ಸೋಮವಾರ, ಜೂಲೈ 6, 2020
28 °C
ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಆಕ್ರೋಶ

ಇಂಧನ ಬೆಲೆ ಇಳಿಸಲು ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಪೆಟ್ರೋಲ್‌ ಹಾಗೂ ಡಿಸೇಲ್‌ ಬೆಲೆ ಏರಿಕೆ ವಿರೋಧಿಸಿ ಹುಬ್ಬಳ್ಳಿ–ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್‌ ವತಿಯಿಂದ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಯಿತು.

ನಗರದ ಕಿತ್ತೂರುರಾಣಿ ಚನ್ನಮ್ಮ ವೃತ್ತದಿಂದ ಸೈಕಲ್‌ ಮತ್ತು ಚಕ್ಕಡಿಯಲ್ಲಿ ಆರಂಭವಾದ ಪ್ರತಿಭಟನೆ ಭಗತ್‌ಸಿಂಗ್‌ ವೃತ್ತದವರೆಗೆ ಸಾಗಿತು. ಕೇಂದ್ರ ಸರ್ಕಾರ ನಿರಂತರವಾಗಿ ಇಂಧನ ಬೆಲೆ ಹೆಚ್ಚಳ ಮಾಡಿ ಜನಸಾಮಾನ್ಯರ ಮೇಲೆ ಹೊರೆ ಹೇರುತ್ತಿದೆ. ಕೂಡಲೇ ಬೆಲೆ ಕಡಿಮೆ ಮಾಡಬೇಕು ಎಂದು ಕಾಂಗ್ರೆಸ್‌ ಮುಖಂಡರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಸೈಕಲ್‌ ಮೇಲೆ ತೆರಳಿದ ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ ‘ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಬಳಿಕ ದೇಶದ ಆರ್ಥಿಕ ವ್ಯವಸ್ಥೆ ಕುಸಿದು ಹೋಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ಬೆಲೆ ಇಳಿದರೂ ಇಲ್ಲಿನ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚಾಗುತ್ತಲೇ ಇದೆ. ಶ್ರೀಲಂಕಾದಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ಗೆ ₹38 ಮಾತ್ರವಿದ್ದು, ಭಾರತದಲ್ಲಿ ಡಿಸೇಲ್‌ ಬೆಲೆಯೇ ಪ್ರತಿ ಲೀಟರ್‌ಗೆ ₹80 ದಾಟಿದೆ. ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡಿಸೇಲ್‌ ಮೇಲೆ ಶೇ 200ರಷ್ಟು ತೆರಿಗೆ ವಿಧಿಸುತ್ತಿದೆ; ಇದರಿಂದ ಬಂದ ₹10.300 ಕೋಟಿಯನ್ನು ಜನ ಕಲ್ಯಾಣಕ್ಕಾಗಿ ಉಪಯೋಗಿಸಿಲ್ಲ’ ಎಂದು ಆರೋಪಿಸಿದರು.

ವಿಧಾನ ಪರಿಷತ್‌ ಸದಸ್ಯ ಶ್ರೀನಿವಾಸ ಮಾನೆ ಮಾತನಾಡಿ ‘ಜನರಿಂದ ಆಯ್ಕೆಯಾದ ಬಿಜೆಪಿಯ ಶಾಸಕರು ಹಾಗೂ ಸಂಸದರು ಕೂಡ ಇಂಧನ ಬೆಲೆ ಏರಿಕೆಯಿಂದ ಅಸಮಾಧಾನಗೊಂಡಿದ್ದಾರೆ. ಆದರೆ, ಅವರಿಗೆ ದನಿ ಎತ್ತಲು ಸಾಧ್ಯವಾಗುತ್ತಿಲ್ಲ. ಮೋದಿ ತಪ್ಪು ಹೇಳಿಕೆಗಳನ್ನು ನೀಡಿ ಜನರ ದಾರಿ ತಪ್ಪಿಸುತ್ತಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಮಾಡುತ್ತಿರುವುದನ್ನೇ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅನುಕರಿಸಿಕೊಂಡು ಹೋಗುತ್ತಿದೆ. ರಾಜ್ಯಕ್ಕೆ ಜಿಎಸ್‌ಟಿಯಿಂದ ಬರಬೇಕಾದ ಹಣ, ಪ್ರವಾಹ ನಿರ್ವಹಣೆಗೆ ಬರಬೇಕಾದ ಹಣ ಬರುತ್ತಿಲ್ಲ’ ಎಂದು ಆರೋಪಿಸಿದರು.

ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಅಲ್ತಾಫ್ ಹಳ್ಳೂರ್, ಮುಖಂಡರಾದ ಸದಾನಂದ ವಿ. ಡಂಗನವರ, ಶಾಕೀರ ಸನದಿ, ಅನ್ವರ ಮುಧೋಳ, ಪಾರಸ್ಮಾಲ್‌ ಜೈನ್‌, ನವೀದ್‌ ಮುಲ್ಲಾ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಸೈಕಲ್‌ ತುಳಿದ ‘ಹಿರಿಯರು’

ಪಕ್ಷದ ಹಿರಿಯ ಮುಖಂಡರಾದ ಮಾಜಿ ಸಚಿವ 84 ವರ್ಷದ ಎ.ಎಂ. ಹಿಂಡಸಗೇರಿ ಕಿತ್ತೂರು ರಾಣಿ ಚನ್ನಮ್ಮ ವೃತ್ತದಿಂದ ಸೈಕಲ್‌ ತುಳಿದರು. ಮಾಜಿ ಸಂಸದ 82 ವರ್ಷದ ಐ.ಜಿ. ಸನದಿ ಐಟಿ ಪಾರ್ಕ್ ಮಾರ್ಗವಾಗಿ ಹೊಸೂರಿನ ಗಾಳಿ ದುರ್ಗಮ್ಮ ದೇವಸ್ಥಾನದ ವೃತ್ತದ ಮೂಲಕ ಭಗತ್‌ಸಿಂಗ್‌ ವೃತ್ತದ ತನಕ ಸೈಕಲ್ ಹೊಡೆದಿದ್ದು ವಿಶೇಷವಾಗಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು