ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಣೆ–ಬೆಂಗಳೂರು ರಸ್ತೆ ಕಾಮಗಾರಿ ಶುರು: ಸತ್ತವರ ಆತ್ಮ ನಿಟ್ಟುಸಿರು ಬಿಟ್ಟಾವೆಂದ ಜನ

ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ‌ಆರಂಭ
Last Updated 10 ಏಪ್ರಿಲ್ 2023, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಅಂತೂ ಇಂತೂ ಹುಬ್ಬಳ್ಳಿ–ಧಾರವಾಡ ನಡುವಿನ ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಷಟ್ಪಥ ರಸ್ತೆ ಕಾಮಗಾರಿ ಆರಂಭವಾಗಿದೆ. ತಾರಿಹಾಳ ಟೋಲ್‌ನಾಕಾ ಸಮೀಪದ ಮೆಟ್ರೊ ಫಿನಿಷ್‌ ಕಂಪನಿ ಬಳಿ ರಸ್ತೆ ವಿಸ್ತರಣೆ ಕಾರ್ಯ ನಡೆಯುತ್ತಿದೆ.

ಷಟ್ಪಥ ರಸ್ತೆಗೆ ಅಗತ್ಯವಿರುವ ಜಾಗ ಸಮತಟ್ಟು ಮಾಡಲಾಗುತ್ತಿದೆ. ಗುಡ್ಡ, ಕಲ್ಲು–ಬಂಡೆಗಳನ್ನು ತೆರವುಗೊಳಿಸ
ಲಾಗುತ್ತಿದೆ. ಈ ಕುರಿತು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟ್ವೀಟ್‌ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಪರ–ವಿರೋಧದ ಚರ್ಚೆ ಜೋರಾಗಿ ನಡೆಯುತ್ತಿವೆ.

‘ಒಂದೂವರೆ ವರ್ಷದ ಹಿಂದೆಯೇ ಕೇಂದ್ರ ಸಾರಿಗೆ ಸಚಿವರು ಕಾಮಗಾರಿಗೆ ಚಾಲನೆ ನೀಡಿದ್ದರು. ತಡವಾಗಿಯಾದರೂ ಕಾಮಗಾರಿ ಆರಂಭ ವಾಗಿದ್ದು ಸಮಾಧಾನ. ಈ ವಿಳಂಬ ನೀತಿಯಿಂದಲೇ ಉತ್ತರ ಕರ್ನಾಟಕ ಹಿಂದುಳಿದಿದೆ ಎನ್ನುವುದು. ಆದಷ್ಟು ಬೇಗ ಕಾಮಗಾರಿ ಮುಕ್ತಾಯವಾಗಲಿ’ ಎಂದು ಟ್ವಿಟ್ಟರ್‌ನಲ್ಲಿ ಸಚಿನ್‌ ಕೆ. ಎಂಬುವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸದಾನಂದ ಕಲಬುರ್ಗಿ ಅವರು, ‘ಈ ಸಾವಿನ ಹೆದ್ದಾರಿಯಲ್ಲಿ ಸತ್ತವರ ಆತ್ಮಗಳು ಚುನಾವಣೆಯಲ್ಲಿ ವೋಟು ಹಾಕದಿದ್ದರೂ, ಈಗ ನಿಟ್ಟುಸಿರು ಬಿಟ್ಟಾವು!’ ಎಂದು ಮರು ಟ್ವೀಟ್‌ ಮಾಡಿದ್ದಾರೆ.

‘ಚುನಾವಣೆ ಬಂದಿದೆ ಎಂದು ಫೋಟೊ ಹಾಕಿ ಕೆಲಸ ಮಾಡ್ತಿದ್ದೀವಿ ಎಂದು ತೋರಿಸೋದಾ? ಬೆಂಗಳೂರು–ಮೈಸೂರು ಎಕ್ಸ್‌ಪ್ರೆಸ್‌ ಮಾರ್ಗ ಐದು ವರ್ಷದಲ್ಲಿ ಮುಗಿಸಿದ್ದಾರೆ. 30 ಕಿ.ಮೀ. ಬೈಪಾಸ್‌ ವಿಸ್ತರಣೆ ಕಾಮಗಾರಿ ಮುಗಿಸೋಕೆ ಹತ್ತು ವರ್ಷಗಳು ಬೇಕು ಅನಿಸುತ್ತೆ’ ಎಂದು ಜಯರಾಜ ವ್ಯಂಗ್ಯವಾಡಿದ್ದಾರೆ.

‘ಚುನಾವಣೆ ಸಮಯದಲ್ಲಿ ಕೆಲಸಗಳನ್ನು ಮಾಡಿಸ್ತೀರಾ ಸಚಿವರೇ? ಭಲೇ ಬುದ್ಧಿವಂತರು ನೀವು. ನಿಮ್ಮ ಕ್ಷೇತ್ರದ ಜನರು ದಡ್ಡರು. ಅವರಿಗೆ ಈ ಕುತಂತ್ರ ಅರ್ಥ ಆಗೋದಿಲ್ಲ’ ಎಂದು ಬ್ರಹ್ಮೇಶ ಅವರು ಕುಟುಕಿದ್ದಾರೆ.

‘ಚುನಾವಣೆ ಸಮಯ ದಲ್ಲಿ ನೆನಪಾಯಿತು. ತರಾತುರಿಯಲ್ಲಿ ಕಾಮಗಾರಿ ಪ್ರಾರಂಭಗೊಂಡಿದೆ’ ಎಂದು ಭಾಸ್ಕರ್‌ ಅವರು ಟ್ವೀಟ್‌ ಮಾಡಿದ್ದರೆ, ಭರತೇಶ ಹೊನ್ನಾವರ, ‘ಬೈಪಾಸ್‌ ಸವಾರರಿಗೆ ಕೊನೆಗೂ ಒಳ್ಳೆಯ ಸುದ್ದಿ ದೊರಕಿದೆ. ಶೀಘ್ರ ಕಾಮಗಾರಿ ಮುಕ್ತಾಯವಾಗುವ ವಿಶ್ವಾಸವಿದೆ’ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

‘ಹುಬ್ಬಳ್ಳಿಯ ಗಬ್ಬೂರು ಕ್ರಾಸ್‌ನಿಂದ ಧಾರವಾಡದ ನರೇಂದ್ರ ಕ್ರಾಸ್‌ವರೆಗಿನ 29.04 ಕಿ.ಮೀ. ಉದ್ದದ ಬೈಪಾಸ್‌ ರಸ್ತೆ ಕಾಮಗಾರಿ ಗುತ್ತಿಗೆಯನ್ನು, ಇಪಿಸಿ(ಎಂಜಿನಿಯರಿಂಗ್‌, ಪ್ರೊಕ್ಯೂರ್‌ಮೆಂಟ್‌ ಆ್ಯಂಡ್‌ ಕನ್‌ಸ್ಟ್ರಕ್ಸನ್‌) ಮಾದರಿಯಲ್ಲಿ ಟೆಂಡರ್‌ ನೀಡಲಾಗಿದೆ. ಕಾಮಗಾರಿ ಮುಕ್ತಾಯಕ್ಕೆ 2.5 ವರ್ಷ ನಿಗದಿಪಡಿಸಲಾಗಿದ್ದು, ನಂತರ ಐದು ವರ್ಷದವರೆಗೆ ಗುತ್ತಿಗೆದಾರರೇ ನಿರ್ವಹಣೆ ಮಾಡುವ ಷರತ್ತು ನೀಡಲಾಗಿದೆ’ ಎಂದು ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.

ಒಂದೇ ಟೋಲ್‌; ವಾಹನ ದಟ್ಟಣೆ ಕಡಿಮೆ: ‘₹1,200 ಕೋಟಿ ವೆಚ್ಚದಲ್ಲಿ ಷಟ್ಪಥದ ಎಕ್ಸ್‌ಪ್ರೆಸ್‌ ಮಾರ್ಗ, ನಾಲ್ಕು ಪಥದ ರಸ್ತೆ ನಿರ್ಮಾಣಕ್ಕೆ ₹800 ಕೋಟಿ ಹಾಗೂ ಭೂ ಸ್ವಾಧೀನ, ಡಿಪಿಆರ್‌ ತಯಾರಿಕೆ, ಇನ್ನಿತರ ಕಾರ್ಯಕ್ಕೆ ₹400 ಕೋಟಿಯನ್ನು ಕೇಂದ್ರ ಸರ್ಕಾರ ನೀಡಿದ್ದು, ಒಟ್ಟು ₹2,400 ಕೋಟಿ ವೆಚ್ಚ ಮಾಡಲಾಗುತ್ತಿದೆ. ಈಗಿರುವ ಬೈಪಾಸ್‌ ಬಳಿಯ ಟೋಲ್‌ ಪ್ಲಾಜಾಗಳನ್ನು ತೆಗೆದು, ಕೆಲಗೇರಿ–ನರೇಂದ್ರ ಕ್ರಾಸ್ ಮಧ್ಯೆ ಟೋಲ್‌ ಪ್ಲಾಜಾ ನಿರ್ಮಿಸಲು ಉದ್ದೇಶಿಸಲಾಗಿದೆ. ಹು-ಧಾ ಮಧ್ಯೆ ಸಂಚರಿಸುವ ಪ್ರಯಾಣಿಕರಿಗೆ ಟೋಲ್‌ ವಿನಾಯಿತಿ ನೀಡಲಾಗುತ್ತದೆ. ಆರು ಪಥದ ಎಕ್ಸ್‌ಪ್ರೆಸ್‌ ರಸ್ತೆ ಹಾಗೂ ಎರಡೂ ಬದಿಯಲ್ಲಿ ದ್ವಿಪಥದ ಸರ್ವಿಸ್‌ ರಸ್ತೆ ನಿರ್ಮಾಣವಾದರೆ, ವಾಹನ ದಟ್ಟಣೆ ಕಡಿಮೆಯಾಗಲಿದೆ’ ಎಂದೂ ಜೋಶಿ ಅಭಿಪ್ರಾಯಪಟ್ಟಿದ್ದಾರೆ.

13 ವರ್ಷಗಳಲ್ಲಿ 400ಕ್ಕೂ ಹೆಚ್ಚು ಸಾವು:

ಹುಬ್ಬಳ್ಳಿ ಮತ್ತು ಧಾರವಾಡ ನಡುವಿನ ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯು ಕಳೆದ 13 ವರ್ಷಗಳಲ್ಲಿ ಬರೋಬ್ಬರಿ 400ಕ್ಕೂ ಹೆಚ್ಚು ಜೀವಗಳನ್ನು ಬಲಿ ಪಡೆದಿದೆ.

2009ರಿಂದ ಈವರೆಗೆ 1,800ಕ್ಕೂ ಹೆಚ್ಚು ಅಪಘಾತಗಳು ನಡೆದಿದ್ದು, 350 ಗಂಭೀರ ಸ್ವರೂಪದ ಅಪಘಾತಗಳು, 950ಕ್ಕೂ ಹೆಚ್ಚು ಸಾಧಾರಣ ಅಪಘಾತಗಳು ನಡೆದಿವೆ. 1,900ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಅವರಲ್ಲಿ 300ಕ್ಕೂ ಹೆಚ್ಚು ಮಂದಿ ಶಾಶ್ವತ ಅಂಗವಿಕಲರಾಗಿದ್ದಾರೆ. ನೂರಕ್ಕೂ ಹೆಚ್ಚು ಮಂದಿ ಅಪ್ಪ–ಅಮ್ಮ, ಪಾಲಕರನ್ನು ಕಳೆದುಕೊಂಡು ಅನಾಥರಾಗಿದ್ದಾರೆ.

ಗಬ್ಬೂರು ಕ್ರಾಸ್‌ನಿಂದ ಧಾರವಾಡದ ನರೇಂದ್ರ ಕ್ರಾಸ್‌ವರೆಗಿನ ಬೈಪಾಸ್‌ನ ದ್ವಿಪಥ ರಸ್ತೆ ರಾಷ್ಟ್ರೀಯ ಹೆದ್ದಾರಿಯಾಗಿದ್ದು, ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಬರಲು ಮತ್ತು ಹೋಗಲು ಒಂದೇ ಮಾರ್ಗವಾಗಿದ್ದು, ಅನೇಕ ಅಡ್ಡ ರಸ್ತೆಗಳು, ತಗ್ಗು–ದಿಬ್ಬಗಳನ್ನು ಹೊಂದಿದೆ. ಅವೈಜ್ಞಾನಿಕವಾಗಿರುವ ಕಿರಿದಾದ ರಸ್ತೆಯಲ್ಲಿ ರಾತ್ರಿ ವೇಳೆ ಹೆಚ್ಚು ಅಪಘಾತಗಳು ನಡೆಯುತ್ತವೆ.

ಐದು ಟೋಲ್‌ ಇರುವ ಈ ರಸ್ತೆಯಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಏರುತ್ತಲೇ ಇದೆ. ಆಟೊ, ಟ್ರ್ಯಾಕ್ಟರ್‌ ಹಾಗೂ ಚಕ್ಕಡಿಗಳಿಗೆ ಪ್ರವೇಶವಿಲ್ಲ. ಆದರೆ, ಅಕ್ಕಪಕ್ಕದ ನಾಲ್ಕು–ಐದು ಹಳ್ಳಿಗಳ ರೈತರಿಗೆ ಕೃಷಿ ಚಟುವಟಿಕೆ ನಡೆಸಲು ಟ್ರ್ಯಾಕ್ಟರ್‌, ಚಕ್ಕಡಿ ಅನಿವಾರ್ಯವಾಗಿದ್ದರಿಂದ ಹಾಗೂ ಪರ್ಯಾಯ ರಸ್ತೆ ಸೌಲಭ್ಯ ಇಲ್ಲದ್ದರಿಂದ ಇದೇ ಬೈಪಾಸ್‌ ರಸ್ತೆ ಬಳಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT