ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

PV Web Exclusive | ನೈರುತ್ಯ ರೈಲ್ವೆಯ ‘ರಾಣಿ’ಗೆ 25ರ ಸಂಭ್ರಮ

ಕರ್ನಾಟಕ–ಮಹಾರಾಷ್ಟ್ರಕ್ಕೆ ಸಂಪರ್ಕ ಸೇತುವೆ, ಉತ್ತರ ಕರ್ನಾಟಕದ ಜನರ ಭಾವನಾತ್ಮಕ ರೈಲು
Last Updated 4 ಸೆಪ್ಟೆಂಬರ್ 2020, 6:44 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಬೆಳಿಗ್ಗೆ ಸಮಯ 5.35 ಆದರೆ ಸಾಕು, ವಾಣಿಜ್ಯ ನಗರಿಯ ರೈಲು ನಿಲ್ದಾಣ ಗಿಜಿಗುಡುತ್ತಿರುತ್ತದೆ. ದೊಡ್ಡ ಸಾಧನೆಯ ಕನಸಿನ ಮೂಟೆ ಹೊತ್ತು ಬೆಂಗಳೂರಿಗೆ ಹೋದವರು, ಪರೀಕ್ಷೆ ಬರೆದ ವಿದ್ಯಾರ್ಥಿಗಳು, ಹೊಟ್ಟೆ ತುಂಬಿಸಿಕೊಳ್ಳಲು ಹೋಗಿ ಊರಿಗೆ ಮರಳಿದವರು, ಉದ್ಯಮಿಗಳು ಹೀಗೆ ಎಲ್ಲ ತರಹದ ಜನ ಎದುರಾಗುತ್ತಾರೆ. ಅವರೆಲ್ಲರನ್ನೂ ಹೊತ್ತು ’ರಾಣಿ’ ನಗರ ಪ್ರವೇಶಿಸುತ್ತಿದ್ದರೆ ಈ ಭಾಗದ ಜನರಿಗೆ ಎಲ್ಲಿಲ್ಲದ ಆನಂದ.

ಹೀಗೆ ಪ್ರತಿದಿನ ಸಂತೋಷ, ಸಡಗರ, ಬದುಕಿನ ಹೊಸ ಕನಸುಗಳನ್ನು ಹೊತ್ತ ಜನರನ್ನು ಕರೆತರುವ ಮತ್ತು ಕರೆದೊಯ್ಯವ ರಾಣಿ ಚನ್ನಮ್ಮ ಎಕ್ಸ್‌ಪ್ರೆಸ್‌ ರೈಲು ಈಗ 25 ವಸಂತಗಳನ್ನು ಪೂರೈಸಿದೆ. ಬೆಳ್ಳಿ ಹಬ್ಬದ ’ಟ್ರ್ಯಾಕ್‌’ನಲ್ಲಿ ಓಡುತ್ತಿರುವ ಈ ರೈಲು ನೈರುತ್ಯ ರೈಲ್ವೆಯ ’ರಾಣಿ’ಯೂ ಹೌದು.

1995ರ ಆಗಸ್ಟ್ 14ರಂದುಆರಂಭವಾದ ರಾಣಿ ಚನ್ನಮ್ಮ ಎಕ್ಸ್‌ಪ್ರೆಸ್‌ ಈ ಭಾಗದ ಜನರಿಗೆ ಸಂಪರ್ಕ ಸೇತುವೆಯಷ್ಟೇ ಅಲ್ಲ; ಸ್ವಾತಂತ್ರ್ಯಕ್ಕಾಗಿ ಹೋರಾಡಿದ ವೀರ ಮಹಿಳೆಯ ಹೆಸರು ರೈಲಿಗೆ ಇರುವ ಕಾರಣ ಈ ರೈಲಿನೊಂದಿಗೆ ಭಾವನಾತ್ಮಕ ಬೆಸುಗೆಯಿದೆ. ಮೀಟರ್‌ ಗೇಜ್‌ನಲ್ಲಿದ್ದ ಈ ರೈಲು ಬಳಿಕ ಬ್ರಾಡ್‌ಗೇಜ್‌ಗೆ ಪರಿವರ್ತನೆಯಾಯಿತು. ಇದಕ್ಕೂ ಮೊದಲು ಕರ್ನಾಟಕ ಎಕ್ಸ್‌ಪ್ರೆಸ್‌, ಡೆಕ್ಕನ್‌ ಎಕ್ಸ್‌ಪ್ರೆಸ್‌ ಮತ್ತು ಕಿತ್ತೂರು ಎಕ್ಸ್‌ಪ್ರೆಸ್ ಎಂದು ಕರೆಯಲಾಗುತ್ತಿತ್ತು.

ಬ್ರಿಟಿಷರ ಕಾಲದಲ್ಲಿ ಮೀಟರ್‌ ಗೇಜ್‌ನಲ್ಲಿ ಈ ರೈಲು ಪುಣೆ–ಬೆಂಗಳೂರು ನಡುವೆ ಸಂಚರಿಸುತ್ತಿತ್ತು. ಪ್ರಯಾಣಿಕರು ಮತ್ತು ಸರಕು ಸಾಗಣೆ ಉದ್ದೇಶದೊಂದಿಗೆ ಸಂಚಾರ ಆರಂಭಿಸಲಾಗಿತ್ತು. ರಾಣಿ ಚನ್ನಮ್ಮ ಎಂದು ಹೆಸರು ಬದಲಾದ ಬಳಿಕ 1995ರಿಂದ 2002ರ ತನಕ ಮಹಾರಾಷ್ಟ್ರದ ಮೀರಜ್‌ನಿಂದ ಬೆಂಗಳೂರಿನ ತನಕ ಸಂಚರಿಸುತ್ತಿತ್ತು. ಅದೇ ವರ್ಷದ ರೈಲ್ವೆ ಬಜೆಟ್‌ನಲ್ಲಿ ಈ ರೈಲನ್ನು ಕೊಲ್ಹಾಪುರದ ತನಕ ವಿಸ್ತರಿಸಲಾಯಿತು. ಈಗಲೂ ಕೊಲ್ಹಾಪುರದ ತನಕ ಹೋಗುತ್ತದೆ.

16589/16590 ರೈಲಿನ ಸಂಖ್ಯೆ ಹೊಂದಿರುವ ರಾಣಿ ಚನ್ನಮ್ಮ ಎಕ್ಸ್‌ಪ್ರೆಸ್‌ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ ನಿತ್ಯ ರಾತ್ರಿ 9.15ಕ್ಕೆ ಹೊರಟು ಮರುದಿನ ಮಧ್ಯಾಹ್ನ 1.40ಕ್ಕೆ ಕೊಲ್ಹಾಪುರಕ್ಕೆ ತಲುಪುತ್ತದೆ. ಕೊಲ್ಹಾಪುರದ ಛತ್ರಪತಿ ಶಾಹು ಮಹಾರಾಜ ರೈಲ್ವೆ ನಿಲ್ದಾಣದಿಂದ ಮಧ್ಯಾಹ್ನ 2:05ಕ್ಕೆ ಹೊರಟು, ಮರುದಿನ ಬೆಳಗ್ಗೆ 6:45 ಗಂಟೆಗೆ ಬೆಂಗಳೂರು ಮುಟ್ಟುತ್ತದೆ. ಒಟ್ಟು 16 ಗಂಟೆಯ ಪ್ರಯಾಣದಲ್ಲಿ 797 ಕಿ.ಮೀ. ಅಂತರ ಚಲಿಸುತ್ತದೆ. ಒಟ್ಟು 29 ನಿಲ್ದಾಣಗಳಲ್ಲಿ ನಿಲುಗಡೆಯಾಗುತ್ತದೆ.

ಕೊಲ್ಹಾಪುರದಿಂದ ಹೊರಡುವಾಗ ಮೀರಜ್‌, ಕುಡಚಿ, ರಾಯಬಾಗ, ಗೋಕಾಕ, ಬೆಳಗಾವಿ, ಖಾನಾಪುರ, ಲೋಂಡಾ, ಅಳ್ನಾವರ, ಧಾರವಾಡ, ಹುಬ್ಬಳ್ಳಿ, ಹಾವೇರಿ, ರಾಣಿಬೆನ್ನೂರು, ಹರಿಹರ, ದಾವಣಗೆರೆ, ಬಿರೂರು, ಕಡೂರು, ಅರಸೀಕೆರೆ, ತಿಪಟೂರು, ತುಮಕೂರು ಮಾರ್ಗದ ಮೂಲಕ ರಾಜ್ಯ ರಾಜಧಾನಿಗೆ ತಲುಪುತ್ತದೆ. ‘ನೈರುತ್ಯ ರೈಲ್ವೆಯ ರಾಣಿಗೆ ಈಗ 25 ವರ್ಷ’ ಎಂದು ರೈಲ್ವೆ ಇಲಾಖೆ ಟ್ವೀಟ್‌ ಮಾಡಿ ಹರ್ಷ ವ್ಯಕ್ತಪಡಿಸಿದೆ.

ಮತ್ತೆ ಆರಂಭದ ನಿರೀಕ್ಷೆಯಲ್ಲಿ: ಕೋವಿಡ್‌ ಹರಡುವಿಕೆ ತಡೆಗಟ್ಟುವ ಭಾಗವಾಗಿ ಸರ್ಕಾರ ದೇಶದಲ್ಲಿ ರೈಲುಗಳ ಸಂಚಾರದ ಮೇಲೆ ನಿರ್ಬಂಧ ವಿಧಿಸಿದೆ. ಹೀಗಾಗಿ 2020ರ ಮಾರ್ಚ್‌ 22ರಿಂದ ರಾಣಿ ಚನ್ನಮ್ಮ ರೈಲಿನ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು, ಈ ಭಾಗದ ಜನ ರೈಲು ಸಂಚಾರ ಆರಂಭದ ನಿರೀಕ್ಷೆಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT