ಯಶಸ್ವಿ ಹೃದಯ ಸ್ಟೆಂಟ್ ಕಸಿ ಶಸ್ತ್ರ ಚಿಕಿತ್ಸೆ

ಧಾರವಾಡ: ‘ಇಲ್ಲಿನ ಎಸ್‌ಡಿಎಂ ನಾರಾಯಣ ಹೃದಯಾಲಯ ವೈದ್ಯರ ತಂಡ ಥೊರಾಸಿಕ್ ಆಯೋರ್ಟಿಕ್ ಅನ್ಯುರಿಸಂ ರೋಗದಿಂದ ಬಳಲುತ್ತಿದ್ದ ಕೊಪ್ಪಳದ ಭೀಮಪ್ಪ ಹಿರೇಮನಿ (76) ಎಂಬುವವರಿಗೆ ಹೃದಯನಾಳ ಸ್ಟೆಂಟ್ ಕಸಿಯನ್ನು ಯಶಸ್ವಿಯಾಗಿ ನಡೆಸಿದೆ’ ಎಂದು ಹೃದಯ ರೋಗ ತಜ್ಞ ಡಾ. ಚೌಡಪ್ಪ ಶಾಖಾಪೂರ ಹೇಳಿದರು.
‘ತೊಡೆಸಂಧಿಯಲ್ಲಿ ಸಣ್ಣ ರಂಧ್ರದ ಮೂಲಕ ಸ್ಟೆಂಟ್ ಒಳಕ್ಕೆ ಹಾಕಲಾಗುತ್ತದೆ. ಸ್ಟೆಂಟ್ ಕಸಿಗೆ ಮಾರ್ಗದರ್ಶನ ನೀಡಲು ಮತ್ತು ಸ್ಟೆಂಟ್ ಸಾಗಾಟಕ್ಕೆ ರಕ್ತನಾಳದ ಮೂಲಕ ಉಬ್ಬು ಇರುವ ಜಾಗಕ್ಕೆ, ಕಳುಹಿಸಲು ಈ ಕೆಥೆಟರ್‌ಗಳನ್ನು ಬಳಸಲಾಗುತ್ತದೆ. ಸ್ಟೆಂಟ್ ಕಸಿ ಮಾಡಿದ ಬಳಿಕ ರಕ್ತವು ಕಸಿ ಮಾಡಲಾದ ಸ್ಟೆಂಟ್ ಮೂಲಕ ಹರಿಯುತ್ತದೆ. ಉಬ್ಬು ಸ್ಥಳದಲ್ಲಿ ಉಂಟಾಗುವ ತಡೆಯನ್ನು ನಿವಾರಿಸುತ್ತದೆ. ಉಬ್ಬಿದ ಭಾಗದ ಮೇಲೆ ರಕ್ತದ ಒತ್ತಡ ಬೀಳುವುದು ತಪ್ಪುವುದರಿಂದ ನಿಧಾನವಾಗಿ ಈ ಉಬ್ಬು ಸಂಕುಚಿತಗೊಳ್ಳುತ್ತದೆ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಈ ಹೃದಯ ನಾಳ ಸ್ಟೆಂಟ್ ಕಸಿಯ ದೊಡ್ಡ ಪ್ರಯೋಜನವೆಂದರೆ, ಕನಿಷ್ಠ ಗಾಯ. ಇದರಿಂದಾಗಿ ರಕ್ತದ ನಷ್ಟ ಹಾಗೂ ರೋಗಿ ಚೇತರಿಸಿಕೊಳ್ಳಲು ಬೇಕಾದ ಅವಧಿ ಕೂಡಾ ಕಡಿಮೆಯಾಗಿರುತ್ತದೆ. ಈ ಚಿಕಿತ್ಸಾ ವಿಧಾನಕ್ಕೆ ರೋಗಿಯ ದೇಹಕ್ಕೆ ಅದ್ಬುತವಾಗಿ ಸ್ಪಂದಿಸಿದ ಬಗ್ಗೆ ಸಂತಸವಿದ್ದು, ಇದೀಗ ಈ ಮಾರಕ ಲಕ್ಷಣದಿಂದ ಭೀಮಪ್ಪ ಸಂಪೂರ್ಣ ಗುಣಮುಖರಾಗಿದ್ದಾರೆ’ ಎಂದರು.
‘ಉತ್ತರ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಇಂತಹ ಶಸ್ತ್ರಚಿಕಿತ್ಸೆ ಕೈಗೊಂಡ ಸಾರ್ಥಕತೆ ಎಸ್‌ಡಿಎಂ ನಾರಾಯಣ ಹೃದಯಾಲಯದ್ದಾಗಿದೆ. ಡಾ. ವಿವೇಕಾನಂದ ಗಜಪತಿ, ಡಾ. ಮಹೇಶ ಹೊನ್ನಳಿ, ಡಾ. ಷಣ್ಮುಖ ಹಿರೇಮಠ, ಡಾ. ಗಣೇಶ ನಾಯಕ ಹಾಗೂ ಡಾ. ಪ್ರಮೋದ ಹೂನ್ನೂರ ಅವರನ್ನು ಒಳಗೊಂಡ ವೈದ್ಯರ ತಂಡ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಿದೆ’ ಎಂದು ಡಾ. ಚೌಡಪ್ಪ ಹೇಳಿದರು.
ಹೃದಯ ತಜ್ಞ ಡಾ. ಷಣ್ಮುಖ ಹಿರೇಮಠ ಮಾತನಾಡಿ, ‘ತೆರೆದ ಹೃದಯದ ಶಸ್ತ್ರಚಿಕಿತ್ಸೆಗಿಂತ ಭಿನ್ನವಾಗಿ ಹೃದಯನಾಳ ಕಸಿ ಸ್ಟೆಂಟಿಂಗ್ ಚಿಕಿತ್ಸೆಯನ್ನು ತೆಳುವಾದ, ಉದ್ದದ ನಳಿಕೆಯನ್ನು ಬಳಸಿ ಮಹಾಪಧಮನಿಯ ಒಳಭಾಗದಲ್ಲೇ ನೆರವೇರಿಸಲಾಗುತ್ತದೆ’ ಎಂದು ವಿವರಿಸಿದರು.
‘ಎದೆಯ ಭಾಗದಲ್ಲಿ ಮಹಾಪಧಮನಿಯ ದುರ್ಬಲಗೊಂಡ ವಾಲ್‌ನಲ್ಲಿ ಉಂಟಾಗುವ ಅಸಹಜ ಉಬ್ಬನ್ನು ಥೊರಾಸಿಕ್ ಆಯೋರ್ಟಿಕ್ ಅನ್ಯುರಿಸಂ ಸಮಸ್ಯೆ. ಈ ಸಮಸ್ಯೆಗೆ ನಿಗದಿತ ಶಸ್ತ್ರಚಿಕಿತ್ಸಾ ಪರಿಹಾರವೆಂದರೆ ತೆರೆದ ಹೃದಯದ ಅನ್ಯುರಿಸಂ ಶಸ್ತ್ರಚಿಕಿತ್ಸೆ. ಆದರೆ ಇಳಿವಯಸ್ಸು ಹಾಗೂ ಆರೋಗ್ಯ ಸಮಸ್ಯೆಯ ಕಾರಣದಿಂದ ಭೀಮಪ್ಪ ಅವರಿಗೆ ಹೃದಯನಾಳ ಕಸಿ ಸ್ಟೆಂಟಿಂಗ್ ಚಿಕಿತ್ಸೆಗೆ ಒಳಪಡಿಸಲಾಯಿತು’ ಎಂದು ಹೇಳಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.