ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈರುತ್ಯ ರೈಲ್ವೆ: ಮಂದಗತಿಯಲ್ಲಿ ರೈಲ್ವೆ ಕಾಮಗಾರಿಗಳು

ಕೊರೊನಾ ಪರಿಣಾಮ: ಉತ್ತರ ಭಾರತದ ಅನುಭವಿ ಕಾರ್ಮಿಕರ ತೀವ್ರ ಕೊರತೆ
Last Updated 18 ಜುಲೈ 2020, 16:50 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ನೈರುತ್ಯ ರೈಲ್ವೆ ವಲಯ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕೆಲ ಕಾಮಗಾರಿಗಳು ಮಂದಗತಿಯಲ್ಲಿ ನಡೆದಿವೆ. ಸೋಂಕಿನ ಪ್ರಭಾವ ಹೀಗೆಯೇ ಮುಂದುವರಿದರೆ ಈ ಅವಧಿ ಇನ್ನಷ್ಟು ಹೆಚ್ಚಾಗಲಿದೆ.

ಹುಬ್ಬಳ್ಳಿ–ಧಾರವಾಡದ ನಡುವೆ 22 ಕಿ.ಮೀ. ಜೋಡಿ ರೈಲು ಮಾರ್ಗ ಅಳವಡಿಕೆ ಕಾರ್ಯ ನಡೆಯುತ್ತಿದೆ. ಬೆಳಗಾವಿಯಲ್ಲಿ ಹೊಸ ರೈಲು ನಿಲ್ದಾಣ ಕಟ್ಟಡ ನಿರ್ಮಾಣವಾಗುತ್ತಿದೆ. ಅವಳಿ ನಗರಗಳ ನಡುವಿನ ಜೋಡಿ ಮಾರ್ಗ ಕಾರ್ಯವನ್ನು ಎರಡು ಹಂತಗಳಲ್ಲಿ ವಿಂಗಡಿಸಲಾಗಿದ್ದು, ಧಾರವಾಡದಿಂದ ಉಣಕಲ್‌ವರೆಗಿನ ಕಾಮಗಾರಿ ಆಗಸ್ಟ್‌ನಲ್ಲಿ, ಹುಬ್ಬಳ್ಳಿ ರೈಲು ನಿಲ್ದಾಣದಿಂದ ಉಣಕಲ್‌ವರೆಗಿನ ಮಾರ್ಗವನ್ನು ಡಿಸೆಂಬರ್‌ ವೇಳೆಗೆ ಪೂರ್ಣಗೊಳಿಸಬೇಕಿದೆ.

2019ರ ಅಕ್ಟೋಬರ್‌ನಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರು ಸೂಚಿಸಿದ್ದ ಬೆಳಗಾವಿಯಲ್ಲಿ ಹೊಸ ರೈಲು ನಿಲ್ದಾಣ ಕಾಮಗಾರಿ ಡಿಸೆಂಬರ್‌ ಅಂತ್ಯದ ವೇಳೆಗೆ ಮುಗಿಯಬೇಕಿದೆ. ಸೋಂಕಿನ ಪ್ರಭಾವ ಹೆಚ್ಚಾಗಿದ್ದರಿಂದ ರೈಲ್ವೆ ಸಂಬಂಧಿತ ಕೆಲಸಗಳಲ್ಲಿ ಮುಂಚೂಣಿಯಲ್ಲಿ ಕೆಲಸ ಮಾಡುತ್ತಿದ್ದ ಒಡಿಶಾ, ‍ಪಶ್ಚಿಮ ಬಂಗಾಳ ಮತ್ತು ಬಿಹಾರದ ಕಾರ್ಮಿಕರು ತಮ್ಮೂರುಗಳಿಗೆ ತೆರಳಿದ್ದಾರೆ. ಅದಲ್ಲದೆ ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಮೇಲಿಂದ ಮೇಲೆ ಮಳೆಯಾಗುತ್ತಿರುವ ಕಾರಣ ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗಿವೆ.

ಕೊಪ್ಪಳ ಜಿಲ್ಲೆಯ ಗಿಣಿಗೇರಾ–ರಾಯಚೂರು ನಡುವಿನ 120 ಕಿ.ಮೀ. ಅಂತರದ ಹೊಸ ಮಾರ್ಗ, ಗದಗ (ತಳಕಲ್‌) –ವಾಡಿ ನಡುವಿನ ಮಾರ್ಗದಲ್ಲಿ ಬರುವ ಯಲಬುರ್ಗಾ, ಕುಷ್ಟಗಿಯಲ್ಲಿ ರೈಲು ಮತ್ತು ಪ್ಲಾಟ್‌ ಫಾರ್ಮ್‌ ನಿರ್ಮಾಣಗಳ ಕೆಲಸಗಳು ಕೂಡ ನಡೆಯುತ್ತಿವೆ. ಈ ಕಾಮಗಾರಿಗಳಿಗೆ ಉತ್ತರ ಭಾರತದ ಅನುಭವಿ ಕಾರ್ಮಿಕರ ಕೊರತೆ ಕಾಡುತ್ತಿದೆ.

ಹುಬ್ಬಳ್ಳಿ–ಧಾರವಾಡ ಜೋಡಿ ಮಾರ್ಗ ಅಳವಡಿಕೆ, ಪ್ಲಾಟ್‌ ಫಾರ್ಮ್‌ ಮತ್ತು ಕಟ್ಟಡ ಕಾಮಗಾರಿಗಳ ಗುತ್ತಿಗೆ ಪಡೆದಿರುವ ವಿ.ಎಸ್‌.ವಿ. ಪ್ರಸಾದ್ ಪ್ರತಿಕ್ರಿಯಿಸಿ ‘ಲಾಕ್‌ಡೌನ್‌ ವೇಳೆ ಬಹಳಷ್ಟು ಕಾರ್ಮಿಕರು ತಮ್ಮೂರುಗಳಿಗೆ ತೆರಳಿದ್ದು, ಸದ್ಯಕ್ಕಂತೂ ಅವರು ಬರುವುದಿಲ್ಲ. ಆದ್ದರಿಂದ ಸದ್ಯಕ್ಕೆ ಸ್ಥಳೀಯ ಕಾರ್ಮಿಕರನ್ನು ಬಳಸಿಕೊಂಡು ಕೆಲಸ ಮಾಡುತ್ತಿದ್ದೇವೆ. ಸುರಕ್ಷತಾ ಅಂತರ ಪಾಲನೆ ಮಾಡಬೇಕಿರುವ ಕಾರಣ ಮೊದಲು 100 ಜನ ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಈಗ 40ರಿಂದ 50 ಜನ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ’ ಎಂದರು.

‘ಬೆಳಗಾವಿ ರೈಲು ನಿಲ್ದಾಣದಲ್ಲಿ ನೆಲಮಹಡಿಯ ಸ್ಲ್ಯಾಬ್‌ ಹಾಕುವ ಕೆಲಸ ಆಗಿದೆ. ಡಿಸೆಂಬರ್‌ ವೇಳೆಗೆ ಈ ಕಾಮಗಾರಿ ಮುಗಿಯಬೇಕಿದ್ದು, ಕೊರೊನಾ ಸೋಂಕು ಮತ್ತು ಮಳೆಗಾಲದ ಕಾರಣದಿಂದ ಮೂರ್ನಾಲ್ಕು ತಿಂಗಳು ವಿಳಂಬವಾಗಬಹುದು. ಧಾರವಾಡ–ಉಣಕಲ್‌ ಜೋಡಿಮಾರ್ಗದ ಕೆಲಸ ನಿಗದಿತ ಸಮಯದ ಒಳಗೆ ಮುಗಿಸಲು ಪ್ರಯತ್ನಿಸುತ್ತಿದ್ದೇವೆ. ಸೋಂಕು ಪತ್ತೆಯಾದ ಆರಂಭದ ದಿನಗಳಲ್ಲಿ ಲಾಕ್‌ಡೌನ್‌ ಘೋಷಿಸಿದ್ದರಿಂದ ಯಂತ್ರಗಳಿಗೆ ಕೆಲಸವಿಲ್ಲದಂತಾಯಿತು. ಇದರಿಂದ ಗುತ್ತಿಗೆದಾರರಿಗೆ ಆರ್ಥಿಕವಾಗಿಯೂ ಹೊರೆಯಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT