ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ | ವೇಗದ ಬಸ್‌ ಪಕ್ಕದಲ್ಲೇ ಟ್ರಾಫಿಕ್‌ ಜಾಮ್!

Published 19 ನವೆಂಬರ್ 2023, 5:23 IST
Last Updated 19 ನವೆಂಬರ್ 2023, 5:23 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಬಿಆರ್‌ಟಿಎಸ್‌ ಬಸ್‌ ಸೇವೆ ಆರಂಭಿಸಿದಾಗ, ‘ಎಲ್ಲರೂ’ ಈ ಬಸ್‌ಗಳಲ್ಲೇ ಪ್ರಯಾಣಿಸುವರು ಎಂದೇ ಬಿಂಬಿಸಲಾಯಿತು. ವೇಗ, ಸುರಕ್ಷಿತ ಮತ್ತು ಆರಾಮದಾಯಕ ಪ್ರಯಾಣಕ್ಕೆ ಇದನ್ನೇ ಆಯ್ಕೆ ಮಾಡಿಕೊಳ್ಳಿ ಎಂಬ ಅಭಿಯಾನವೂ ನಡೆಯಿತು. ಆ ಬಸ್‌ಗಳಿಗಾಗಿ ಪ್ರತ್ಯೇಕ ಕಾರಿಡಾರ್ ನಿರ್ಮಾಣವಾಯಿತು. ಆದರೆ, ಇತರ ವಾಹನಗಳಲ್ಲಿ ಪ್ರಯಾಣಿಸುವವರ ಬಗ್ಗೆ ‘ಕಾಳಜಿ’ ವ್ಯಕ್ತವಾಗಲಿಲ್ಲ.

ಪ್ರತ್ಯೇಕ ಕಾರಿಡಾರ್‌ನಲ್ಲಿ ಬಿಆರ್‌ಟಿಎಸ್‌ ಬಸ್‌ಗಳು ಸಂಚರಿಸಿದರೆ, ಪಕ್ಕದ ರಸ್ತೆಯಲ್ಲಿ ಸರ್ಕಾರಿ–ಖಾಸಗಿ ಬಸ್‌, ಲಾರಿ, ಕಾರು, ಆಟೊರಿಕ್ಷಾ, ಬೈಕ್‌ಗಳು ಸೇರಿ ಇತರ ವಾಹನಗಳು ಸಂಚರಿಸಬೇಕು. ಬಿಆರ್‌ಟಿಎಸ್‌ ಬಸ್‌ಗಳು ವೇಗವಾಗಿ ಸಾಗಿದರೆ, ಪಕ್ಕದ ರಸ್ತೆಗಳಲ್ಲಿನ ವಾಹನಗಳ ನಿಧಾನಗತಿಯಲ್ಲಿ ಹೋಗುತ್ತವೆ.

‘ಕಾರಿಡಾರ್ ಪಕ್ಕದ ರಸ್ತೆಯು ಕೆಲವೆಡೆ ವಿಶಾಲವಿದ್ದರೆ, ಇನ್ನೂ ಕೆಲವೆಡೆ ಕಿರಿದಾಗಿದೆ. ಏಕಕಾಲಕ್ಕೆ ಎಲ್ಲಾ ವಾಹನಗಳು ಒಂದೇ ವೇಗದಲ್ಲಿ ಸಾಗಿದರೆ, ದಟ್ಟಣೆ ಉಂಟಾಗುತ್ತದೆ. ಸಣ್ಣಪುಟ್ಟ ಅಪಘಾತಗಳು ಸಂಭವಿಸುವ ಸಾಧ್ಯತೆಯೂ ಇರುತ್ತದೆ. ಕಿರಿದಾದ ರಸ್ತೆ ಸಾಗುವುದು ಕಷ್ಟವಾಗುತ್ತದೆ. ವಾಹನದ ದಟ್ಟಣೆ ತಪ್ಪಿಸಲು ಬಿಆರ್‌ಟಿಎಸ್‌ ಅಥವಾ ಪಾಲಿಕೆಯವರು ಪರ್ಯಾಯ ಕ್ರಮ ತೆಗೆದುಕೊಳ್ಳಬೇಕು’ ಎಂದು ಉದ್ಯಮಿ ಕಿರಣ್ ನಾಯ್ಕ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಿಆರ್‌ಟಿಎಸ್ ಪಕ್ಕದ ಮಾರ್ಗದಲ್ಲಿ ಹುಬ್ಬಳ್ಳಿಯಿಂದ ಧಾರವಾಡಕ್ಕೆ ಹೋಗುವಾಗ ಸಿಗ್ನಲ್‌ಗಳಲ್ಲಿ ನಿಂತಿರುತ್ತೇವೆ. ಬಲ ತಿರುವು ಪಡೆಯುವವರಿಗೆ ಸಿಗ್ನಲ್ ಇರುವುದಿಲ್ಲ. ಹೀಗಾಗಿ ವಾಹನಗಳು ಅಲ್ಲಿಯೇ ನಿಂತಿರುತ್ತವೆ. ಈ ಸಂದರ್ಭದಲ್ಲಿ ಎಡ ತಿರುವು ಪಡೆಯುವ ಮತ್ತು ಮುಂದೆ ಸಾಗುವ ಸಿಗ್ನಲ್‌ ಬಿದ್ದಿರುತ್ತದೆ. ದಟ್ಟಣೆ ಹೆಚ್ಚಾಗಿ ತೀವ್ರ ತೊಂದರೆಯಾಗುತ್ತಿದೆ’ ಎಂದು ಬೈಕ್ ಸವಾರ ಸಂದೇಶ ಹೇಳಿದರು.

‘ಹುಬ್ಬಳ್ಳಿಯಿಂದ ಧಾರವಾಡ ದವರೆಗೆ ಬಿಆರ್‌ಟಿಎಸ್‌ ಕಾಮಗಾರಿಗಾಗಿ 50ಕ್ಕೂ ಹೆಚ್ಚು ಬಸ್‌ ನಿಲ್ದಾಣಗಳನ್ನು ತೆರವು ಮಾಡಲಾಯಿತು. ಕಾಮಗಾರಿ ಮುಗಿದು ನಾಲ್ಕು ವರ್ಷವಾದರೂ ಅವುಗಳನ್ನು ಮತ್ತೆ ನಿರ್ಮಿಸಿಲ್ಲ. ಈ ಬಗ್ಗೆ ಹಲವು ಬಾರಿ ಪ್ರತಿಭಟನೆ ನಡೆಸಿ, ಸಂಬಂಧಿಸಿದವರಿಗೆ ಮನವಿ ಸಲ್ಲಿಸಿದರೂ ಸ್ಪಂದಿಸಿಲ್ಲ’ ಎಂದು ಭಾರತ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (ಎನ್‌ಎಸ್‌ಯುಐ) ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಇರ್ಫಾನ್ ಪಠಾಣ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಗರ ಸಾರಿಗೆ, ಬೇಂದ್ರೆ ಸಾರಿಗೆ ಬಸ್‌ಗಳು ಸರ್ವಿಸ್‌ ರಸ್ತೆಯಲ್ಲಿ ಸಂಚರಿಸುತ್ತವೆ. ನಿಲ್ದಾಣಗಳು ಇಲ್ಲದ ಕಾರಣ ಬಸ್‌ಗಳು ನಿಗದಿತ ಸ್ಥಳಗಳಲ್ಲಿ ನಿಲ್ಲದೆ, ಎಲ್ಲೆಂದರಲ್ಲಿ ನಿಲುಗಡೆ ಆಗುವ ಕಾರಣ ಓಡಿ ಹೋಗಿ ಬಸ್‌ ಹತ್ತಬೇಕು’ ಎಂದು ಅವರು ತಿಳಿಸಿದರು.

ಫುಟ್‌ಪಾತ್, ಪಾರ್ಕಿಂಗ್ ಸಮಸ್ಯೆ

ಬಿಆರ್‌ಟಿಎಸ್ ನಿಲ್ದಾಣಗಳಿರುವ ಸ್ಥಳಕ್ಕೆ ಸರಿಯಾಗಿ ಫೀಡರ್ ಸೇವೆ ಇಲ್ಲ. ಬಸ್‌ ಇಳಿದ ತಕ್ಷಣ ಆಟೊ ಹಾಗೂ ಇತರ ವಾಹನ ಸಿಗುವುದಿಲ್ಲ. ಕೆಲ ದೂರ ನಡೆದುಕೊಂಡೇ ಹೋಗಬೇಕು’ ಎಂದು ಧಾರವಾಡ ನಿವಾಸಿ ಅನುಸೂಯಮ್ಮ ತಿಳಿಸಿದರು.

ಕೆಲ ಕಡೆ ಪಾದಚಾರಿ ಮಾರ್ಗ ಒತ್ತುವರಿಯಾಗಿದ್ದು, ಪಾದಚಾರಿಗಳಿಗೆ ಸಮಸ್ಯೆಯಾಗುತ್ತಿದೆ.  ಪ್ರಯಾಣಿಕರು ತಮ್ಮ ವಾಹನಗಳನ್ನು ಬಿಆರ್‌ಟಿಎಸ್‌ ನಿಲ್ದಾಣದ ಬಳಿ ನಿಲ್ಲಿಸಲು ಪಾರ್ಕಿಂಗ್ ವ್ಯವಸ್ಥೆಯೂ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT