ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌರಶಕ್ತಿ: ನೈರುತ್ಯ ರೈಲ್ವೆಗೆ ₹1.96 ಕೋಟಿ ವಿದ್ಯುತ್ ಬಿಲ್ ಉಳಿತಾಯ

ಸೌರಶಕ್ತಿಯಿಂದ 46.11 ಲಕ್ಷ ಯುನಿಟ್‌ ವಿದ್ಯುತ್‌ ಉತ್ಪಾದಿಸಿದ ನೈರುತ್ಯ ರೈಲ್ವೆ
Last Updated 8 ಮೇ 2022, 16:21 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನೈರುತ್ಯ ರೈಲ್ವೆಯು ತನ್ನಸೇವಾ ಕಟ್ಟಡಗಳು, 120 ನಿಲ್ದಾಣಗಳು, ಲೆವೆಲ್‌ ಕ್ರಾಸಿಂಗ್ ಗೇಟ್‌ಗಳು ಸೇರಿದಂತೆ ವಿವಿಧೆಡೆ ಅಳವಡಿಸಿರುವ 4656.60 ಕಿಲೋವಾಟ್‌ ಸಾಮರ್ಥ್ಯದ ಸೌರಫಲಕಗಳಿಂದಕಳೆದ ಆರ್ಥಿಕ ವರ್ಷದಲ್ಲಿ 46.11 ಲಕ್ಷ ಯುನಿಟ್‌ ವಿದ್ಯುತ್‌ ಉತ್ಪಾದನೆಯಾಗಿದೆ. ಇದರಿಂದಾಗಿ, ರೈಲ್ವೆಗೆ ವಿದ್ಯುತ್‌ ಬಿಲ್‌ನಲ್ಲಿ ₹1.96 ಕೋಟಿ ಉಳಿತಾಯವಾಗಿದೆ.

ಹುಬ್ಬಳ್ಳಿ ನಿಲ್ದಾಣದ ಒಟ್ಟಾರೆ ವಿದ್ಯುತ್‌ ಅಗತ್ಯತೆಯ ಶೇ 70ರಷ್ಟು ಸೌರಶಕ್ತಿಯಿಂದಲೇ ಪೂರೈಕೆಯಾಗಿದೆ. ಕಾರ್ಯಾಗಾರದ ಶೇ 83ರಷ್ಟು ವಿದ್ಯುತ್ (ಒಟ್ಟು ವಿದ್ಯುತ್‌ ಅಗತ್ಯ 13.51 ಲಕ್ಷ ಯುನಿಟ್‌) ಹಾಗೂ ಇಎಂಡಿ ಶೆಡ್‌ನ ವಾರ್ಷಿಕ 1.13 ಲಕ್ಷ ಯುನಿಟ್‌ಗಳ ವಿದ್ಯುತ್‌ ಬಳಕೆಯ ಪೈಕಿ ಶೇ 60ರಷ್ಟು ವಿದ್ಯುತ್ ಅನ್ನು ಸೌರಶಕ್ತಿಯಿಂದ ಪಡೆದುಕೊಳ್ಳಲಾಗಿದೆ ಎಂದು ರೈಲ್ವೆಯು ಪ್ರಕಟಣೆಯಲ್ಲಿ ತಿಳಿಸಿದೆ.

ರೈಲ್‌ ಸೌಧದಲ್ಲಿ ಅಳವಡಿಸಲಾಗಿರುವ ಸೌರಫಲಕಗಳಿಂದ 2.75 ಲಕ್ಷ ಯುನಿಟ್‌ ವಿದ್ಯುತ್‌, ಹುಬ್ಬಳ್ಳಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಾರ್ಯಾಲಯದಲ್ಲಿ 84,294 ಯುನಿಟ್‌, ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಾರ್ಯಾಲಯದಲ್ಲಿ 94,115 ಯುನಿಟ್‌ ಹಾಗೂ ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕರ ಕಾರ್ಯಾಲಯದಲ್ಲಿ ಅಳವಡಿಸಿರುವ ಸೌರಫಲಕಗಳಿಮದ 1.28 ಲಕ್ಷ ಯುನಿಟ್‌ ವಿದ್ಯುತ್‌ ಉತ್ಪಾದನೆಯಾಗಿದೆ.

‘ಪ್ರಸಕ್ತ ಆರ್ಥಿಕ ವರ್ಷದಲ್ಲಿ ನೈರುತ್ಯ ರೈಲ್ವೆಯ ಇನ್ನೂ 26 ನಿಲ್ದಾಣಗಳಲ್ಲಿ ಸೌರಫಲಕಗಳನ್ನು ಅಳವಡಿಸಲಾಗುವುದು. ನೈರುತ್ಯ ರೈಲ್ವೆಯು ಪರಿಸರ ಸ್ನೇಹಿ ಸೌರಶಕ್ತಿಯನ್ನು ಬಳಸಿಕೊಳ್ಳುತ್ತಿದ್ದು 2030ರೊಳಗೆ ನಿವ್ವಳ ಶೂನ್ಯ ಇಂಗಾಲ ಹೊರಸೂಸುವ ರೈಲ್ವೆ’ ಯಾಗಿ ಹೊರಹೊಮ್ಮುವ ಗುರಿ ಹೊಂದಿದೆ’ ಎಂದುನೈರುತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಸಂಜೀವ್‌ ಕಿಶೋರ್‌ ಹೇಳಿದ್ದಾರೆ.

‘ಪ್ರಧಾನ ಮುಖ್ಯ ವಿದ್ಯುತ್‌ ಎಂಜಿನಿಯರ್‌ ಜೈಪಾಲ್‌ ಸಿಂಗ್‌ ನೇತೃತ್ವದಲ್ಲಿ ಹುಬ್ಬಳ್ಳಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅರವಿಂದ ಮಾಲಖೇಡೆ, ಬೆಂಗಳೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಶ್ಯಾಮ್‌ ಸಿಂಗ್‌ ಮತ್ತು ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕ ರಾಹುಲ್‌ ಅಗರ್‌ವಾಲ್‌ ಮಾರ್ಗದರ್ಶನದಲ್ಲಿ ಮೂರೂ ರೈಲ್ವೆ ವಿಭಾಗಗಳಲ್ಲಿ ಸೌರಶಕ್ತಿ ಬಳಕೆಯ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೊಳಿಸಲಾಗುತ್ತಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT