ಶನಿವಾರ, ಆಗಸ್ಟ್ 24, 2019
27 °C
ಹುಬ್ಬಳ್ಳಿ–ಧಾರವಾಡ ಮೆಟ್ರೊ

ಶ್ರಾವಣದಲ್ಲಿ ಸೋಮೇಶ್ವರನಿಗೊಂದು ನಮನ

Published:
Updated:
Prajavani

ಊರಿಗೊಂದು ಇತಿಹಾಸವಿರುತ್ತದೆ. ಪೌರಾಣಿಕ ಕತೆಗಳು, ದಂತ ಕಥನಗಳಿರುತ್ತವೆ. ಹಾಗೆ ಧಾರವಾಡದಲ್ಲಿ ಶಾಲ್ಮಲೆಯ ಮಡಿಲಲ್ಲಿರುವ ಶಿವಕ್ಷೇತ್ರ ಸೋಮೇಶ್ವರಕ್ಕೂ  ಅಂಥದೊಂದು ಇತಿಹಾಸವಿದೆ. ಪೌರಾಣಿಕ ಕಥೆ ಇದೆ. ಭಕ್ತರಿಗೆ ಅಭಯವನ್ನು ನೀಡುವ ಶಿವನ ಆರಾಧನೆಯು ಧಾರವಾಡದ ಸೋಮೇಶ್ವರ ಕ್ಷೇತ್ರದಲ್ಲಿ ಶ್ರಾವಣ ಮಾಸದಲ್ಲಿ ಮತ್ತು ಶಿವರಾತ್ರಿಯ ದಿನ ಬಹಳ ಭಕ್ತಿಯಿಂದ ವಿಜೃಂಭಣೆಯಿಂದ ನಡೆಯುತ್ತದೆ. ಒಂದು ಕಾಲಕ್ಕೆ ಇದು ಧಾರವಾಡದಿಂದ ದೂರದಲ್ಲಿತ್ತು. ಆದರೆ ಈಗ ಊರ ಪಕ್ಕದಲ್ಲಿರಲು ಕಾರಣ ಇಲ್ಲಿ ಹಬ್ಬುತ್ತಿರುವ ಬಡಾವಣೆಗಳು. ಸಹ್ಯಾದ್ರಿಯ ಸಾಲು ಪರ್ವತದ ಶ್ರೇಣಿಯ ಅಡಿಯಲ್ಲಿರುವ ಭತ್ತದ ಗದ್ದೆಗಳ ಮಧ್ಯ ಉದ್ಭವಿಸಿದ ಶಾಲ್ಮಲೆಯ ತೀರ್ಥ ಕ್ಷೇತ್ರದಲ್ಲಿಯೇ ಸೋಮೇಶ್ವರನ ವಾಸ!

ಸೋಮೇಶ್ವರವು 12ನೇ ಶತಮಾನದಲ್ಲಿಯೇ ಕಟ್ಟಲಾದ ಶಿವಮಂದಿರವು. ಇದಕ್ಕೆ ಪುರಾಣದ ಹಿನ್ನೆಲೆ ಇದೆ. ಉತ್ತರ ಭಾರತದ ಹಿಮಾಲಯದ ತಪ್ಪಲು ಪ್ರದೇಶದಲ್ಲಿ 3,000 ವರ್ಷಗಳ ಹಿಂದೆ ಒಂದು ಸಲ ಎಲ್ಲ ತಪಸ್ವಿಗಳು, ಋಷಿ ಮುನಿಗಳು ಸಭೆ ಸೇರಿದರು. ಇವರು ತಮ್ಮ ತಪದಲ್ಲಿ ಸಿದ್ಧಿ ಪಡೆದ ಜ್ಞಾನವನ್ನು, ತತ್ವಗಳನ್ನು ಸಾಮಾನ್ಯ ಜನರಿಗೆ ಮುಟ್ಟಿಸಲು ಹೊರಟರು. ಋಷಿಗಳಲ್ಲಿ ಶ್ರೇಷ್ಠರಾದ ಅಗಸ್ತ್ಯ ಮುನಿಗಳಿಗೆ ದಕ್ಷಿಣ ಭಾರತದ ಕಡೆಗೆ ಹೋಗಿ ಜನೋದ್ಧಾರದ ಕೆಲಸ ಮಾಡಬೇಕೆಂದು ನಿರ್ಣಯಿಸಲಾಗಿ ಅವರು ದಕ್ಷಿಣಾಭಿಮುಖವಾಗಿ ಬಂದರು. ಹೀಗೆ ಸಂಚರಿಸುವಾಗ ರಾಜಕುಮಾರಿ ಲೋಪಾಮುದ್ರಾಳ ಜೊತೆ ಇವರ ವಿವಾಹವೂ ಆಯ್ತು. ದಂಪತಿ  ಪ್ರಯಾಣ ಮಾಡುತ್ತ ಧಾರವಾಡದ ಈಗಿನ ಸೋಮೇಶ್ವರದ ಹತ್ತಿರದಲ್ಲಿ ಒಂದು ಪುಟ್ಟ ಗ್ರಾಮಕ್ಕೆ ಬಂದರು. ಅಗಸ್ತ್ಯರು ಸಂಜೆಯಾಗುತ್ತಿದ್ದಂತೆ ಇಲ್ಲಿ ತಂಗಲು ನಿರ್ಧರಿಸಿ ಸಂಧ್ಯಾವಂದನೆಗೆ ಸಿದ್ಧರಾಗತೊಡಗಿದಾಗ ಪತ್ನಿ ಲೋಪಾಮುದ್ರೆ ನಕ್ಕು ಕೇಳಿದಳು–’ನಿಮ್ಮ ಸಂಧ್ಯಾವಂದನೆಗೆ ಎಲ್ಲಿದೆ ಶಿವಲಿಂಗ! ಎಲ್ಲಿದೆ ಗಂಗಾಜಲ?‘ ಎಂದಾಗ ತಮ್ಮ ತಪಃಶಕ್ತಿಯಿಂದ ಎದುರಿಗೆ ಶಿವಲಿಂಗ ಸ್ಥಾಪಿಸಿ ಅದರ ಎದುರಿಗೆ ಗಂಗೆಯನ್ನು ಆಹ್ವಾನಿಸಿದರಂತೆ. ಅದೇ ಇಂದಿನ ಗುಡಿಯ ಮುಂದಿನ ಪುಷ್ಕರಣಿ. ಇದು ಸೋಮೇಶ್ವರನ ಉದ್ಭವದ ಕಥೆ.

ಇತಿಹಾಸದ ದೃಷ್ಟಿಯಿಂದ ಈ ದೇಗುಲವು ಚಾಲುಕ್ಯರ ಶಿಲ್ಪ ಶೈಲಿಯಲ್ಲಿ ನಿರ್ಮಿಸಿದ 12ನೇ ಶತಮಾನದ ದೇಗುಲ. ಆಗಿದ್ದ ಗ್ರಾಮ ಇಂದಿಲ್ಲ. ಗರ್ಭಗುಡಿಯಲ್ಲಿಯ ಪಾಣಿ ಪೀಠದಲ್ಲಿ ಕಣ್ಣು ತುಂಬುವಂತೆ ಬೃಹದಾಕಾರದ ಲಿಂಗವಿದೆ. ನವರಂಗದ ಮಧ್ಯದಲ್ಲಿ ಚಾಲುಕ್ಯ ಶೈಲಿಯ ನಾಲ್ಕು ಕಲಾತ್ಮಕ ಕೆತ್ತನೆಯ ಸ್ತಂಭಗಳಿವೆ. ಚಾವಣಿಯಲ್ಲಿ ಬಹುದಳದ ಕಮಲವು ಕೆಳಮುಖದಲ್ಲಿ ಕೆತ್ತಲ್ಪಟ್ಟಿದೆ. ಗರ್ಭಗುಡಿಯ ದ್ವಾರದ ಎಡಕ್ಕೆ ಗಣೇಶ, ಬಲಭಾಗದಲ್ಲಿ ಮಹಿಷಾಷುರ ಮರ್ದಿನಿಯ ಸುಂದರ ಮೂರ್ತಿಗಳಿವೆ. ಎದುರಿಗೆ ನಂದಿಯೂ ರಾರಾಜಿಸುತ್ತಾನೆ. ಗುಡಿಯ ಪುನರುದ್ವಾರದ ಭಾಗವಾಗಿ ಶಿವನ ಹಲವು ರೂಪಗಳ ಅತ್ಯಂತ ಆಕರ್ಷಕವಾದ ಚಿಕ್ಕ ಚಿಕ್ಕ ಮೂರ್ತಿಗಳಿವೆ. ಗುಡಿಯ ಪ್ರವೇಶದ್ವಾರದ ಲಲಾಟದಲ್ಲಿ ಗಣೇಶನ ಶಿಲ್ಪವಿದೆ. ಎದುರಿಗಿದ್ದ ಕಲ್ಯಾಣಿಗೆ ಇಳಿದು ಹೋಗಲು ಮೆಟ್ಟಿಲಿದ್ದು ಈಗ ಪ್ರವೇಶ ನಿಷೇಧವಿದೆ. ಹತ್ತಿರದಲ್ಲಿ ಹನಮಂತ ದೇವರು, ಅನ್ನಪೂರ್ಣೆಶ್ವರಿ, ವೀರಭದ್ರ, ರೇಣುಕರು ಮತ್ತು ಶನಿಶ್ವರನಿಗಾಗಿ ಪ್ರತ್ಯೇಕ ಮಂದಿರಗಳಲ್ಲದೆ ನವಗ್ರಹಗಳಿಗಾಗಿ ಮಂಟಪವಿದೆ.

ಸೋಮೇಶ್ವರ ಕ್ಷೇತ್ರದ ಹತ್ತಿರದಲ್ಲೇ ಉದ್ಭವಿಸಿದ ಶಾಲ್ಮಲೆ ಗುಪ್ತಗಾಮಿನಿಯಾಗಿ ನಂತರ ಉತ್ತರ ಕನ್ನಡದಲ್ಲಿ ಗಂಗಾವಳಿಯಾಗಿ ಹರಿದಿದ್ದಾಳೆ. ನಮ್ಮೂರ ಕವಿ ಬೇಂದ್ರೆಯವರು ಶ್ರಾವಣದ ಸೋಮೇಶ್ವರನ ನೆನಪಿನಲ್ಲಿ ಬರೆದ ಸಣ್ಣ ಸೋಮವಾರ ಕವಿತೆ ಈ ಸ್ಥಳದ ಮೌಲಿಕತೆಯನ್ನು ತಿಳಿಸುವಂಥ ಅವಿಸ್ಮರಣೀಯ ಕವಿತೆಯಾಗಿದೆ.

ಶ್ರೀಕ್ಷೇತ್ರ ಸೋಮೇಶ್ವರದಲ್ಲಿ ಪ್ರತಿ ಸೋಮವಾರಸಂಜೆ ಆರು ಗಂಟೆಗೆ ಪಲ್ಲಕಿ ಸೇವೆ ಇರುತ್ತದೆ. ಸಾವಿರಾರು ಜನ ಭಕ್ತರು ಶ್ರದ್ಧೆಯಿಂದ ದೇವದರ್ಶನ ಪಡೆಯಲು ದೂರ ದೂರದಿಂದ ಬರುವರು. ಶ್ರಾವಣದ ಪ್ರತಿದಿನವೂ ಶಿವನಿಗೆ, ಸೋಮೇಶ್ವರನಿಗೆ ವಿಶೇಷ ಪೂಜೆ ಸಲ್ಲುತ್ತದೆ. ಪ್ರವಚನಗಳು ನಡೆಯುತ್ತವೆ. ಶಿವರಾತ್ರಿಯ ದಿನ ಹಗಲು ರಾತ್ರಿ ಶಿವಾರಾಧನೆ ಮಾಡಲು ಬರುವ ಜನಸ್ತೋಮ ಬಹಳ ದೊಡ್ಡದು. ಇಲ್ಲಿ ವಿವಾಹಕ್ಕಾಗಿ ವಿವಾಹ ಭೋಜನಕ್ಕಾಗಿ ವಿಶಾಲ ಸಭಾಗ್ರಹಗಳಿವೆ. ದೇವರ ಸನ್ನಿಧಿಯಲ್ಲಿ ನೂರಾರು ವಿವಾಹಗಳಾಗುತ್ತವೆ. ಬಿಲ್ವಪತ್ರೆಯ ಗಿಡಗಳು, ಅರಳಿ, ಆಲ, ತೆಂಗಿನ ಮರಗಳಿಂದ ತುಂಬಿದ ಈ ಕ್ಷೇತ್ರಕ್ಕೆ ಎರಡು ಸುಂದರ ಮಹಾದ್ವಾರಗಳಿವೆ. ಒಂದು ಸೋಮೇಶ್ವರ ಮಂದಿರದ ಹತ್ತಿರದಲ್ಲಿದ್ದು, ಇನ್ನೊಂದು ಹೆದ್ದಾರಿ ಮೇಲೆ ಧರ್ಮಸ್ಥಳದ ಎಂಜಿನಿಯರಿಂಗ್‌ ಕಾಲೇಜಿನ ಪಕ್ಕದಲ್ಲಿರುವ ವಿಶಾಲ ಪ್ರವೇಶದ್ವಾರವು ಭಕ್ತರನ್ನು, ಹೊರನಾಡ ಅತಿಥಿಗಳನ್ನು ಕೈಬೀಸಿ ಕರೆಯುತ್ತಿದೆ.

ಮಹಾನಗರ ಪಾಲಿಕೆಯಾಗಲಿ, ಭಕ್ತರಾಗಲಿ ಒಂದುಗೂಡಿ ಶ್ರಾವಣ ಮಾಸದಲ್ಲಿ, ಭಕ್ತರಿಗಾಗಿ ಪ್ರವಚನಗಳ, ಭಾಷಣಗಳ ವ್ಯವಸ್ಥೆ ಮಾಡಬಹುದು. ದೂರದಿಂದ ಬಂದ ಭಕ್ತರ ವಾಸಕ್ಕಾಗಿ ವಸತಿಗೃಹದ ನಿರ್ಮಾಣವೂ ಆಗಬೇಕಿದೆ.

ನಮ್ಮ ಈ ಸೋಮೇಶ್ವರನ ಆವಾಸ, ಶಾಲ್ಮಲೆಯ ಸಹವಾಸದಿಂದ ಧಾರವಾಡಿಗರು ಧನ್ಯರಾಗಿದ್ದಾರೆ. ಕಾಡಿನಲ್ಲಿ ವಾಸವಾಗಿದ್ದ ಈ ಸೋಮೇಶ್ವರನ ಮಂದಿರ ಇಲ್ಲಿದೆ ಎಂಬುದು ಇನ್ನೂ ಅನೇಕರು ಅರಿಯದ್ದು ವಿಷಾದದ ಸಂಗತಿ.

Post Comments (+)