ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ: 2.56 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ

ಎಲ್.ಮಂಜುನಾಥ
Published 17 ಮೇ 2024, 6:03 IST
Last Updated 17 ಮೇ 2024, 6:03 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಬರ ಆವರಿಸಿದ್ದ ಧಾರವಾಡ ಜಿಲ್ಲೆಯ ಕೆಲವಡೆ ಮಳೆಯಾಗಿದ್ದು, ಕೃಷಿ ಚಟುವಟಿಕೆ ಕೈಗೊಳ್ಳಲು ರೈತರು ಮುಂದಾಗಿದ್ದಾರೆ. ಹೊಲವನ್ನು ಹಸನು ಮಾಡಿ, ಮುಂಗಾರು ಬಿತ್ತನೆಗೆ ಸಜ್ಜಾಗಿದ್ದಾರೆ.

ಭತ್ತ, ಜೋಳ, ಮೆಕ್ಕೆಜೋಳ, ತೊಗರಿ, ಹುರುಳಿ, ಉದ್ದು, ಹೆಸರು, ಅಲಸಂಧಿ, ಶೇಂಗಾ, ಸೂರ್ಯಕಾಂತಿ, ಹತ್ತಿ, ಕಬ್ಬು ಸೋಯಾಬಿನ್‌ ಸೇರಿ ತೋಟಗಾರಿಕೆ, ದ್ವಿದಳ ಧಾನ್ಯ ಹಾಗೂ ವಾಣಿಜ್ಯ ಬೆಳೆಗಳು ಜಿಲ್ಲೆಯ ಪ್ರಮುಖ ಬೆಳೆಗಳಾಗಿವೆ. 

2.56ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿ:

ಜಿಲ್ಲೆಯ  ಕೃಷಿ ಇಲಾಖೆಯು ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಒಟ್ಟು 2,56,975 ಹೆಕ್ಟೇರ್‌ ಪ್ರದೇಶದಲ್ಲಿ ಕೃಷಿ ಬೆಳೆಗಳ ಬಿತ್ತನೆಯ ಗುರಿ ಹೊಂದಿದೆ. 

ಇದರಲ್ಲಿ ಜಿಲ್ಲೆಯಲ್ಲಿ 10,835 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬಿತ್ತನೆಯ ಗುರಿ. 46,825 ಹೆಕ್ಟೇರ್‌ ಪ್ರದೇಶದಲ್ಲಿ ಮೆಕ್ಕೆಜೋಳ. 67,515 ಹೆಕ್ಟೇರ್‌ನಲ್ಲಿ ಹೆಸರು. 9495 ಹೆಕ್ಟೇರ್‌ನಲ್ಲಿ ಉದ್ದು ಬಿತ್ತನೆ. 53,820 ಹೆಕ್ಟೇರ್‌ನಲ್ಲಿ ಹತ್ತಿ. 6,340 ಹೆಕ್ಟೇರ್‌ನಲ್ಲಿ ಕಬ್ಬು ಸೇರಿ ಎಣ್ಣೆಕಾಳು ಹಾಗೂ ವಾಣಿಜ್ಯ ಬೆಳೆಗಳ ಬಿತ್ತನೆ ಗುರಿಯಿದೆ. ‌

‘ಕಳೆದ ಸಲ ಮುಂಗಾರಿಗೆ ಹೋಲಿಸಿದರೆ, ಈ ಸಲ ಮೇ ತಿಂಗಳ ಅಂತ್ಯ ಮತ್ತು ಜೂನ್‌ ಆರಂಭದಲ್ಲಿ ಮಳೆಯಾಗುವ ಲಕ್ಷಣಗಳಿವೆ ಎಂದು ಹವಾಮಾನ ಇಲಾಖೆಯ ಈಗಾಗಲೇ ಮುನ್ಸೂಚನೆ ನೀಡಿದೆ. ಕೃಷಿ ಇಲಾಖೆಯೂ ಸಹ ಮುಂಗಾರು ಬಿತ್ತನೆಗಾಗಿ ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಪೂರೈಕೆಗೆ ಯಾವುದೇ ರೀತಿಯಲ್ಲಿ ತೊಂದರೆಯಾಗಬಾರದು ಎಂದು ‌ಸಿದ್ಧತೆ ಮಾಡಿಕೊಂಡಿದೆ‘ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಎಂ.ಕಿರಣ್‌ಕುಮಾರ್ ತಿಳಿಸಿದರು.

ಬಿತ್ತನೆ ಬೀಜದ ಕೊರತೆ ಇಲ್ಲ: ‌

‘2024–25ನೇ ಸಾಲಿನ ಮುಂಗಾರು ಬಿತ್ತನೆಗೆ ಜಿಲ್ಲೆಯ ರೈತರಿಗೆ ಅಂದಾಜು 20 ಸಾವಿರ ಕ್ವಿಂಟಲ್‌ಗೂ ಅಧಿಕ ಬಿತ್ತನೆ ಬೀಜಗಳ ಅಗತ್ಯವಿದೆ. ಬೇಡಿಕೆಗೆ ತಕ್ಕಂತೆ ನಮ್ಮಲ್ಲಿ ಬಿತ್ತನೆ ಬೀಜಗಳ ದಾಸ್ತಾನು ಇದೆ. ಉತ್ತಮ ಮಳೆ ಆಗುತ್ತಿದ್ದಂತೆ ರೈತ ಸಂಪರ್ಕ ಕೇಂದ್ರಗಳ ಮೂಲಕ ಸಹಾಯಧನದಲ್ಲಿ ರೈತರಿಗೆ ಬಿತ್ತನೆ ಬೀಜ ವಿತರಿಸಲಾಗುವುದು’ ಎಂದರು.

‘ಜಿಲ್ಲೆಯಲ್ಲಿ ಪ್ರಸ್ತುತ 14 ರೈತ ಸಂಪರ್ಕ ಕೇಂದ್ರ ಹಾಗೂ 17 ಉಪ ಕೇಂದ್ರಗಳು ಸೇರಿ ಒಟ್ಟು 31 ಬಿತ್ತನೆ ಬೀಜ ವಿತರಣಾ ಕೇಂದ್ರಗಳಿದ್ದು, ರೈತರಿಗೆ ಅಗತ್ಯ ಭತ್ತ, ಸೋಯಾಬೀನ್‌, ಹೆಸರು, ಉದ್ದು, ಶೇಂಗಾ, ಸೂರ್ಯಕಾಂತಿ, ಮೆಕ್ಕೆಜೋಳ ಸೇರಿದಂತೆ ಏಕಧಾನ್ಯ, ದ್ವಿದಳ ಧಾನ್ಯ ಬಿತ್ತನೆ ಬೀಜಗಳನ್ನು ವಿತರಿಸಲಾಗುವುದು. ಪ್ರಸ್ತುತ ನಮ್ಮಲ್ಲಿ 20,587 ಕ್ವಿಂಟಲ್‌ ವಿವಿಧ ಬಿತ್ತನೆ ಬೀಜಗಳ ದಾಸ್ತಾನು ಇದೆ’ ಎಂದು ಅವರು ವಿವರಿಸಿದರು.

ರಸಗೊಬ್ಬರ ದಾಸ್ತಾನು: 

‘ಜಿಲ್ಲೆಯ ಇಡೀ ಮುಂಗಾರು ಹಂಗಾಮಿನ ಅವಧಿಗೆ 58 ಸಾವಿರ ಮೆಟ್ರಿಕ್‌ ಟನ್‌ ಗೊಬ್ಬರದ ಅಗತ್ಯವಿದೆ. ಈಗಾಗಲೇ ನಮ್ಮಲ್ಲಿ 36,772 ರಸಗೊಬ್ಬರದ ದಾಸ್ತಾನಿದೆ. ಇದರಲ್ಲಿ ಮೇ ಅಂತ್ಯದವರೆಗೆ ಬಿತ್ತನೆಗಾಗಿ 17,039 ರಸಗೊಬ್ಬರ ವಿತರಿಸಲಾಗುತ್ತದೆ. ಜೂನ್‌ ಆರಂಭದಲ್ಲಿ ಇನ್ನೂ ಹೆಚ್ಚಿನ ರಸಗೊಬ್ಬರ ಪೂರೈಕೆಯಾಗಲಿದೆ’ ಎಂದರು.

‘ಈವರೆಗೆ ಯೂರಿಯಾ 12,951, ಡಿಎಪಿ 7,651, ಎಂಒಪಿ 1,156, ಎನ್‌ಪಿಕೆಸ್‌ 14,506, ಎಸ್‌ಎಸ್‌ಪಿ 508 ಮೆಟ್ರಿಕ್‌ ಟನ್‌ ಸೇರಿದಂತೆ ಒಟ್ಟು  36,772 ಮೆಟ್ರಿಕ್‌ ಟನ್‌ ರಸಗೊಬ್ಬರದ ದಾಸ್ತಾನು ಇದೆ‘ ಎಂದರು.

ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲ್ಲೂಕಿನ ಗ್ರಾಮದ ಬಳಿಯ ಹೊಲವನ್ನು ಬಿತ್ತನೆಗೆ ಸಜ್ಜುಗೊಳಿಸುತ್ತಿರುವುದು
ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲ್ಲೂಕಿನ ಗ್ರಾಮದ ಬಳಿಯ ಹೊಲವನ್ನು ಬಿತ್ತನೆಗೆ ಸಜ್ಜುಗೊಳಿಸುತ್ತಿರುವುದು
ಈ ಸಲದ ಮುಂಗಾರು ಮಾರುತಗಳು ಜೂನ್‌ ಆರಂಭದಲ್ಲಿ ಕೇರಳ ಪ್ರವೇಶಿಸುವ ಎಲ್ಲಾ ಲಕ್ಷಣಗಳಿವೆ. ಜೂನ್‌ನಿಂದ ಸೆಪ್ಟೆಂಬರ್‌ ವರಗಿನ ಮುಂಗಾರು ಮಳೆ ವಾಡಿಕೆಗಿಂತ ಹೆಚ್ಚು ಬೀಳುವ ಸಾಧ್ಯತೆ ಇದೆ.
– ರವಿಪಾಟೀಲ ಕೃಷಿ ಹವಾಮಾನ ವಿಭಾಗದ ತಜ್ಞ ಕೃಷಿ ವಿಶ್ವವಿದ್ಯಾಲಯ ಧಾರವಾಡ

ತೋಟಗಾರಿಕೆ ಬೆಳೆ ಪ್ರದೇಶ

‘ಜಿಲ್ಲೆಯಲ್ಲಿ ಅಂದಾಜು 52 ಸಾವಿರ ಹೆಕ್ಟೇರ್‌ ತೋಟಗಾರಿಕೆ ಬೆಳೆ ಪ್ರದೇಶವಿದೆ. ಇದರಲ್ಲಿ 25 ಸಾವಿರ ಹೆಕ್ಟೇರ್‌ನಲ್ಲಿ ಮೆಣಸಿನಕಾಯಿ 16 ಸಾವಿರ ಹೆಕ್ಟೇರ್‌ನಲ್ಲಿ ಉಳ್ಳಾಗಡ್ಡಿ ಬಿತ್ತನೆ ಸಾಧ್ಯತೆ ಇದೆ. ಇದರೊಂದಿಗೆ ಮಾವು ಆಲೂಗಡ್ಡೆ ಸೇರಿ ಇತರೆ ತೋಟಗಾರಿಕೆ ಬೆಳೆ ಬೆಳೆಯಲಾಗುತ್ತದೆ. ಆದರೆ ಇದೆಲ್ಲವೂ ಮಳೆಯ ಪ್ರಮಾಣವನ್ನು ಅವಲಂಬಿಸಿದೆ’ ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಕಾಶೀನಾಥ ಭದ್ರಣ್ಣನವರ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT