ಭಾನುವಾರ, ಜನವರಿ 17, 2021
17 °C
ಡಿಸೆಂಬರ್‌ನಲ್ಲಿ 465 ಜನ ಸೋಂಕಿತರು, ಕಿಮ್ಸ್‌ನಲ್ಲಿ ಒಂದು ಮಹಡಿ ಮಾತ್ರ ಮೀಸಲು

ಆರು ತಿಂಗಳಲ್ಲೇ ಕಡಿಮೆ ಪ್ರಕರಣ

ಪ್ರಮೋದ‌ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದ್ದು, ಹಿಂದಿನ ಆರು ತಿಂಗಳ ಅವಧಿಗೆ ಹೋಲಿಕೆ ಮಾಡಿದರೆ ಡಿಸೆಂಬರ್‌ನಲ್ಲಿಯೇ ಅತಿ ಕಡಿಮೆ ಪ್ರಕರಣಗಳು ದಾಖಲಾಗಿವೆ.

ಮಾರ್ಚ್‌ನಲ್ಲಿ ಜಿಲ್ಲೆಯಲ್ಲಿ ಮೊದಲ ಪ್ರಕರಣ ಬೆಳಕಿಗೆ ಬಂದ ನಂತರದ ತಿಂಗಳುಗಳಲ್ಲಿ ನಿತ್ಯ ಕನಿಷ್ಠ 300ರಿಂದ 400 ಸೋಂಕಿತರು ಪತ್ತೆಯಾಗುತ್ತಿದ್ದರು. ದಿನದಿಂದ ದಿನಕ್ಕೆ ಈ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದ್ದರಿಂದ ಆಸ್ಪತ್ರೆಗಳಲ್ಲಿ ಬೆಡ್‌ಗಳು, ಆಕ್ಸಿಜನ್‌ ಸಿಗಲಾಗದೆ ರೋಗಿಗಳು ಪಡಿಪಾಟಿಲು ಪಟ್ಟ ಸಂಕಷ್ಟದ ಸಮಯವೂ ಇತ್ತು.

ಜುಲೈ, ಆಗಸ್ಟ್‌, ಸೆಪ್ಟೆಂಬರ್‌ನಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಆದರೆ, ಅಕ್ಟೋಬರ್‌ ಬಳಿಕ ಜಿಲ್ಲೆಯಲ್ಲಿ ಸೋಂಕಿತರ ಪ್ರಮಾಣ ಇಳಿಕೆಯಾಗುತ್ತ ಬಂದಿದೆ. ಸೆಪ್ಟೆಂಬರ್‌ನಲ್ಲಿ ಪತ್ತೆಯಾಗಿದ್ದ 6,101 ಪ್ರಕರಣಗಳ ಪೈಕಿ 5,587 ಜನ ಗುಣಮುಖರಾಗಿದ್ದರು. ಅಕ್ಟೋಬರ್‌ನಲ್ಲಿ 3,117 ಪ್ರಕರಣಗಳು ಬೆಳಕಿಗೆ ಬಂದಿದ್ದವು. ಹಿಂದಿನ ಎರಡು ತಿಂಗಳುಗಳಿಂದ ಸೋಂಕಿತರ ಸಂಖ್ಯೆ ಮೂರಂಕಿಗೆ ಇಳಿದಿದೆ. ನವೆಂಬರ್‌ನಲ್ಲಿ 607 ಮತ್ತು ಡಿಸೆಂಬರ್‌ನಲ್ಲಿ 465 ಪ್ರಕರಣಗಳಷ್ಟೇ ವರದಿಯಾಗಿದ್ದು, ಡಿಸೆಂಬರ್‌ ಅಂತ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 108 ಇದ್ದವು. ಜ. 4ರ ಅಂತ್ಯಕ್ಕೆ ಸಕ್ರಿಯ ಪ್ರಕರಣಗಳ ಸಂಖ್ಯೆ 90ಕ್ಕೆ ಇಳಿದಿದೆ.

ಮುನ್ನೆಚ್ಚರಿಕೆ ಅಗತ್ಯ: ಜನರ ಮುಂಜಾಗ್ರತಾ ಕ್ರಮ ಮತ್ತು ಸರ್ಕಾರದ ನಿರ್ಧಾರಗಳಿಂದ ಕೊರೊನಾ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದೆ. ಎರಡನೇ ಅಲೆ ಮತ್ತು ರೂಪಾಂತರಗೊಂಡ ವೈರಸ್‌ ಆತಂಕ ಇರುವ ಕಾರಣ ಜನ ಈಗಿನಿಂದಲೇ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ ಎಂದು ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್‌) ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರತಾನಿ ಹೇಳಿದರು.

’ಪ್ರಕರಣಗಳ ಸಂಖ್ಯೆ ಕಡಿಮೆಯಾದರೂ ಕೊರೊನಾ ಪರೀಕ್ಷೆಗಾಗಿ ಗಂಟಲು ಹಾಗೂ ಮೂಗಿನ ದ್ರವದ ಮಾದರಿ ಸಂಗ್ರಹ ಕಾರ್ಯ ಕಡಿಮೆ ಮಾಡಿಲ್ಲ. ಕಿಮ್ಸ್‌ನಲ್ಲಿ ದಿನವೊಂದಕ್ಕೆ ಗರಿಷ್ಠ 3,000ರಿಂದ 3,500 ಪರೀಕ್ಷೆಗಳನ್ನು ಮಾಡಲಾಗುತ್ತಿದ್ದು, ಬೆರಳೆಣಿಕೆಯಷ್ಟೇ ಜನರಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಕೋವಿಡ್‌ ರೋಗಿಗಳಿಗೆ ಮೀಸಲಿಟ್ಟಿದ್ದ ಕಿಮ್ಸ್‌ನ ಸೂಪರ್‌ ಸ್ಟೆಷಾಲಿಟಿ ಆಸ್ಪತ್ರೆಯ ಒಂದು ಮಹಡಿಯಲ್ಲಿ ಮಾತ್ರ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಉಳಿದ ಮಹಡಿಗಳಲ್ಲಿ ಬೇರೆ ರೋಗಿಗಳಿಗೆ ಚಿಕಿತ್ಸೆ ನೀಡಲು ಬಳಸಿಕೊಳ್ಳಲಾಗುತ್ತಿದೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.