ತೇರು ಮುಖ್ಯದ್ವಾರದವರೆಗೆ ಬಂದು, ಮರಳಿ ಹೋಗುವಾಗ ತೇರಿಗೆ ಮೇಲಿನಿಂದ ಹೂ ಮಳೆ ಸುರಿದಾಗ ಭಕ್ತರು ಜಯಘೋಷ ಹಾಕಿ ಸಂಭ್ರಮಿಸಿದರು. ರಥಕ್ಕೆ ಉತ್ತುತ್ತಿ, ಬಾಳೆ ಹಣ್ಣು ಹಾಗೂ ನಿಂಬೆ ಹಣ್ಣು ಎಸೆದು ಸಂಭ್ರಮಿಸಿದರು. ರಥದ ಹಾದಿಯುದ್ದಕ್ಕೂ ಹೆಜ್ಜೆಮೇಳ, ಡೊಳ್ಳು ಕುಣಿತ, ಹಲಗಿ ಬಡಿತದ ಜಾನಪದ ಕಲಾತಂಡಗಳು ಜಾತ್ರೆಗೆ ವಿಶೇಷ ಮೆರಗು ತಂದವು. ಎಲ್ಲರ ಬಾಯಲ್ಲೂ ಶಿವಾಯ ನಮಃ ಸ್ಮರಣೆ ಕೇಳಿ ಬರುತ್ತಿತ್ತು.