ಮಂಗಳವಾರ, ಜನವರಿ 18, 2022
16 °C
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 24 ಗೃಹಗಳ ನಿರ್ಮಾಣಕ್ಕೆ ಯೋಜನೆ

ಹುಬ್ಬಳ್ಳಿ: ಪೌರ ಕಾರ್ಮಿಕರ ವಿಶ್ರಾಂತಿ ಗೃಹಕ್ಕೆ ಟೆಂಡರ್

ಓದೇಶ ಸಕಲೇಶಪುರ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಅವಳಿನಗರದ ಸ್ವಚ್ಛತೆಗೆ ಶ್ರಮಿಸುವ ಪೌರ ಕಾರ್ಮಿಕರಿಗೆ ಕರ್ತವ್ಯದ ಸಂದರ್ಭದಲ್ಲಿ ಅನುಕೂಲವಾಗಲಿ ಎಂಬ ಉದ್ದೇಶದಿಂದ ಮಹಾನಗರ ಪಾಲಿಕೆಯು ವಿಶ್ರಾಂತಿ ಗೃಹಗಳನ್ನು ನಿರ್ಮಿಸಲು ಮುಂದಾಗಿದ್ದು, ಪ್ರಾಯೋಗಿಕವಾಗಿ ಒಂದು ಗೃಹ ನಿರ್ಮಿಸಲು ಟೆಂಡರ್ ಕರೆದಿದೆ.

ಬೆಳಗ್ಗಿನ ಜಾವದಿಂದ ಮಧ್ಯಾಹ್ನದವರೆಗೆ ಬೀದಿಯಲ್ಲೇ ಇರುವ ಕಾರ್ಮಿಕರಿಗೆ, ಕರ್ತವ್ಯಕ್ಕೆ ಪೂರಕವಾಗಿ ವಿಶ್ರಾಂತಿ ಗೃಹದ ಅಗತ್ಯವಿರುವುದನ್ನು ಮನಗಂಡಿರುವ ಪಾಲಿಕೆಯು, ಪ್ರಾಯೋಗಿಕವಾಗಿ ಒಂದು ಗೃಹವನ್ನು ನಿರ್ಮಿಸಲು ಟೆಂಡರ್ ಕರೆದಿದೆ. ಅಂದಹಾಗೆ, ರಾಜ್ಯದ ರಾಜಧಾನಿ ಬೆಂಗಳೂರಿನ ಬಿಬಿಎಂಪಿ ಹಾಗೂ ಶಿವಮೊಗ್ಗ ಮಹಾನಗರ ಪಾಲಿಕೆಗಳಲ್ಲಿ ಈಗಾಗಲೇ ಇಂತಹ ಗೃಹಗಳನ್ನು ನಿರ್ಮಿಸಲಾಗಿದೆ.

ಬಹುಪಯೋಗಿ ಗೃಹ: ‘ಪೌರ ಕಾರ್ಮಿಕರಿಗೆ ನಿರ್ಮಿಸುವ ವಿಶ್ರಾಂತಿ ಗೃಹಗಳು ಬಹುಪಯೋಗಿ ಆಗಿರಲಿವೆ. ಕಾರ್ಮಿಕರು ಸಮವಸ್ತ್ರ ಬದಲಾಯಿಸಿಕೊಳ್ಳಲು, ಸ್ವಚ್ಛತೆಗೆ ಸಂಬಂಧಿಸಿದ ತಮ್ಮ ಪರಿಕರಗಳನ್ನು ಇಟ್ಟುಕೊಳ್ಳಲು ಹಾಗೂ ಬೆಳಗ್ಗಿನ ಉಪಾಹಾರ ಸೇವೆನೆ ಮಾಡಲು ಇದರಿಂದ ಅನುಕೂಲವಾಗಲಿದೆ. ಗೃಹಗಳಲ್ಲಿ ಪ್ರತ್ಯೇಕ ಕಪಾಟುಗಳು ಇರಲಿದ್ದು, ಇದಕ್ಕೆ ಲಾಕರ್ ಸೌಲಭ್ಯ ಕೂಡ ಇರಲಿದೆ’ ಎಂದು ಪಾಲಿಕೆಯ ಯೋಜನಾ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಆರ್. ವಿಜಯಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕರ್ತವ್ಯದ ಅವಧಿಯಲ್ಲಿ ಕಾರ್ಮಿಕರು ಶೌಚಾಲಯಕ್ಕೆ ಹೋಗಬೇಕಾದರೆ ಪರದಾಡುವ ಸ್ಥಿತಿ ಇದೆ. ಹಾಗಾಗಿ, ಈ ಗೃಹಗಳಲ್ಲಿ ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ. ಮೇಲ್ಭಾಗದಲ್ಲಿ ನೀರಿನ ಟ್ಯಾಂಕರ್ ಅಳವಡಿಸಲಾಗಿದೆ. ಕೆಲಸ ಮಾಡುವಾಗ ಯಾರಿಗಾದರೂ ಗಾಯವಾದರೆ, ತಕ್ಷಣ ಚಿಕಿತ್ಸೆ ನೀಡಲು ಪ್ರಥಮ ಚಿಕಿತ್ಸೆ ಪೆಟ್ಟಿಗೆ ಇರಲಿದೆ’ ಎಂದು ಹೇಳಿದರು.

‘ಪ್ರಾಯೋಗಿಕವಾಗಿ ಒಂದು ವಿಶ್ರಾಂತಿ ಗೃಹ ನಿರ್ಮಾಣವಾದ ಬಳಿಕ, ಪೌರ ಕಾರ್ಮಿಕರು ಹಾಗೂ ಅವರ ಸಂಘಟನೆಗಳ ಮುಖಂಡರಿಂದ ಗೃಹದ ಕುರಿತು ಅಭಿಪ್ರಾಯ ಸಂಗ್ರಹಿಸಲಾಗುವುದು. ಬಳಿಕ, ಅಲ್ಲಿ ಮತ್ತಷ್ಟು ಸೌಲಭ್ಯಗಳನ್ನು ಕಲ್ಪಿಸಬೇಕೇ ಎಂಬುದರ ಕುರಿತು ಆಯುಕ್ತರ ನೇತೃತ್ವದಲ್ಲಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದರು.

‘ಒಂದು ಗೃಹಕ್ಕೆ ₹10 ಲಕ್ಷ ವೆಚ್ಚ’

‘ಒಂದು ವಿಶ್ರಾಂತಿ ಗೃಹದ ನಿರ್ಮಾಣಕ್ಕೆ ₹10 ಲಕ್ಷ ವೆಚ್ಚವಾಗಲಿದೆ. ಫ್ಯಾಬ್ರಿಕೇಟೆಡ್ ಮಾದರಿಯ ಈ ಗೃಹಗಳನ್ನು ಸುಲಭವಾಗಿ ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಸಾಗಿಸಬಹುದು. ಇಂತಹ 24 ಗೃಹಗಳನ್ನು ಅವಳಿನಗರದಲ್ಲಿ ನಿರ್ಮಿಸಲು ಯೋಜನೆ ಸಿದ್ಧಪಡಿಸಿ, ಜಿಲ್ಲಾಧಿಕಾರಿ ಅನುಮೋದನೆಗೆ ಕಳಿಸಲಾಗಿದೆ’ ಎಂದು ಆರ್. ವಿಜಯಕುಮಾರ್ ಹೇಳಿದರು.

‘ಹುಬ್ಬಳ್ಳಿಯ ದಕ್ಷಿಣ ವಲಯ, ಉತ್ತರ ವಲಯ ಹಾಗೂ ಧಾರವಾಡದಲ್ಲಿ ತಲಾ 8 ಗೃಹಗಳನ್ನು ನಿರ್ಮಿಸಲಾಗುವುದು. ಕಾರ್ಮಿಕರು ಕರ್ತವ್ಯ ನಿರ್ವಹಿಸುವ ಸ್ಥಳಗಳಿಗೆ ಹತ್ತಿರವಾಗುವಂತೆ, ಉದ್ಯಾನ ಆಗೂ ಪಾಲಿಕೆಯ ಸ್ಥಳಗಳಲ್ಲಿ ಗೃಹಗಳನ್ನು ಇಡಲಾಗುವುದು’ ಎಂದು ಮಾಹಿತಿ ನೀಡಿದರು.

ಪೌರ ಕಾರ್ಮಿಕರ ಮಾಹಿತಿ 

2209- ಪಾಲಿಕೆಯಲ್ಲಿರುವ ಒಟ್ಟು ಪೌರ ಕಾರ್ಮಿಕರು

288- ಚಾಲಕರು

90- ಸಹಾಯಕರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು