ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉಸಿರುಗಟ್ಟಿಸುವ ಧೂಳು: ಜನರಿಗೆ ಸಂಕಟ

Published 4 ಜೂನ್ 2023, 4:09 IST
Last Updated 4 ಜೂನ್ 2023, 4:09 IST
ಅಕ್ಷರ ಗಾತ್ರ

ಎಲ್.ಮಂಜುನಾಥ

ಹುಬ್ಬಳ್ಳಿ: ನಗರದಲ್ಲಿ ವಿವಿಧೆಡೆ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, ಧೂಳಿನ ಸಮಸ್ಯೆ ಹೆಚ್ಚಾಗಿದೆ. ನಿತ್ಯ ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಮೂಗು ಮುಚ್ಚಿಕೊಂಡು ಓಡಾಡುತ್ತಿರುವುದು ಸಾಮಾನ್ಯವಾಗಿದೆ.

ರಾಜ್ಯದ ಹೆಚ್ಚು ವಾಯುಮಾಲಿನ್ಯ ಹೊಂದಿರುವ ನಗರಗಳಲ್ಲಿ ಹುಬ್ಬಳ್ಳಿ –ಧಾರವಾಡ ನಗರಗಳೂ ಸೇರಿವೆ ಎಂಬ ಅಂಶ ಈ ಹಿಂದೆ ಕೇಂದ್ರ ವಾಯು ಮಾಲಿನ್ಯ ನಿಯಂತ್ರಣ ಮಂಡಳಿಯು ತನ್ನ ವರದಿಯಲ್ಲಿ ತಿಳಿಸಿತ್ತು.

ಈ ಧೂಳಿನಿಂದ ಜನರು ಹೃದಯ ಸಂಬಂಧಿ ಕಾಯಿಲೆ ಸೇರಿ ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಮಹಾನಗರ ಪಾಲಿಕೆ, ಅರಣ್ಯ ಇಲಾಖೆ, ರಾಜ್ಯ ವಾಯು ಮಾಲಿನ್ಯ ನಿಯಂತ್ರಣ ಮಂಡಳಿ ಸೇರಿ ಸ್ಥಳೀಯ ವಿವಿಧ ಇಲಾಖೆಯ ಅಧಿಕಾರಿಗಳು ವಾಯುಮಾಲಿನ್ಯ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂಬ ಸೂಚನೆ ನೀಡಿತ್ತು. ಆದರೂ ಧೂಳು ಕಡಿಮೆಯಾಗುತ್ತಿಲ್ಲ ಎಂದು ಜನರು ದೂರುತ್ತಾರೆ.

ಜೀವಕ್ಕೆ ಹಾನಿ ಉಂಟು ಮಾಡುವ ಧೂಳಿನ ಕಣಗಳನ್ನು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಗುರುತಿಸಿದೆ. ಇದರ ನಿಯಂತ್ರಣಕ್ಕೆ ಹಲವು ಕ್ರಮ ಕೈಗೊಂಡಿದೆ.
ಐ.ಎಚ್‌.ಜಗದೀಶ, ಪರಿಸರ ಅಧಿಕಾರಿ, ರಾಜ್ಯ ಮಾಲಿನ್ಯ ನಿಯಂತ್ರಣಾ ಮಂಡಳಿ ಧಾರವಾಡ

ಹಳೇ ಹುಬ್ಬಳ್ಳಿಯ ನೇಕಾರ ನಗರ, ಇಂಡಿಪಂಪ್‌, ಹೆಗ್ಗೆರಿ, ಆನಂದ ನಗರ, ಚೆನ್ನಪೇಟೆ, ಗೋಪನಕೊಪ್ಪ, ದೇವಾಂಗ ಪೇಟೆ, ಆದರ್ಶ ನಗರ, ವಿಜಯನಗರ, ಭವಾನಿ ನಗರ, ಕೇಶ್ವಾಪುರ, ನಾಗಶೆಟ್ಟಿ ಕೊಪ್ಪ, ಬೆಂಗೇರಿ, ಕೋಟಿ ಲಿಂಗೇಶ್ವರ ನಗರ, ಹೊಸೂರು ಕ್ರಾಸ್‌ ಸೇರಿದಂತೆ ಹುಬ್ಬಳ್ಳಿಯ ಕೆಲ ಪ್ರದೇಶಗಳಲ್ಲಿ ಹೆಚ್ಚು ದೂಳು ಕಂಡು ಬರುತ್ತಿದೆ.

ಹಳೇ ಹುಬ್ಬಳ್ಳಿಯ ಕೆಲ ಪ್ರದೇಶಗಳಲ್ಲಿ ರಸ್ತೆ ನಿರ್ಮಾಣ, ನೀರಿನ ಪೈಪುಗಳ ಅಳವಡಿಕೆ ಕಾಮಗಾರಿಗಳು ನಡೆಯುತ್ತಿವೆ. ಇದು ಸಹ ಧೂಳು ಹೆಚ್ಚಳಕ್ಕೆ ಕಾರಣವಾಗಿದೆ. ಇದರಲ್ಲಿಯೇ ಅನಿವಾರ್ಯವಾಗಿ ಜನರು, ವಾಹನ ಸವಾರರು ಹಾಗೂ ವಿದ್ಯಾರ್ಥಿಗಳು ಸಂಚರಿಸುತ್ತಾರೆ.

ಮಹಾನಗರ ಪಾಲಿಕೆ ಅರಣ್ಯ ಇಲಾಖೆ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣಾ ಮಂಡಳಿ ಎಷ್ಟೇ ಮುಂಜಾಗ್ರತಾ ಕ್ರಮ ಕೈಗೊಂಡರೂ ಧೂಳನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ.
ರವಿಕುಮಾರ್‌, ಉಪನ್ಯಾಸಕ

‘ಹೊಸೂರು ವೃತ್ತದ ಸಮೀಪದ ರಸ್ತೆಯಲ್ಲಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಇಲ್ಲಿನ ರಸ್ತೆಗಳು ಬಹುತೇಕ ಹಾಳಾಗಿವೆ. ಇದರಲ್ಲಿಯೇ ವಾಹನಗಳು ಸಂಚರಿಸುತ್ತಿವೆ. ಹೀಗಾಗಿ ಈ ಭಾಗದಲ್ಲಿ ಅತಿ ಹೆಚ್ಚು ಧೂಳು ಉಂಟಾಗುತ್ತಿದೆ’ ಎಂದು ಹೊಸೂರು ರಸ್ತೆಯಲ್ಲಿನ ಆಟೊಮೊಬೈಲ್‌ ಅಂಗಡಿಯ ಮಾಲೀಕ ರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

’ಸ್ವಲ್ಪ ಗಾಳಿ ಬೀಸಿದರಂತೂ ರಸ್ತೆಯ ಧೂಳು ಪಾದಚಾರಿಗಳ ಹಾಗೂ ವಾಹನ ಸವಾರರ ಮುಖಕ್ಕೆ ರಾಚುತ್ತದೆ. ಹಳೇ ಹುಬ್ಬಳ್ಳಿ ನಗರದಲ್ಲಿ ಪಾದಚಾರಿ ಮಾರ್ಗಗಳು ಇಲ್ಲದಿರುವುದು, ರಸ್ತೆಯ ಪುಡಿ ಮಣ್ಣಿನ ಕಣಗಳು ಕಣ್ಣಿನೊಳಗೆ ಹೋಗುತ್ತವೆ. ಅಲ್ಲದೇ ಆಗಾಗ ಒಣಕೆಮ್ಮು ಬರುತ್ತದೆ’ ಎಂದು ಹಳೇ ಪಿಬಿ ರಸ್ತೆಯ ಬೀಡಾ ಅಂಗಡಿಯ ವಿಜಯ ಬೇಸರ ವ್ಯಕ್ತಪಡಿಸಿದರು.

ಧೂಳು ನಿಯಂತ್ರಣಕ್ಕೆ ಕ್ರಮ

’ಹುಬ್ಬಳ್ಳಿ– ಧಾರವಾಡ ಅವಳಿ ನಗರಗಳಲ್ಲಿ ಹೆಚ್ಚುತ್ತಿರುವ ದೂಳಿನ ಪ್ರಮಾಣದ ಮಾಹಿತಿಯನ್ನು ಸಂಗ್ರಹಿಸುವ ಉದ್ದೇಶದಿಂದಲೇ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಹುಬ್ಬಳ್ಳಿಯ ಪಾಲಿಕೆ ಕಚೇರಿ ಶೀರೂರು ಪಾರ್ಕ್‌ ಧಾರವಾಡದ ಜುಬಿಲಿ ಸರ್ಕಲ್‌ ಬಳಿ ಅಂದಾಜು ₹ 15 ಕೋಟಿ ವೆಚ್ಚದಲ್ಲಿ ನಿರಂತರ ವಾಯುಗುಣಮಟ್ಟ ಮಾಪನ (ಸಿಎಎಸಿಎಂಎಸ್‌) ಕೇಂದ್ರ ಆರಂಭಿಸಲಾಗಿದೆ’ ಎಂದು ಧಾರವಾಡದ ರಾಜ್ಯ ಮಾಲಿನ್ಯ ನಿಯಂತ್ರಣಾ ಮಂಡಳಿಯ ಪರಿಸರ ಅಧಿಕಾರಿ ಐ.ಎಚ್‌.ಜಗದೀಶ ’ಪ್ರಜಾವಾಣಿ’ಗೆ ತಿಳಿಸಿದರು.

’ಈ ಕೇಂದ್ರಗಳ ಮೂಲಕ ಧೂಳಿನ ಕಣ ಹಾಗೂ ವಾಹನಗಳ ಇಂಗಾಲ ನೈಟ್ರೋಜಿನ್‌ ಆಕ್ಸೈಡ್‌ ಸೇರಿ ಮಾಲಿನ್ಯಕಾರಕ ಕಣಗಳನ್ನು ಪತ್ತೆ ಮಾಡಿ ಅದನ್ನು ಇಲ್ಲಿನ ಜಾಹೀರಾತು ಫಲಕದ ಮಾದರಿಯ ಡಿಸ್‌ಪ್ಲೇ ಫಲಕದ ಮೇಲೆ ಮೂಡಿಸಲಾಗುತ್ತದೆ. ಇದನ್ನು ಆಧರಿಸಿಯೇ ವಾಯುಮಾಲಿನ್ಯ ನಿಯಂತ್ರಣಕ್ಕೆ ಕ್ರಮಕೈಗೊಳ್ಳಲಾಗುತ್ತದೆ’ ಎಂದು ಅವರು ತಿಳಿಸಿದರು.

ಪರಿಸರ ಸಂರಕ್ಷಣೆ

‘ಅವಳಿ ನಗರಗಳ ರಸ್ತೆ ಬದಿಯಲ್ಲಿ ಗಿಡಗಳನ್ನು ನೆಟ್ಟು ಪೋಷಿಸುವುದು ಉದ್ಯಾನಗಳನ್ನು ಅಭಿವೃದ್ಧಿ ಪಡಿಸುವುದು. ಗಿಡ–ಮರಗಳಿಗೆ ಆಗಾಗ ನೀರುಣಿಸುವುದು. ಧೂಳು ಉಂಟಾಗುವ ರಸ್ತೆ ಹಾಗೂ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವ ರಸ್ತೆಗಳಲ್ಲಿ ಪಾಲಿಕೆ ವತಿಯಿಂದ ನೀರು ಚುಮುಕಿಸುವುದು ಸೇರಿದಂತೆ ಪರಿಸರ ಸಂರಕ್ಷಣೆಗೆ ಪೂರಕವಾದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ’ ಎಂದರು.

ಹಳೇ ಹುಬ್ಬಳ್ಳಿಯ ಸಿದ್ಧಾರೂಢ ಮಠದ ರಸ್ತೆಯ ದೂಳಿನಲ್ಲಿಯೇ ದ್ವಿಚಕ್ರ ವಾಹನ ಸವಾರರು ಸಂಚರಿಸುತ್ತಿರುವುದು
ಹಳೇ ಹುಬ್ಬಳ್ಳಿಯ ಸಿದ್ಧಾರೂಢ ಮಠದ ರಸ್ತೆಯ ದೂಳಿನಲ್ಲಿಯೇ ದ್ವಿಚಕ್ರ ವಾಹನ ಸವಾರರು ಸಂಚರಿಸುತ್ತಿರುವುದು
ರಾಜ್ಯ ವಾಯುಮಾಲಿನ್ಯ ನಿಯಂತ್ರಣ ಮಂಡಳಿಯು ಹುಬ್ಬಳ್ಳಿಯ ಪಾಲಿಕೆ ಕಚೇರಿಯ ಆವರಣದಲ್ಲಿ ಅಳವಡಿಸಿರುವ ನಿರಂತರ ವಾಯುಗುಣಮಟ್ಟ ಮಾಪನದ (ಸಿಎಎಸಿಎಂಎಸ್‌) ಡಿಜಿಟಲ್‌ ಫಲಕ
ರಾಜ್ಯ ವಾಯುಮಾಲಿನ್ಯ ನಿಯಂತ್ರಣ ಮಂಡಳಿಯು ಹುಬ್ಬಳ್ಳಿಯ ಪಾಲಿಕೆ ಕಚೇರಿಯ ಆವರಣದಲ್ಲಿ ಅಳವಡಿಸಿರುವ ನಿರಂತರ ವಾಯುಗುಣಮಟ್ಟ ಮಾಪನದ (ಸಿಎಎಸಿಎಂಎಸ್‌) ಡಿಜಿಟಲ್‌ ಫಲಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT