ಹುಬ್ಬಳ್ಳಿ: ‘ನಮ್ಮ ವಿಚಾರಗಳನ್ನು ಒಪ್ಪಿ, ಸಮಸ್ಯೆಗಳನ್ನು ಪರಿಹರಿಸುವ ಬದ್ಧತೆ ತೋರುವವರನ್ನು ವಿಧಾನಸಭೆ ಚುನಾವಣೆಯಲ್ಲಿ ಬೆಂಬಲಿಸುತ್ತೇವೆ’ ಎಂದು ರೈತ ಸಂಘಟನೆಗಳ ಒಕ್ಕೂಟದ ರಾಜ್ಯ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದರು.
ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ 20 ಅಂಶಗಳನ್ನೊಳಗೊಂಡ ರೈತ ಸಂಘಟನೆಗಳ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ ಅವರು, ‘ಬೆಂಗಳೂರಿನಲ್ಲಿ ಮಾರ್ಚ್ 28ರಂದು ಎಲ್ಲ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಮುಖಾಮುಖಿ ಸಂವಾದ ಕಾರ್ಯಕ್ರಮ ಆಯೋಜಿಸಿದ್ದೇವೆ. ಅಲ್ಲಿ ಅವರ ಅಭಿಪ್ರಾಯಗಳನ್ನು ಸಂಗ್ರಹಿಸಿ ನಮ್ಮ ಮುಂದಿನ ನಡೆಯನ್ನು ನಿರ್ಧರಿಸುತ್ತೇವೆ’ ಎಂದರು.
‘ಮೊದಲಿನಿಂದಲೂ ಎಲ್ಲ ಪಕ್ಷಗಳೂ ರೈತರ ಕಣ್ಣೊರೆಸುವ ತಂತ್ರ ಅನುಸರಿಸುತ್ತ ಬಂದಿವೆ. ಚುನಾವಣೆ ಸಂದರ್ಭದಲ್ಲಿ ನೀಡುವ ಭರವಸೆಗಳನ್ನು ಈಡೇರಿಸುವ ಬದ್ಧತೆ ಚುನಾವಣೆ ಗೆದ್ದ ನಂತರ ಇರುವುದಿಲ್ಲ. ಪ್ರಣಾಳಿಕೆ ಕುರಿತು ಜಾಗೃತಿ ಮೂಡಿಸಲು ರಾಜ್ಯದ ಎಲ್ಲೆಡೆ ಪ್ರವಾಸ ನಡೆಸುತ್ತಿದ್ದೇವೆ. ಒಳ್ಳೆಯ ಸ್ಪಂದನೆ ವ್ಯಕ್ತವಾಗುತ್ತಿದೆ’ ಎಂದರು.
ಸರ್ಕಾರದ ವೈಫಲ್ಯ: ‘ಕಬ್ಬಿನ ಎಫ್‌ಆರ್‌ಪಿ (ನ್ಯಾಯೋಚಿತ ಮತ್ತು ಲಾಭದಾಯಕ ಬೆಲೆ) ಅನ್ನು ಮುಖ್ಯಮಂತ್ರಿಗಳು ₹150 ಹೆಚ್ಚಳ ಮಾಡಿದರು. ಆದರೆ ಸಕ್ಕರೆ ಕಾರ್ಖಾನೆ ಮಾಲೀಕರು ನ್ಯಾಯಾಲಯದಿಂದ ತಡೆಯಾಜ್ಞೆ ತಂದರು. ಇದು ಸರ್ಕಾರದ ವೈಫಲ್ಯ. ತಕ್ಷಣ ಈ ಸಮಸ್ಯೆ ಪರಿಹರಿಸಬೇಕು’ ಎಂದು ಒತ್ತಾಯಿಸಿದರು.
ವೀರನಗೌಡ ಪಾಟೀಲ, ಸುರೇಶ ಪಾಟೀಲ, ವಾಸು ಡಾಕಪ್ಪನವರ, ಪರಶುರಾಮ ಎತ್ತಿನಗುಡ್ಡ, ಉಳುವಪ್ಪ ಬಳಗೇರ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.