ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ | ಕನ್ನಡ ಬೆಳೆಯಲು ಪುಸ್ತಕ ಓದಿ: ಎಸ್.ಎಲ್. ಭೈರಪ್ಪ

ಪ್ರಕಾಶಕರಿಗೆ ಸನ್ಮಾನ ಕಾರ್ಯಕ್ರಮ: ಕಾದಂಬರಿಕಾರ ಎಸ್.ಎಲ್. ಭೈರಪ್ಪ ಸಲಹೆ
Published : 17 ಸೆಪ್ಟೆಂಬರ್ 2024, 16:25 IST
Last Updated : 17 ಸೆಪ್ಟೆಂಬರ್ 2024, 16:25 IST
ಫಾಲೋ ಮಾಡಿ
Comments

ಹುಬ್ಬಳ್ಳಿ: ‘ಪುಸ್ತಕ ಓದದಿದ್ದರೆ ಕನ್ನಡ ಬೆಳೆಯುವುದಿಲ್ಲ. ಪುಸ್ತಕ ಖರೀದಿಸಿ ಓದಬೇಕು’ ಎಂದು ಕಾದಂಬರಿಕಾರ ಎಸ್.ಎಲ್. ಭೈರಪ್ಪ ಸಲಹೆ ನೀಡಿದರು.

ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಂಗಣದಲ್ಲಿ ಡಾ. ಡಿ.ಎಸ್. ಕರ್ಕಿ ಸಾಹಿತ್ಯ ವೇದಿಕೆ ಮತ್ತು ಸಾಹಿತ್ಯ ಪ್ರಕಾಶನವು ಸಾಹಿತ್ಯ ಭಂಡಾರದ ಮ. ಅನಂತಮೂರ್ತಿ ಅವರ ಪುಣ್ಯತಿಥಿ ಅಂಗವಾಗಿ ಮಂಗಳವಾರ ಆಯೋಜಿಸಿದ್ದ ಪ್ರಕಾಶಕರಿಗೆ ಸನ್ಮಾನ, ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ನವೋದಯ ಕಾಲಘಟದಲ್ಲಿ ಹಲವಾರು ಕೃತಿಗಳು ಮೂಡಿಬಂದರೂ, ಸರಿಯಾದ ಪ್ರಕಾಶಕರು ಇರದ ಕಾರಣ ಎಷ್ಟೋ ಸಾಹಿತಿಗಳು ಬರೆಯುವುದನ್ನೇ ನಿಲ್ಲಿಸಿದ್ದರು. ಪುಸ್ತಕ ಪ್ರಕಟ ಮಾಡದಿದ್ದರೆ ಅದು ಕನ್ನಡಕ್ಕೆ ಮಾಡುವ ದ್ರೋಹ ಎಂದು ನಂಬಿದ್ದ ಹೈಕೋರ್ಟ್‌ ನ್ಯಾಯಮೂರ್ತಿ ಹಾಗೂ ರಾಜ್ಯಪಾಲರೂ ಆಗಿದ್ದ ನಿಟ್ಟೂರು ಶ್ರೀನಿವಾಸರಾಯರು ಪುಸ್ತಕ ಪ್ರಕಾಶನ ಸಂಸ್ಥೆಯೊಂದನ್ನು ಆರಂಭಿಸಿದರು. ದೇವುಡು ನರಸಿಂಹಶಾಸ್ತ್ರಿ ಅವರ ಪುಸ್ತಕಗಳನ್ನು ಪ್ರಕಟಿಸಿ, ಸೂಕ್ತ ಗೌರವಧನವನ್ನೂ ನೀಡಿದ್ದರು’ ಎಂದು ಹೇಳಿದರು.

‘ನಾನು ಪರ್ವ ಕಾದಂಬರಿ ಬರೆಯುವಾಗ ಸಾಹಿತ್ಯ ಭಂಡಾರದ ಗೋವಿಂದರಾಯರು ಆರ್ಥಿಕ ನೆರವು ನೀಡಿದ್ದರು. ಪ್ರತಿ ಬಾರಿ ಸರಿಯಾಗಿ ಲೆಕ್ಕಾಚಾರ ಮಾಡಿ, ನೀಡಬೇಕಿದ್ದ ಹಣ ಕೊಡುತ್ತಿದ್ದರು. ಮಹಾರಾಷ್ಟ್ರದ ಪ್ರಕಾಶಕರಲ್ಲಿ ಈ ಪ್ರಾಮಾಣಿಕತೆ ಇದೆ. ಇದು ಎಲ್ಲ ಪ್ರಕಾಶಕರಲ್ಲಿ ಮೂಡಬೇಕಿದೆ’ ಎಂದರು.  

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿ, ಲೇಖಕ ಮಲ್ಲೇಪುರಂ ಜಿ. ವೆಂಕಟೇಶ ಮಾತನಾಡಿ, ‘ಪುಸ್ತಕ ಓದಿನಿಂದಲೇ ಮಾನವನ ವಿಕಾಸವಾಗಿದೆ. ವೈಚಾರಿಕ ಸಂವರ್ಧನೆ, ತಿಳಿವಳಿಕೆ ಪರಿಶುದ್ಧಗೊಳ್ಳಲು ಓದು ಅವಶ್ಯ. ನಮ್ಮಲ್ಲಿ ಓದುವ ಸಂಸ್ಕೃತಿ ನಿಂತಿಲ್ಲ. ಸಾಹಿತ್ಯ ಭಂಡಾರ ಪುಸ್ತಕ‌ ಪ್ರೀತಿ ಹೆಚ್ಚಿಸಿದ್ದು, ರಾಷ್ಟ್ರ ಋಣವನ್ನೂ ತೀರಿಸಿದೆ’ ಎಂದು ತಿಳಿಸಿದರು.

ಸಾಹಿತ್ಯ ವೇದಿಕೆಯ ಎಂ.ಎ. ಸುಬ್ರಹ್ಮಣ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ‘ಓದು ಮಾನಸಿಕ ಸಂಸ್ಕಾರ ನೀಡುತ್ತದೆ. ಬದುಕಿನ ಮಹತ್ವದ ಬದಲಾವಣೆಗೆ ಕಾರಣವಾಗುತ್ತದೆ’ ಎಂದು ಹೇಳಿದರು.

ಬೆಂಗಳೂರಿನ ಭಾರತ ದರ್ಶನ ಪ್ರಕಾಶನದ ವ್ಯವಸ್ಥಾಪಕ ಸಂಪಾದಕ ಯೋಗಾನರಸಿಂಹ ಅವರಿಗೆ ಗೌರವ ಸಮರ್ಪಿಸಲಾಯಿತು. ‘ಕುಮಾರವ್ಯಾಸನ ನುಡಿಮುತ್ತುಗಳು ಭಾಗ–2’, ‘ಕೃಷ್ಣಾರ್ಜುನರ ಸ್ನೇಹ ಕಲಹ ಹಾಗೂ ಇತರ ಲೇಖನಗಳು’, ‘ನಾನು ಭೀಷ್ಮ’, ‘ಮಹಾತ್ಮ ವಿದುರ’, ‘ಅಶ್ವತ್ಥಾಮ–ಯಾತನೆಯ ಅಮರತ್ವ’, ‘ಶಿವಮಾರ ಸೈಗೊಟ್ಟ’, ‘ಹೊಯ್ಸಳ ವಿಷ್ಣುವರ್ಧನ’, ‘ಒಂದಿಷ್ಟು ಸ್ವಗತಗಳು–ಬೆಳೆಯುತ್ತಿರುವ ಯೋಗಿಯೊಬ್ಬರ ದಿನಚರಿ–ಆರ್‌.ಡಿ. ರಾನಡೆ’, ಕೃತಿಗಳನ್ನು ಬಿಡುಗಡೆ ಮಾಡಲಾಯಿತು.

ಗೋಪಾಲಕೃಷ್ಣ ಹೆಗಡೆ, ಬಿ.ಎಸ್.‌ ಮಾಳವಾಡ, ಕೆಸಿಸಿಐ ಅಧ್ಯಕ್ಷ ಎಸ್.ಪಿ. ಸಂಶಿಮಠ, ಕಾರ್ಯದರ್ಶಿ ರವೀಂದ್ರ ಬಳಿಗಾರ ಪಾಲ್ಗೊಂಡಿದ್ದರು.

ಕುಮಾರವ್ಯಾಸ ಭಾರತ ಅತ್ಯಂತ ಶ್ರೇಷ್ಠ ಕೃತಿ. ಎಲ್ಲರೂ ಕೃತಿಯನ್ನು ಓದಬೇಕು. ಸಾಹಿತ್ಯ ಭಂಡಾರ ಚಿರಸ್ಥಾಯಿಯಾಗಲಿ

– ಮಧುಕರ ಯಕ್ಕುಂಡಿ ಲೇಖಕ

ಸಾಹಿತ್ಯದ ಓದು ವ್ಯಕ್ತಿಯ ಮನಸ್ಸು ನಿರ್ಧಾರವನ್ನು ಬದಲಿಸುತ್ತದೆ. ಕಷ್ಟದ ಸಮಯದಲ್ಲಿ ಸಾಂತ್ವನ ಧೈರ್ಯ ನೀಡುತ್ತದೆ

-ಎಸ್.ಎಲ್.ಎಂ. ಪಾಟೀಲ ಲೇಖಕ

‘ಪುಸ್ತಕ ಓದಲು ಮಕ್ಕಳ ಪ್ರೇರೇಪಿಸಿ’ ‘ಕಥೆಗಳ ಮೂಲಕ ಮಕ್ಕಳಿಗೆ ಪರಿಸರದ ಅರಿವನ್ನು ಪರಿಣಾಮಕಾರಿಯಾಗಿ ಮೂಡಿಸಬಹುದು. ಭಾರತದ ಪುರಾಣಗಳಲ್ಲಿ ಇಂತಹ ಕಥೆಗಳಿವೆ. ಆದರೆ ಇಂದಿನ ಮಕ್ಕಳಿಗೆ ಪುರಾಣಗಳು ತಲುಪುತ್ತಿಲ್ಲ’ ಎಂದು ಪರಿಸರ ತಜ್ಞ ಬರಹಗಾರ ಶಿವಾನಂದ ಕಳವೆ ನುಡಿದರು. ‘ಶಿಕ್ಷಕರು ಪುಸ್ತಕಗಳನ್ನು ಓದಬೇಕು. ಪುಸ್ತಕ ಓದಲು ಮಕ್ಕಳನ್ನು ಪ್ರೇರೇಪಿಸಬೇಕು. ಓದುವ ಹುಚ್ಚು ಹಿಡಿಸಬೇಕು. ಪರಂಪರೆಯ ಜ್ಞಾನವನ್ನು ಮುಂದಿನ ಪೀಳಿಗೆಗೆ ದಾಟಿಸಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT