರಿತು ವಿದ್ಯಾರ್ಥಿಗಳನ್ನು ಹೆಚ್ಚು ಸಾಕ್ಷರರನ್ನಾಗಿಸಿದರು.

‘ಹೊಸ ಮಾದರಿಯ ಪ್ರಶ್ನೆ ಪತ್ರಿಕೆ ಕುರಿತು ವಿದ್ಯಾರ್ಥಿಗಳ ಅನುಮಾನ–ಭಯ ಹೋಗಲಾಡಿಸಲು ಈಗಾಗಲೇ ಜಿಲ್ಲೆಯ ಎಲ್ಲ ಕಾಲೇಜುಗಳ, ಎಲ್ಲ ವಿಷಯಗಳ ಉಪನ್ಯಾಸಕರ ನ್ನೊಳಗೊಂಡ ವಾಟ್ಸ್‌ಆ್ಯಪ್ ಗುಂಪು ಮಾಡಿಕೊಂಡು ಸ್ಪಷ್ಟ ಕಲ್ಪನೆ ನೀಡಲು ಕ್ರಮ ಕೈಗೊಳ್ಳಲಾಗಿದೆ. ಅವರಿಗೆ ಕಾರ್ಯಾಗಾರಗಳನ್ನೂ ಆಯೋಜಿಸಲಾಗಿದೆ. ಆದಾಗ್ಯೂ, ಪರೀಕ್ಷೆಯ ಕುರಿತು ಏನೇ ಪ್ರಶ್ನೆಗಳಿದ್ದರೂ ಅದನ್ನು ಕೇಳಿ ಉತ್ತರ ಪಡೆದುಕೊಳ್ಳಲು ವಿದ್ಯಾರ್ಥಿಗಳಿಗೆ ನಮ್ಮ ತಂಡದ ಸಂಪನ್ಮೂಲ ವ್ಯಕ್ತಿಗಳು ಯಾವಾಗಲೂ ಲಭ್ಯ’ ಎಂದರು ಅಭಯ ನೀಡಿದರು.

ಈ ಬಾರಿ ಪ್ರಶ್ನೆಪತ್ರಿಕೆಯಲ್ಲಿ ಒಂದಿಷ್ಟು ಬದಲಾವಣೆ ಮಾಡಿರುವುದರಿಂದ ಹೆಚ್ಚಿನ ವಿದ್ಯಾರ್ಥಿಗಳಿಂದ ಈ ಕುರಿತಾಗಿಯೇ ಪ್ರಶ್ನೆಗಳು ಕೇಳಿಬಂದವು. ಅವುಗಳಿಗೆ ಉಪನಿರ್ದೇಶಕರು ಮತ್ತು ಸಂಪನ್ಮೂಲ ವ್ಯಕ್ತಿಗಳಿಂದ ದೊರೆತ ಉತ್ತರಗಳು ಇಲ್ಲಿವೆ.

ವಿದ್ಯಾರ್ಥಿಗಳ ಪ್ರಶ್ನೆಗಳು:

ವಿಶ್ವನಾಥ, ರೋಣ ಹಾಗೂ ಕಲ್ಮೇಶ, ಕೋಲಾರ

* ನೀಲನಕ್ಷೆ ಪ್ರಶ್ನೆಪತ್ರಿಕೆಯಂತೆಯೇ ಅಂತಿಮ ಪರೀಕ್ಷೆ ಪ್ರಶ್ನೆ ಪತ್ರಿಕೆ ಇರುತ್ತದೆಯೇ?

ವಿಷಯವಾರು ನೀಲನಕ್ಷೆ ಪ್ರಶ್ನೆ ಪತ್ರಿಕೆಯಂತೆಯೇ ವಾರ್ಷಿಕ ಪರೀಕ್ಷೆ ಪ್ರಶ್ನೆ ಪತ್ರಿಕೆಯೂ ಇರುತ್ತದೆ. ಇದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಐದಾರು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುವುದರಿಂದ ಪರೀಕ್ಷೆಯನ್ನು ಸುಲಭವಾಗಿ ಎದುರಿಸಬಹುದು.

ಕಾವ್ಯಾ, ಹೆಬ್ಬಳ್ಳಿ

ಗಣಿತ ವಿಷಯದಲ್ಲಿ ಸಮಯ ನಿರ್ವಹಣೆ ಹೇಗೆ?

ಈ ಬಾರಿ ಪ್ರಶ್ನೆ ಪತ್ರಿಕೆಯಲ್ಲಿ ಬದಲಾವಣೆ ಮಾಡಲಾಗಿದ್ದು, ಬಹುಆಯ್ಕೆ ಪ್ರಶ್ನೆ ಹಾಗೂ ಬಿಟ್ಟಸ್ಥಳ ತುಂಬಿರಿ ಮಾದರಿಯಲ್ಲಿ 20 ಅಂಕಗಳಿಗೆ ಪ್ರಶ್ನೆ ನೀಡಲಾಗುವುದು. ಮೊದಲಿಗೆ ಬೇರೆ ಪ್ರಶ್ನೆಗಳನ್ನು ಬಿಡಿಸಿ, ಕೊನೆಯಲ್ಲಿ ಬಹುಆಯ್ಕೆ ಪ್ರಶ್ನೆಗಳಿಗೆ ಉತ್ತರಿಸಿ. ಇದರಿಂದ ಸಮಯ ನಿರ್ವಹಣೆ ಸುಲಭವಾಗುತ್ತದೆ. ಅದೂ ಅಲ್ಲದೆ ಹೊಸ ಮಾದರಿಯ ಪ್ರಶ್ನೆ ಪತ್ರಿಕೆಗಳನ್ನು ನಿಗದಿತ ಸಮಯದೊಳಗೆ ಮತ್ತೆ ಮತ್ತೆ ಬಿಡಿಸಿ ರೂಢಿ ಮಾಡಿಕೊಂಡರೆ ಯಾವುದೇ ತೊಂದರೆ ಆಗುವುದಿಲ್ಲ.

ನಾಗರಾಜ, ಗದಗ

ಕೋವಿಡ್‌ ನಂತರ ಬಹುತೇಕ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಕುಂಠಿತಗೊಂಡಿದೆ. ದ್ವಿತೀಯ ಪಿಯು ಪರೀಕ್ಷೆಯ ಪ್ರಶ್ನೆಪತ್ರಿಕೆ ಮಾದರಿ ಸಹ ಬದಲಾಗಿದೆ. ಹೀಗಿರುವಾಗ, ಪರೀಕ್ಷೆಯಲ್ಲಿ ಯಶಸ್ಸು ಗಳಿಸುವುದು ಹೇಗೆ?

ಪರೀಕ್ಷೆಯಲ್ಲಿ ಪ್ರಾಯೋಗಿಕ ಪ್ರಶ್ನೆಗಳೇ ಹೆಚ್ಚಾಗಿ ಇರುವುದರಿಂದ ಸುಲಭವಾಗಿ ಉತ್ತೀರ್ಣರಾಗಬಹುದು. ಬಹು ಆಯ್ಕೆ ಪ್ರಶ್ನೆಗಳತ್ತ ಹೆಚ್ಚು ಗಮನಹರಿಸಬೇಕು. ದೀರ್ಘ ಉತ್ತರ ಬರೆಯಬೇಕಿರುವ ಪ್ರಶ್ನೆಗಳನ್ನೂ ಕೈಬಿಡಬಾರದು. ಇದರಿಂದ ಹೆಚ್ಚು ಅಂಕ ಗಳಿಸಬಹುದು. ಕೋವಿಡ್‌ನಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆ ಆಗಿರುವ ಕಾರಣದಿಂದಲೇ, ಈ ರೀತಿ ಅನುಕೂಲ ಮಾಡಿಕೊಡಲಾಗಿದೆ.

ಮೊಹ್ಸಿನ್, ಹುಬ್ಬಳ್ಳಿ

ಪರೀಕ್ಷಾ ಪದ್ಧತಿಯಲ್ಲಿ ಯಾವ ಬದಲಾವಣೆ ತರಲಾಗಿದೆ? ಈ ಕುರಿತು ನಮಗೆ ಸರಿಯಾದ ಮಾಹಿತಿ ಇಲ್ಲ.

ಬಹು ಆಯ್ಕೆಯ ಪ್ರಶ್ನೆಗಳು ಒಂದೆಡೆ ಆದರೆ, ಉಳಿದ ಭಾಗವೂ ವಿದ್ಯಾರ್ಥಿಗಳಿಗೆ ಅನುಕೂಲ ಆಗುವಂತೆ ಇವೆ. ಈ ಹಿಂದೆ, ಆರು ಪ್ರಶ್ನೆಗಳಲ್ಲಿ ಐದಕ್ಕೆ ಉತ್ತರಿಸುವುದು, ಎಂಟರಲ್ಲಿ ಆರಕ್ಕೆ ಉತ್ತರಿಸಬೇಕಾಗುತ್ತಿತ್ತು. ಆದರೆ ಈ ಬಾರಿ, ಆರರಲ್ಲಿ ಮೂರಕ್ಕೆ ಉತ್ತರಿಸುವುದು, ಎಂಟರಲ್ಲಿ ನಾಲ್ಕಕ್ಕೆ ಉತ್ತರಿಸುವುದು ಹೀಗೆ ಹೆಚ್ಚಿನ ಆಯ್ಕೆಯಅವಕಾಶ ನೀಡಲಾಗಿದೆ. ಇದರಿಂದಾಗಿ,
ಪರೀಕ್ಷಾರ್ಥಿಯು ಇಡೀ ಪಠ್ಯಕ್ರಮ ಓದದೇ, ಒಂದಿಷ್ಟು ಭಾಗ ಓದಿಕೊಂಡಿದ್ದರೂ ಉತ್ತೀರ್ಣವಾಗುವುದು ಸುಲಭವಾಗುತ್ತದೆ.

ಪ್ರವೀಣ್‌, ಧಾರವಾಡ

ಜೀವ ವಿಜ್ಞಾನ (ಬಯಾಲ‌ಜಿ) ಪ್ರಶ್ನೆ ಪತ್ರಿಕೆಯಲ್ಲಿ ಯಾವ ಬದಲಾವಣೆ ಇದೆ?

ಶಬ್ದಗಳ ಬದಲು, ಚಿತ್ರಗಳಿಗೆ (ಡೈಗ್ರಾಮ್‌) ಆದ್ಯತೆ ನೀಡಲಾಗಿದೆ. ಚಿತ್ರಗಳನ್ನು ಬರೆಯುವುದು ಕರಗತ ಮಾಡಿಕೊಂಡರೆ ಜೀವ ವಿಜ್ಞಾನ ಪರೀಕ್ಷೆ ಎದುರಿಸುವುದು ಸುಲಭ. ಜೀವವಿಜ್ಞಾನ ಪ್ರಶ್ನೆಪತ್ರಿಕೆಯ ನೀಲನಕ್ಷೆಯನ್ನು ನಿಮ್ಮ ಕಾಲೇಜಿನ ಉಪನ್ಯಾಸಕರಿಂದ ಪಡೆದುಕೊಂಡು ಹೆಚ್ಚಿನ ಮಾಹಿತಿ ಪಡೆಯಿರಿ.

ಅಭಯ್‌, ಧಾರವಾಡ

ಕನ್ನಡ ವಿಷಯ ಪರೀಕ್ಷೆ ಹೇಗೆ ಇರುತ್ತದೆ?

ಇದರಲ್ಲಿ ಒಂದು ಅಂಕಕ್ಕೆ ಉತ್ತರಿಸುವ ಅವಕಾಶ ಹೆಚ್ಚು ಇರುತ್ತದೆ. ದೀರ್ಘವಾಗಿ ಬರೆಯುವುದು ಬೇಕಿಲ್ಲ. ಬೇರೆಯವರಿಂದ ತಪ್ಪಾದ ಮಾಹಿತಿ ಪಡೆದು, ಅನಗತ್ಯ ಭಯ ಪಡುವುದು ಬೇಡ. ಪರೀಕ್ಷೆ ಮತ್ತು ಪ್ರಶ್ನೆ ಪತ್ರಿಕೆಯ ಮಾದರಿ ಕುರಿತು ಸ್ಪಷ್ಟವಾದ ನೀಲನಕ್ಷೆ ನೀಡಲಾಗಿದೆ. ಅದನ್ನು ಅನುಸರಿಸಿದರೆ ಸಾಕು.

ಮಹಮ್ಮದ್ ಅಜ್ಮಲ್, ಹುಬ್ಭಳ್ಳಿ

ಹೊಸ ಮಾದರಿಯ ಪ್ರಶ್ನೆ ಪತ್ರಿಕೆ ಗಳಿಂದ ವಿದ್ಯಾರ್ಥಿಗಳಲ್ಲಿ ಬರೆಯುವ ಕೌಶಲ ಕಡಿಮೆಯಾಗುವುದಿಲ್ಲವೇ?

ಬಹು ಆಯ್ಕೆಯ ಪ್ರಶ್ನೆ ಪತ್ರಿಕೆಯನ್ನು ನಿಮ್ಮ ಅನುಕೂಲಕ್ಕಾಗಿಯೇ ರೂಪಿಸಲಾಗಿದೆ. ಬಹುಆಯ್ಕೆ ಮಾದರಿ ಇರುವುದು ಇಪ್ಪತ್ತು ಅಂಕಗಳಿಗೆ ಮಾತ್ರ. ಉಳಿದ ಅಂಕಗಳಿಗೆ ದೀರ್ಘ ಉತ್ತರ ಬರೆಯುವುದು ಇದ್ದೇ ಇದೆ. ಹಾಗಾಗಿ ಇದರಿಂದ ನಿಮ್ಮ ಬರವಣಿಗೆ ಕೌಶಲಕ್ಕೆ ಯಾವುದೇ ತೊಂದರೆ
ಆಗುವುದಿಲ್ಲ.

**

‘ಪಾಠ–‌ ಪ್ರವಚನ ಇನ್ನೂ ಅಪೂರ್ಣ’

‘ಹುಬ್ಬಳ್ಳಿಯ ನೆಹರೂ ಕಾಲೇಜಿನಲ್ಲಿ ಈವರೆಗೆ ಪಠ್ಯಕ್ರಮ ಪೂರ್ಣಗೊಳಿಸಿಲ್ಲ, ಪರೀಕ್ಷೆ ಸಮೀಪವಿದೆ. ಏನು ಮಾಡಬೇಕು ಎಂದು ತೋಚುತ್ತಿಲ್ಲ’ ಎಂದು ಕೆಲವು ವಿದ್ಯಾರ್ಥಿಗಳು ಫೋನ್–ಇನ್ ಕಾರ್ಯಕ್ರಮದಲ್ಲೇ ನೇರವಾಗಿ ಆತಂಕ ತೋಡಿಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಉ‍ಪನಿರ್ದೇಶಕರು, ‘ಕೂಡಲೇ ಕ್ರಮ ಕೈಗೊಳ್ಳುತ್ತೇವೆ. ಇನ್ನೂ ಹದಿನೈದು ದಿನಗಳ ಸಮಯವಿದೆ. ಸಂಬಂಧಪಟ್ಟ ವಿಷಯವಾರು ಪರಿಣತರಿಂದ ವಿಶೇಷ ತರಗತಿ ನಡೆಸಲಾಗುವುದು. ಆತಂಕ ಬೇಡ. ಇರುವ ಸಮಯದಲ್ಲಿ ಪಠ್ಯ ಪೂರ್ಣಗೊಳಿಸಲಾಗುವುದು’ ಎಂದು ಅವರ ಆತಂಕ ದೂರಗೊಳಿಸಿದರು.

ಫೋನ್–ಇನ್ ಕಾರ್ಯಕ್ರಮದ ನಂತರ ನೇರವಾಗಿ ಕಾಲೇಜಿಗೆ ಭೇಟಿ ನೀಡಿದ ಅವರು ಪ್ರಾಂಶುಪಾಲರು ಮತ್ತು ಶಿಕ್ಷಕರೊಂದಿಗೆ ಸಮಾಲೋಚನೆ ನಡೆಸಿದರು.

‘ಪಾಠ ಪೂರ್ಣವಾಗಿದೆ. ಆದರೂ ಸಂವಹನ ಕೊರತೆಯಿಂದಾಗಿ ಮಕ್ಕಳಲ್ಲಿ ಕೆಲವು ಗೊಂದಲಗಳು ಉಳಿದುಕೊಂಡಿವೆ. ಅದನ್ನು ನಿವಾರಿಸಲು ಕ್ರಮ ಕೈಗೊಳ್ಳುವಂತೆ ಪ್ರಾಂಶುಪಾಲರು ಮತ್ತು ಉಪನ್ಯಾಸಕರಿಗೆ ಸೂಚನೆ ನೀಡಿದ್ದೇನೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ತಕ್ಷಣದಿಂದಲೇ ಎಂಟು ದಿನಗಳ ವರೆಗೆ ವಿಶೇಷ ತರಗತಿ ನಡೆಸಬೇಕು. ನಮ್ಮ ಕಡೆಯಿಂದಲೂ ಇಬ್ಬರು ಸಂಪನ್ಮೂಲ ವ್ಯಕ್ತಿಗಳನ್ನು ಕಳುಹಿಸುತ್ತೇವೆ. ಅದರ ಜೊತೆಗೆ, ನಿತ್ಯ ಪಾಠ ನಡೆಯುವುದರ ಫೋಟೊ ತೆಗೆದು ಹಾಗೂ ಎಲ್ಲ ವಿದ್ಯಾರ್ಥಿಗಳು ತರಗತಿಗೆ ಹಾಜರಾಗುವಂತೆ ಕ್ರಮ ಕೈಗೊಂಡು ಅವರ ಸಹಿ ಪಡೆದು ನನಗೆ ಕಳುಹಿಸಬೇಕು ಎಂದು ಎಚ್ಚರಿಸಿದ್ದೇನೆ’ ಎಂದರು.

**

ಮೊದಲ ಬಾರಿ ಬಹುಆಯ್ಕೆ ಪ್ರಶ್ನೆ

ಬೇರೆ ರಾಜ್ಯಗಳಲ್ಲಿ ದ್ವಿತೀಯ ಪಿಯುಸಿ ತೇರ್ಗಡೆ ಪ್ರಮಾಣ ಶೇ 90ರಿಂದ ಶೇ 95ರ ವರೆಗೂ ಇದೆ. ಆದರೆ ಕರ್ನಾಟಕದಲ್ಲಿ ಇದು ಶೇ 55ರಷ್ಟು ದಾಟುತ್ತಿಲ್ಲ. ಫಲಿತಾಂಶವನ್ನು ಸುಧಾರಣೆ ಮಾಡುವ ಉದ್ದೇಶದಿಂದ ಇದೇ ಮೊದಲ ಬಹು ಆಯ್ಕೆಯ ಪ್ರಶ್ನೆಗಳನ್ನು ಪರಿಚಯಿಸಲಾಗಿದೆ.

ವಿಜ್ಞಾನ ವಿಭಾಗದಲ್ಲಿ 15 ಅಂಕಗಳಿಗೆ ಬಹುಆಯ್ಕೆ ಪ್ರಶ್ನೆ ಹಾಗೂ 5 ಅಂಕಗಳಿಗೆ ಹೊಂದಿಸಿ ಬರೆಯುವ/ ಬಿಟ್ಟ ಸ್ಥಳ ತುಂಬುವ, ಈ ಹೇಳಿಕೆಗಳು ನಿಜ ಅಥವಾ ಸುಳ್ಳು ಎಂದು ತಿಳಿಸಿ... ಮಾದರಿಯಲ್ಲಿ ಪ್ರಶ್ನೆಗಳು ಇರುತ್ತವೆ. ಆದರೆ ಇದರಿಂದ ವಿದ್ಯಾರ್ಥಿಗಳಿಗೆ ಉತ್ತಮ ಅಂಕ ಪಡೆಯಲು ಸಾಧ್ಯವಾಗುತ್ತದೆ ಹಾಗೂ ಫಲಿತಾಂಶ ಸುಧಾರಿಸಲು ಅನುಕೂಲವಾಗುತ್ತದೆ. ಸಮಯದ ಉಳಿತಾಯ ಆಗುತ್ತದೆ. ಈ ಮೊದಲು ಪ್ರಬಂಧ ರೂಪದ ಉತ್ತರಗಳನ್ನು ಬರೆಯಬೇಕಿದ್ದುದರಿಂದ ಸಮಯ ಸಾಲದೇ ಹೋಗುವುದು ಹೆಚ್ಚಿನ ವಿದ್ಯಾರ್ಥಿಗಳಿಗೆ ದೊಡ್ಡ ತಲೆನೋವಾಗಿತ್ತು.

ಬಹುಆಯ್ಕೆ ಪ್ರಶ್ನೆಗಳಿಗೆ ಕೆಲವೇ ನಿಮಿಷಗಳಲ್ಲಿ ನಿಖರವಾಗಿ ಉತ್ತರಿಸಿದರೆ, ಉಳಿದ ಪ್ರಶ್ನೆಗಳಿಗೆ ಸಾಕಷ್ಟು ಸಮಯ ಸಿಗುತ್ತದೆ. ವಿಜ್ಞಾನ, ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಲ್ಲದೆ, ಕಲಾ ವಿಭಾಗದ ವಿದ್ಯಾರ್ಥಿಗಳಿಗೂ ಈ ಮಾದರಿಯಿಂದ ಅನುಕೂಲವಾಗುತ್ತದೆ.

ಅದೂ ಅಲ್ಲದೆ, ಭವಿಷ್ಯದ ದೃಷ್ಟಿಯಿಂದ ಈ ಮಾದರಿಯ ಪ್ರಶ್ನೆಪತ್ರಿಕೆ ವಿದ್ಯಾರ್ಥಿಗಳಿಗೆ ಸಹಾಯಕವಾಗಲಿದೆ. ನೀಟ್‌, ಕೆ–ಸೆಟ್‌, ಜೆಇಇ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಯೂ ಬಹುಆಯ್ಕೆ ಪ್ರಶ್ನೆಗಳಿರುತ್ತವೆ. ಇದಕ್ಕೆ ಪೂರಕವಾಗಿ ದ್ವಿತೀಯ ಪಿಯುಸಿ ಪ್ರಶ್ನೆಪತ್ರಿಕೆ
ಸಿದ್ಧಗೊಳಿಸಲಾಗಿದೆ.

ಪಿಯು ಮಂಡಳಿ ನೀಡಿರುವ ನೀಲನಕ್ಷೆ ‌ಪ್ರಶ್ನೆಪತ್ರಿಕೆಯಲ್ಲಿ ಯಾವ್ಯಾವ ಪಠ್ಯದಿಂದ ಎಷ್ಟು ಅಂಕಗಳಿಗೆ ಪ್ರಶ್ನೆ ಕೇಳಲಾಗುತ್ತದೆ ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಅದರಂತೆಯೇ, ಪ್ರಶ್ನೆಪತ್ರಿಕೆ ಮಾದರಿ ಇರುತ್ತದೆ. ಇದರಲ್ಲಿ ಎಳ್ಳಷ್ಟೂ ವ್ಯತ್ಯಾಸವಾಗದು.

ಸರ್ಕಾರ ನೀಡಿದ ಪಠ್ಯಪುಸ್ತಕಗಳಿಂದ ಮಾತ್ರ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಲಾಗುತ್ತದೆ. ಅದನ್ನು ಬಿಟ್ಟು ಬೇರೆ ಯಾವುದೇ ಪಠ್ಯಪುಸ್ತಕಗಳನ್ನು ಓದುವ ಅಗತ್ಯವೂ ಇಲ್ಲ.

**

ಮಾನಸಿಕ ಒತ್ತಡ ನಿವಾರಣೆ

ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ಎಷ್ಟೆಲ್ಲ ಪೂರ್ವತಯಾರಿ ಮಾಡಿಕೊಂಡರೂ, ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗುವುದು ಸಹಜ. ವಿದ್ಯಾರ್ಥಿಗಳ ಒತ್ತಡ ನಿವಾರಣೆಗೆಂದೇ ಹಲವು ಕ್ರಮ ಕೈಗೊಳ್ಳಲಾಗಿದೆ.

‘ಪೂರ್ವಸಿದ್ಧತಾ ಪರೀಕ್ಷೆಗಳನ್ನು ನಡೆಸಿ, ಅದರ ಅನುಸಾರ ಮುಖ್ಯ ಪರೀಕ್ಷೆಯಲ್ಲಿ ಯಾವ ರೀತಿ ಉತ್ತರ ಬರೆಯಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಸಲಾಗಿದೆ. ಧಾರವಾಡ ಜಿಲ್ಲೆಯಷ್ಟೇ ಅಲ್ಲದೆ, ಇತರೆ ಜಿಲ್ಲೆಗಳಲ್ಲಿ ನಡೆದ ಪೂರ್ವಸಿದ್ಧತಾ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳನ್ನು ತರಿಸಿಕೊಂಡು, ಅವುಗಳಿಗೆ ಉತ್ತರಿಸುವ ಬಗೆಯನ್ನು ಮಕ್ಕಳಿಗೆ ತಿಳಿಸಲಾಗಿದೆ. ಉಪನ್ಯಾಸಕರು ಸಹ ಪ್ರಮುಖ ಪ್ರಶ್ನೆಗಳಿಗೆ ತಾವೇ ಲಿಖಿತವಾಗಿ ಉತ್ತರಿಸಿ, ಹಂಚಿದ್ದಾರೆ. ಕಾಲೇಜು ಹಂತದಲ್ಲಿ ಮೂರು ತಾಸು ವಿವಿಧ ಪರೀಕ್ಷೆಗಳನ್ನು ನಡೆಸಿ, ಹೇಗೆ ಸ್ಥಿರತೆ ಕಾಯ್ದುಕೊಳ್ಳಬೇಕೆಂಬ ಅರಿವು ಮೂಡಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದರು.

‘ಮಕ್ಕಳ ಒತ್ತಡ ನಿವಾರಿಸಿ, ಗೊಂದಲಕ್ಕೆ ಒಳಗಾಗದೆ ಪರೀಕ್ಷೆ ಬರೆಯಲು ವಿಷಯ ತಜ್ಞರು, ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ ಕೊಡಿಸಲಾಗಿದೆ’ ಎಂದೂ ಹೇಳಿದರು.

**

ಏನು ಮಾಡಬೇಕು; ಏನು ಮಾಡಬಾರದು

lಶಿಸ್ತುಬದ್ಧ ಅಧ್ಯಯನ ಮಾಡಿ

l ನೀಲನಕ್ಷೆ ಪ್ರಶ್ನೆಪತ್ರಿಕೆಯಷ್ಟೇ ಅನುಸರಿಸಿ

l ಹೆದರಿಕೆ, ಆತಂಕ ಬೇಡ#

lಊಹಾಪೋಹಗಳಿಗೆ ಕಿವಿಗೊಡದಿರಿ

l ಗೊಂದಲಗಳಿದ್ದರೆ ಉಪನ್ಯಾಸಕರೊಂದಿಗೆ ಚರ್ಚಿಸಿ

l ತಜ್ಞರ ಮಾರ್ಗದರ್ಶನ ಚಾಚೂತಪ್ಪದೆ ಪಾಲಿಸಿ

l ಎಷ್ಟು ಓದಿರುತ್ತೀರೋ, ಅಷ್ಟನ್ನೂ ತಪ್ಪದೇ ಬರೆಯಿರಿ

l ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಸರ್ಕಾರದ ಪಠ್ಯಪುಸ್ತಕವನ್ನೇ ಓದಿ

**

ಉಪನ್ಯಾಸಕರಿಲ್ಲದ ಕಾಲೇಜುಗಳಿಗೆ ಇತರೆ ಕಾಲೇಜುಗಳ ಉಪನ್ಯಾಸಕರ ಮೂಲಕ ಹಾಗೂ ಅತಿಥಿ ಉಪನ್ಯಾಸಕರನ್ನು ನಿಯೋಜಿಸಿ ಪಠ್ಯಕ್ರಮ ಪೂರ್ತಿಗೊಳಿಸಲಾಗಿದೆ

ಕೃಷ್ಣನಾಯ್ಕ, ಉಪನಿರ್ದೇಶಕ, ಪದವಿಪೂರ್ವ ಶಿಕ್ಷಣ ಇಲಾಖೆ, ಧಾರವಾಡ

**

46– ಜಿಲ್ಲೆಯಲ್ಲಿನ ಒಟ್ಟು ಪರೀಕ್ಷಾ ಕೇಂದ್ರಗಳು

26,931– ಪರೀಕ್ಷೆ ಬರೆಯಲಿರುವ ಒಟ್ಟು ವಿದ್ಯಾರ್ಥಿಗಳು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT