ಶುಕ್ರವಾರ, ನವೆಂಬರ್ 27, 2020
20 °C

ಉಗುಳುವ ಖಯಾಲಿಗೆ ಕಡಿವಾಣ ಯಾವಾಗ?

ಪ್ರಮೋದ ಜಿ.ಕೆ. Updated:

ಅಕ್ಷರ ಗಾತ್ರ : | |

Prajavani

ಗೋಡೆಗಳ ಮೇಲೆ ಎಲೆ, ಅಡಿಕೆಯ ಚಿತ್ತಾರ, ಅಂದ ಕಳೆದುಕೊಂಡ ಗೋಡೆಗಳು, ಉದ್ಯಾನದಲ್ಲಿ ಕಸದ ರಾಶಿ, ಶೌಚಾಲಯದಲ್ಲಿ ಮುಸುರಿ ನೀರು ಚೆಲ್ಲುವ ಸಿಬ್ಬಂದಿ, ಗುಟ್ಕಾ ತಿಂದು ಉಗುಳಿದ್ದರಿಂದ ‘ಕೆಂಪು ಸಮುದ್ರ’ದಂತೆ ಕಾಣುವ ಕಟ್ಟಡದ ಮೂಲೆಗಳು, ಮೆಟ್ಟಿಲುಗಳು!

ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ಕಂಡುಬರುವ ಚಿತ್ರಣವಿದು. ಆಸ್ಪತ್ರೆ, ತಹಶೀಲ್ದಾರ್‌, ಜಿಲ್ಲಾಧಿಕಾರಿಗಳ ಕಚೇರಿ, ಮಹಾನಗರ ಪಾಲಿಕೆ ಹಾಗೂ ಬಸ್‌, ರೈಲ್ವೆ ನಿಲ್ದಾಣಗಳಲ್ಲಿ ಈ ರೀತಿಯ ಚಿತ್ರಣ ಸಾಮಾನ್ಯ ಎನ್ನುವಂತಾಗಿದೆ. ಮಹಡಿಗಳಿಗೆ ಮೆಟ್ಟಿಲು ಬಳಸಿ ಹೋಗುವಾಗ ಮೂಲೆಯಲ್ಲಿ ಎಲೆ, ಅಡಿಕೆ, ಗುಟ್ಕಾ ತಿಂದು ಉಗುಳಿರುತ್ತಾರೆ. ಇದರಿಂದ ಕಚೇರಿಯ ಅಂದ ಹಾಳಾಗಿ ಕೆಟ್ಟ ವಾಸನೆ ಬರುತ್ತದೆ.

ಧಾರವಾಡ, ಬೆಳಗಾವಿ, ಹಾವೇರಿ ಮತ್ತು ಗದಗ ಜಿಲ್ಲೆಗಳಲ್ಲಿ ಎಲೆ, ಅಡಿಕೆ ಹಾಕಿಕೊಳ್ಳುವುದು ಸಾಮಾನ್ಯ. ಊಟ ಇಲ್ಲದಿದ್ದರೂ ಪರವಾಗಿಲ್ಲ. ಎಲೆ, ಅಡಿಕೆ ಇರಲೇಬೇಕು ಎನ್ನುವ ಸಿದ್ಧಾಂತ ಈ ಭಾಗದ ಜನರದ್ದು. ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳಿರಲಿ, ಕಚೇರಿಗಳೇ ಇರಲಿ; ಅಲ್ಲಿ ಅಧಿಕಾರಿಗಳೊಂದಿಗೆ ಮಾತನಾಡುವ ಮೊದಲು ಬಾಯಿತುಂಬಾ ತಾಂಬೂಲ ಇರಲೇಬೇಕು.

ಚಹಾ ಕುಡಿದ ಪ್ಲಾಸ್ಟಿಕ್‌ ಹಾಗೂ ಪೇಪರ್‌ ಗ್ಲಾಸ್‌ಗಳು, ವ್ಯರ್ಥ ಆಹಾರ ಪದಾರ್ಥಗಳು, ಕುಡಿಯುವ ನೀರಿನ ಬಾಟಲ್‌ಗಳು, ಬಿಸ್ಕೇಟ್‌ ಚೀಲಗಳನ್ನು ಎಲ್ಲಿ ಬೇಕಾದಲ್ಲಿ ಬೀಸಾಡುತ್ತಾರೆ. ಈ ರೀತಿಯ ಅಶುಚಿ ಖಾಸಗಿ ಕಚೇರಿಗಳಲ್ಲಿ ಕಡಿಮೆ. ಅಲ್ಲಿ ಹೆಜ್ಜೆಹೆಜ್ಜೆಗೂ ಭದ್ರತಾ ಸಿಬ್ಬಂದಿ ಇರುತ್ತಾರೆ. ಉಗುಳಿದರೆ ತಪ್ಪದೇ ದಂಡ ಹಾಕಿ ಎಚ್ಚರಿಕೆ ಕೊಡುತ್ತಾರೆ. ಆದರೆ, ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ದಂಡ ಹಾಕುವುದಿಲ್ಲ. ಆದ್ದರಿಂದ ‘ಬಣ್ಣದ–ಚಿತ್ತಾರ’ಕ್ಕೆ ಲಗಾಮು ಇಲ್ಲದಂತಾಗಿದೆ.

ದೇವರ ಮೊರೆ ಹೋದರೂ ತಪ್ಪಿಲ್ಲ ಕಾಟ

ಎಲೆ, ಅಡಿಕೆ ತಿಂದು ಉಗುಳುವುದರಿಂದ ಕಚೇರಿಯ ತುಂಬೆಲ್ಲ ಕೆಟ್ಟ ವಾಸನೆ ಬರುತ್ತದೆ. ಇದನ್ನು ತಡೆಯುವ ಉದ್ದೇಶ
ದಿಂದ ಹೆಚ್ಚು ಉಗುಳುವ ಸ್ಥಳಗಳಲ್ಲಿ, ಮೆಟ್ಟಿಲಿನ ಗೋಡೆಗಳ ಮೂಲೆಯಲ್ಲಿ ದೇವರ ಫೋಟೊಗಳನ್ನು ಅಂಟಿಸುತ್ತಾರೆ. ದೇವರ ಮೇಲಿನ ಭಕ್ತಿಯಿಂದ ಉಗುಳುವ ಅನಾಗರಿಕತೆ ಕಡಿಮೆಯಾಗಬಹುದು ಅಂದುಕೊಂಡವರಿಗೆ ನಿರಾಸೆಯಾಗಿದ್ದೇ ಹೆಚ್ಚು. ಅನೇಕ ಜನ ದೇವರ ಚಿತ್ರದ ಮೇಲೂ ಉಗುಳುತ್ತಾರೆ!

ಉಗುಳಿದವರಿಂದಲೇ ಕಸ ಎತ್ತಿಸುವೆ

‘ಸರ್ಕಾರಿ ಕಚೇರಿ ನಿಮ್ಮೆಲ್ಲರ ಆಸ್ತಿ, ಎಲ್ಲಿ ಬೇಕಾದಲ್ಲಿ ಉಗುಳಬೇಡಿ ಎಂದು ಗುಟ್ಕಾ, ಎಲೆ, ಅಡಿಕೆ ಹಾಕಿಕೊಂಡು ಬರುವವರಿಗೆ ತಿಳಿ ಹೇಳುತ್ತೇವೆ. ಅನೇಕ ಸಲ ಉಗುಳಿದವರಿಂದಲೇ ಸ್ವಚ್ಛ ಮಾಡಿಸಿದ್ದೇನೆ. ಉತ್ತರ ಕರ್ನಾಟಕ ಭಾಗದಲ್ಲಿ ಎಲೆ–ಅಡಿಕೆ ಹಾಕಿಕೊಳ್ಳುವವರು ಹೆಚ್ಚು. ಇದಕ್ಕೆ ನಮ್ಮ ಅಭ್ಯಂತರವಿಲ್ಲ. ತಿನ್ನುವವರು ಸರ್ಕಾರಿ ಕಚೇರಿಗಳಿಗೆ, ಆಸ್ಪತ್ರೆಗೆ ಹೋಗುವಾಗ ಎಲ್ಲಿಯೂ ಹೊಲಸಾಗದಂತೆ ಎಚ್ಚರಿಕೆ ವಹಿಸಬೇಕು. ಸಾರ್ವಜನಿಕರಿಗೆ ಸ್ವಯಂ ಅರಿವು ಮುಖ್ಯ. ಅನೇಕರಿಗೆ ದಂಡ ಕೂಡ ಹಾಕಲಾಗಿದೆ’ ಎಂದು ಹುಬ್ಬಳ್ಳಿ ತಹಶೀಲ್ದಾರ್‌ ಶಶಿಧರ ಮಾಡ್ಯಾಳ ಹೇಳುತ್ತಾರೆ

ಹುಬ್ಬಳ್ಳಿ–ಧಾರವಾಡ ಸ್ಮಾರ್ಟ್‌ ಸಿಟಿ ಆಗುವ ಸಂದರ್ಭದಲ್ಲಿ ಸ್ವಚ್ಛತೆಯತ್ತ ಗಮನಹರಿಸಬೇಕಾದ್ದು ನಮ್ಮ ಜವಾಬ್ದಾರಿಯೂ ಹೌದು ಎಂಬುದನ್ನು ನಾಗರಿಕರು ಅರಿತುಕೊಳ್ಳಬೇಕು. ಆಗ ದಂಡದ ಪ್ರಶ್ನೆಯೇ ಉದ್ಭವಿಸುವುದಿಲ್ಲ.

‘ಅರಿವು–ಸಂಪ್ರದಾಯದ ಸಂಕಷ್ಟ’

ಸರ್ಕಾರಿ ಕಚೇರಿಗಳಲ್ಲಿ ಹಾಗೂ ಆಸ್ಪತ್ರೆಗಳಲ್ಲಿ ಸ್ವಚ್ಛತೆಗೆ ಆದ್ಯತೆ ಕೊಡಬೇಕು ಎಂದು ಪ್ರತಿಬಾರಿ ಸಭೆಯಲ್ಲಿ ಅಧಿಕಾರಿಗಳಿಗೆ ಹೇಳುತ್ತೇನೆ. ಆದರೆ, ಈ ಭಾಗದಲ್ಲಿ ಎಲೆ, ಅಡಿಕೆ ತಿನ್ನುವುದು ಸಂಪ್ರದಾಯ ಎನ್ನುವಂತೆ ಬೆಳೆಸಿಕೊಂಡು ಬಂದಿದ್ದಾರೆ. ಆದ್ದರಿಂದ ಇದಕ್ಕೆ ಕಡಿವಾಣ ಹಾಕುವುದು ಕಷ್ಟ. ಎಲೆ, ಅಡಿಕೆ ತಿಂದರೂ ಕಚೇರಿ ಒಳಗೆ ಬರುವಾಗ ಬಾಯಿ ತೊಳೆದುಕೊಂಡು ಬನ್ನಿ ಎಂದು ಅನೇಕ ಸಲ ನಾನೇ ಸಾರ್ವಜನಿಕರಿಗೆ ಮನವಿ ಮಾಡಿದ್ದೇನೆ. ಆದರೂ ಜನರಿಗೆ ಸ್ಚಚ್ಛತೆಯ ಅರಿವು ಕಡಿಮೆ. ತಿಳಿ ಹೇಳಿದರೆ ಎಲೆ, ಅಡಿಕೆ ತಿನ್ನುವುದು ನಮ್ಮ ಸಂಪ್ರದಾಯ ಎಂದು ವಾದಿಸುತ್ತಾರೆ’ ಎಂದು ಜಿಲ್ಲೆಯ ಪ್ರಮುಖ ಅಧಿಕಾರಿಯೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದರು.

ಸ್ವಚ್ಛತಾ ಕಾರ್ಯಕ್ಕೆ ಕಿಮ್ಸ್‌ ಹೊಸ ಹೆಜ್ಜೆ

ಆಸ್ಪತ್ರೆಯಲ್ಲಿ ಸದಾ ಸ್ಚಚ್ಛತೆ ಕಾಪಾಡಿಕೊಳ್ಳಬೇಕು ಎನ್ನುವ ಕಾರಣಕ್ಕೆ ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆ ಸಂಚಾರ ಕಸ ಸಂಗ್ರಹಣಾ ಡಬ್ಬಿ ಆರಂಭಿಸಿದೆ. ಮಾಹಿತಿಯ ಕೊರತೆಯಿಂದ ಆಸ್ಪತ್ರೆ ಒಳಗೆ ಗುಟ್ಕಾ, ಎಲೆ, ಅಡಿಕೆ ತೆಗೆದುಕೊಂಡು ಹೋಗುವವರು ಸಂಗ್ರಹಣಾ ಡಬ್ಬಿಯಲ್ಲಿ ಅವುಗಳನ್ನು ಹಾಕಬೇಕು. ಒಂದು ವೇಳೆ ಹಾಕದೇ ಸಿಬ್ಬಂದಿ ಕೈಗೆ ಸಿಕ್ಕಿ ಬಿದ್ದರೆ ಕಡ್ಡಾಯವಾಗಿ ₹ 500 ದಂಡ ಕಟ್ಟಬೇಕು.

‘ಕಿಮ್ಸ್‌ನಲ್ಲಿ ಎಲ್ಲೆಂದರಲ್ಲಿ ಉಗುಳಿದರೆ ಹತ್ತು ವರ್ಷಗಳಿಂದ ದಂಡ ವಿಧಿಸಲಾಗುತ್ತಿದೆ. ದಂಡವನ್ನು ಕಡ್ಡಾಯವಾಗಿ ವಿಧಿಸಬೇಕೊ ಅಥವಾ ಎಚ್ಚರಿಕೆ ನೀಡಿ ಕೈಬಿಡಬೇಕೊ ಎನ್ನುವುದು ನಿರ್ದೇಶಕರ ಮೇಲೆ ಅವಲಂಬಿತವಾಗಿರುತ್ತದೆ. ಹೊಸದಾಗಿ ಬಂದಿರುವ ಕಿಮ್ಸ್‌ ನಿರ್ದೇಶಕ ಡಾ.ರಾಮಲಿಂಗಪ್ಪ ಅಂಟರತಾನಿ ಕಡ್ಡಾಯವಾಗಿ ದಂಡ ಸಂಗ್ರಹಿಸಿ ಆ ಹಣವನ್ನು ಸ್ವಚ್ಛತೆ ಉದ್ದೇಶಕ್ಕಾಗಿ ಬಳಸುವಂತೆ ಸೂಚಿಸಿದ್ದಾರೆ. ಹತ್ತು ವರ್ಷಗಳಲ್ಲಿ ಒಟ್ಟು ₹3.75 ಲಕ್ಷ ದಂಡ ಸಂಗ್ರಹಿಸಲಾಗಿದೆ’ ಎಂದು ಕಿಮ್ಸ್‌ ದಂಡಾಧಿಕಾರಿ ವೈ.ಕೆ. ಹೂಗಾರ ತಿಳಿಸಿದರು.

‘ಸರ್ಕಾರಿ ಕಚೇರಿಗಳಲ್ಲಿ ಗುಟ್ಕಾ ಹಾಕಿಕೊಂಡು ಉಗುಳಿದರೆ ಇಂತಿಷ್ಟೇ ದಂಡ ಹಾಕಬೇಕೆಂದು ಸರ್ಕಾರದ ನಿಯಮವಿಲ್ಲ. ಆಯಾ
ಇಲಾಖೆಗಳು ಸ್ವಚ್ಛತೆಯ ಜಾಗೃತಿ ಮೂಡಿಸಲು ದಂಡ ವಿಧಿಸಲಾಗುವುದು, ಇಲ್ಲಿ ಉಗುಳಬೇಡಿ ಎಂದು ಭಿತ್ತಿಪತ್ರಗಳನ್ನು ಅಂಟಿಸಿರುತ್ತಾರೆ. ತಿಳಿ ಹೇಳುತ್ತಾರೆ’ ಎಂದು ಜಿಲ್ಲಾ ಆರೋಗ್ಯಧಿಕಾರಿ ಡಾ.ಯಶವಂತ ಮದ್ದಿನಕರ್ ಹೇಳಿದರು.

ಮಾದರಿಯಾಗಲಿ ಪುಣೆ ಪಾಲಿಕೆ ನಿಯಮ

ಗುಟ್ಕಾ ತಿಂದು ಸಾರ್ವಜನಿಕ ಸ್ಥಳಗಳಲ್ಲಿ, ರಸ್ತೆಯಲ್ಲಿ ಮತ್ತು ಗೋಡೆಗಳ ಮೇಲೆ ಉಗುಳುವವರಿಗೆ ಪುಣೆ ಮಹಾನಗರ ಪಾಲಿಕೆ 2018ರ ನವೆಂಬರ್‌ನಲ್ಲಿ ಕಠಿಣ ನಿಯಮ ಜಾರಿಗೆ ತಂದಿದೆ. ಇದಕ್ಕಾಗಿ ಪ್ರತ್ಯೇಕ ಸಿಬ್ಬಂದಿಯನ್ನು ನೇಮಿಸಿ ರಸ್ತೆ ಮೇಲೆ ಉಗುಳುವವರಿಗೆ ₹ 100 ದಂಡ ಹಾಕಿ, ಉಗುಳಿದವರಿಂದಲೇ ಅದನ್ನು ಸ್ವಚ್ಛಗೊಳಿಸುತ್ತಾರೆ.

ಈ ನಿಯಮ ಜಾರಿಗೆ ತರುವ ಮೊದಲು ಅಲ್ಲಿನ ಪಾಲಿಕೆ ಅಧಿಕಾರಿಗಳು ಕೆಲ ದಿನ ಜನಜಾಗೃತಿ ಜಾಥಾಗಳನ್ನು ನಡೆಸಿದ್ದರು. ಸಾರ್ವಜನಿಕರಿಗೆ ದಂಡ ಹಾಕುವ ಎಚ್ಚರಿಕೆ ನೀಡಿದ್ದರು. ಜಾಗೃತಿ ಅವಧಿ ಮುಗಿದ ಬಳಿಕ ಕಡ್ಡಾಯವಾಗಿ ದಂಡ ಹಾಕುತ್ತಿದ್ದಾರೆ. ಉಗುಳಿ ಹೊಲಸು ಮಾಡಿದ ಸ್ಥಳಗಳಿದ್ದರೆ, ಅವುಗಳ ಬಗ್ಗೆಯೂ ಸಾರ್ವಜನಿಕರು ಅಧಿಕಾರಿಗಳಿಗೆ ಮಾಹಿತಿ ನೀಡಬಹುದು. ಈ ನಿಯಮ ಎಲ್ಲರಿಗೂ ಮಾದರಿಯಾಗುವಂತಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು