ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ಯಾಜ್ಯ ಘಟಕದಿಂದ ಹೊಗೆ: ಸ್ಥಳೀಯರಲ್ಲಿ ಆತಂಕ

ದಿಢೀರ್‌ ಪ್ರತಿಭಟನೆ; ಟ್ರಾಫಿಕ್‌ ಜಾಮ್‌; ಅಧಿಕಾರಿಗಳಿಂದ ಭರವಸೆ
Last Updated 31 ಜನವರಿ 2023, 6:19 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನಗರದ ಕಾರವಾರ ರಸ್ತೆಯ ಅಂಚಟಗೇರಿ ಬಳಿಯ ಘನತ್ಯಾಜ್ಯ ವಿಲೇವಾರಿ ಘಟಕದಿಂದ (ಹೇಸಿಗೆ ಮಡ್ಡಿ) ಏಳುವ ವಿಷಕಾರಿ ಹೊಗೆಯಿಂದ ತಮಗೆ ತೊಂದರೆಯಾಗುತ್ತಿದೆ ಎಂದು ಸುತ್ತಮುತ್ತಲಿನ ನಿವಾಸಿಗಳು ಘಟಕದ ಪ್ರವೇಶ ದ್ವಾರದ ಬಳಿ ಸೋಮವಾರ ದಿಢೀರ್‌ ಪ್ರತಿಭಟನೆ ನಡೆಸಿದರು.

ಕಸ ಚೆಲ್ಲಲು ಬರುತ್ತಿದ್ದ ಆಟೊ ಟಿಪ್ಪರ್‌ಗಳು ಘಟಕದೊಳಗೆ ಪ್ರವೇಶಿಸದಂತೆ ಹಾಗೂ ಕಾರವಾರ ರಸ್ತೆಯಲ್ಲಿ ವಾಹನಗಳ ಸಂಚಾರ ಸ್ಥಗಿತಗೊಳಿಸಿ ದಿಢೀರ್‌ ಪ್ರತಿಭಟನೆ ನಡೆಸಿದರು. ಎರಡು ಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದ ಪರಿಣಾಮ, ರಸ್ತೆಯ ಎರಡೂ ಬದಿ ಎರಡು ಕಿ.ಮೀ.ನಷ್ಟು ಉದ್ದ ಟ್ರಾಫಿಕ್‌ ಜಾಮ್‌ ಆಗಿತ್ತು.

ತ್ಯಾಜ್ಯಕ್ಕೆ ಬೆಂಕಿ ಹಾಕುವುದು ನಿಲ್ಲಿಸಿ, ನಾಯಿಗಳ ಹಾವಳಿಗೆ ಕಡಿವಾಣ ಹಾಕಬೇಕು ಎಂದು ಫಲಕ ಪ್ರದರ್ಶಿಸಿದರು.

ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಮಸ್ಯೆ ಎದುರಿಸುವಂತಾಗಿದೆ. ಹತ್ತಾರು ಕೋಟಿ ರೂಪಾಯಿ ವೆಚ್ಚ ಮಾಡಿ ಘಟಕದಲ್ಲಿ ಅಳವಡಿಸಿರುವ ಯಂತ್ರಗಳು ತುಕ್ಕು ಹಿಡಿಯುತ್ತಿವೆ ಎಂದು ಆರೋಪಿಸಿದರು. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ವೃದ್ಧೆಯೊಬ್ಬರು ಆಸ್ಪತ್ರೆಯ ದಾಖಲೆಗಳನ್ನು ತೋರಿಸಿ, ಅಳಲು ತೋಡಿಕೊಂಡರು.

‘ಸಮರ್ಪಕ ಕಸ ವಿಲೇವಾರಿ ಸಾಧ್ಯವಾಗದ ಕಾರಣ, ನಿತ್ಯ ಸಂಜೆ ಕಸದ ರಾಶಿಗೆ ಬೆಂಕಿ ಹಾಕುತ್ತಾರೆ. ಹೊಗೆಯಿಂದ ಮಕ್ಕಳ, ವೃದ್ಧರ ಆರೋಗ್ಯ ಹಾಳಾಗುತ್ತಿದೆ. ಬೆಂಕಿ ಹಾಕಬೇಡಿ ಎಂದು ವಿನಂತಿಸಿದರೂ ಪ್ರಯೋಜನವಾಗಿಲ್ಲ. ಅನಿವಾರ್ಯವಾಗಿ ಬೀದಿಗೆ ಬಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದೇವೆ’ ಎಂದು ಸ್ಥಳೀಯ ನಿವಾಸಿ ಪುಟ್ಟಮ್ಮ ಹೇಳಿದರು.

ಪ್ರತಿಭಟನಾಕಾರರಿಗೆ ಬೆಂಬಲ ಸೂಚಿಸಿ ಮಾತನಾಡಿದ ಕಾಂಗ್ರೆಸ್‌ ಮುಖಂಡ ನಾಗರಾಜ ಗೌರಿ, ‘ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಶಕೀಲ್ ಅಹ್ಮದ್ ಅವರು ವರ್ಗವಾದ ನಂತರ ತ್ಯಾಜ್ಯ ಘಟಕದಲ್ಲಿ ನಿರ್ವಹಣೆಯೇ ಇಲ್ಲದಂತಾಗಿದೆ. ಇತರ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿಲ್ಲ’ ಎಂದರು.

ಪಾಲಿಕೆ ಎಂಜಿನಿಯರ್‌ಗಳಾದ ಸಂತೋಷ ಯರಂಗಳಿ ಮತ್ತು ಮಲ್ಲಿಕಾರ್ಜುನ ಅವರು 10 ದಿನಗಳಲ್ಲಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ನಿಗದಿತ ಕಾಲಾವಧಿಯಲ್ಲಿ ಬೇಡಿಕೆ ಈಡೇರದಿದ್ದರೆ ಮತ್ತೆ ಪ್ರತಿಭಟಿಸುವ ಎಚ್ಚರಿಕೆ ನೀಡಿ, ಪ್ರತಿಭಟನೆ ಹಿಂಪಡೆದರು.

ಪ್ರತಿಭಟನೆಯಲ್ಲಿ ಸುಭಾಷನಗರ, ದೇವರಗುಡಿಯಾಳ ರಸ್ತೆ, ಯುಕೆಟಿ ಹಿಲ್ಸ್‌, ಸಿಮ್ಲಾ ನಗರ, ಆನಂದನಗರ, ಇಂಡಿಪಂಪ್‌, ಬಾಫನಾ ನಗರ, ಸಾದತ್ತ ಕಾಲೊನಿ ನಿವಾಸಿಗಳು ಹಾಗೂ ಕಾಂಗ್ರೆಸ್‌ನ ದೀಪಾ ಗೌರಿ ಇದ್ದರು.

‘ಕಸ ಬೇರ್ಪಡಿಸದಿರುವುದೇ ಸಮಸ್ಯೆಗೆ ಕಾರಣ’

ಹುಬ್ಬಳ್ಳಿ ನಗರದಲ್ಲಿ ಪ್ರತಿದಿನ 300 ಟನ್‌ ಘನತ್ಯಾಜ್ಯ ಸಂಗ್ರಹವಾಗುತ್ತಿದ್ದು, ಬಹುತೇಕ ನಿವಾಸಿಗಳು ಒಣ ಹಾಗೂ ಹಸಿ ತ್ಯಾಜ್ಯವನ್ನು ಬೇರ್ಪಡಿಸಿ ನೀಡುತ್ತಿಲ್ಲ. ತ್ಯಾಜ್ಯ ಸಂಗ್ರಹ ಘಟಕಗಳಲ್ಲಿ ಅವುಗಳನ್ನು ವಿಂಗಡಿಸುವುದು ಕಷ್ಟ. ಹಸಿ ತ್ಯಾಜ್ಯವನ್ನು ಮಾತ್ರ ಯಂತ್ರದ ಮೂಲಕ ವಿವಿಧ ಪ್ರಕ್ರಿಯೆಗಳಿಗೆ ಒಳಪಡಿಸಿ ಗೊಬ್ಬರ ತಯಾರಿಸಬಹುದು. ಒಣ ಕಸವೂ ಇರುವುದರಿಂದ ಸಮಸ್ಯೆಯಾಗುತ್ತಿದೆ. ಹಾಗಾಗಿ ಕಸ ಸಂಗ್ರಹದ ಮೂಲದಲ್ಲಿಯೇ ಕಠಿಣ ಕ್ರಮ ಕೈಗೊಳ್ಳಲು ಪಾಲಿಕೆ ಮುಂದಾಗಲಿದೆ’ ಎಂದು ತ್ಯಾಜ್ಯ ನಿರ್ವಹಣಾ ವಿಭಾಗದ ಎಂಜಿನಿಯರ್‌ ಸಂತೋಷ ಯರಂಗಳಿ ಹೇಳಿದರು.

‘ಘನತ್ಯಾಜ್ಯ ಸಂಗ್ರಹ, ವಿಲೇವಾರಿ ಘಟಕದಲ್ಲಿ ಹೊಗೆ ಏಳದಂತೆ ಅಗತ್ಯ ಕ್ರಮ ಕೈಗೊಳ್ಳುತ್ತೇವೆ. ಇಲ್ಲಿರುವ ನಾಯಿಗಳು ಬಡಾವಣೆಗೆ ಹೋಗದಂತೆ ಸುತ್ತಲೂ ಜಾಲರಿ ಅಥವಾ ತಡೆಗೋಡೆ ನಿರ್ಮಿಸಲು ಯೋಜನೆ ರೂಪಿಸಲಾಗುವುದು. ರಾಶಿ ಬಿದ್ದಿರುವ ಕಸದ ಗುಡ್ಡೆಯನ್ನೂ ಕರಗಿಸಲು ಟೆಂಡರ್‌ ಕರೆಯಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT