ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭರವಸೆ ಈಡೇರಿಕೆ ಗೊಂದಲದ ಗೂಡು, ಕಣ್ಣೊರೆಸುವ ತಂತ್ರ: ಕೇಂದ್ರ ಸಚಿವ ಜೋಶಿ ವ್ಯಂಗ್ಯ

Published : 3 ಜೂನ್ 2023, 8:57 IST
Last Updated : 3 ಜೂನ್ 2023, 8:57 IST
ಫಾಲೋ ಮಾಡಿ
Comments

ಹುಬ್ಬಳ್ಳಿ: ‘ಮಹಿಳೆಯರಿಗೆ ಬಸ್ ಪ್ರಯಾಣ ಉಚಿತ ಭರವಸೆಯೊಂದನ್ನು ಬಿಟ್ಟು ಉಳಿದ ನಾಲ್ಕು ಭರವಸೆಗಳು ಗೊಂದಲದ ಗೂಡಾಗಿವೆ. ಉಚಿತ ಭರವಸೆ ಈಡೇರಿಕೆಯಿಂದ ಆರ್ಥಿಕ ವ್ಯವಸ್ಥೆ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎನ್ನುವ ಕುರಿತು ಇನ್ನೂ ಸ್ಪಷ್ಟತೆ ನೀಡಿಲ್ಲ. ಇದು ಕಾಂಗ್ರೆಸ್‌ನ ಕಣ್ಣೊರೆಸುವ ತಂತ್ರವಾಗಿದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವ್ಯಂಗ್ಯವಾಡಿದರು.

ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣ ಐದು ಗ್ಯಾರಂಟಿಗಳನ್ನು ಈಡೇರಿಸುವ ಭರವಸೆ ನೀಡಿತ್ತು. ನನಗೂ ಉಚಿತ, ನಿನಗೂ ಉಚಿತ, ಬಸಯ್ಯಗೂ ಉಚಿತ, ರಂಗಯ್ಯಗೂ ಉಚಿತ ಎಂದು ಪ್ರಣಾಳಿಕೆಯಲ್ಲಿ ಯಾವುದೇ ಷರತ್ತು ವಿಧಿಸದೆ ಜನರನ್ನು ದಿಕ್ಕು ತಪ್ಪಿಸಿತ್ತು. ಈಗ 200 ಯೂನಿಟ್ ವಿದ್ಯುತ್‌ ಉಚಿತ ಭರವಸೆಗೆ, ಸರಾಸರಿ ಲೆಕ್ಕಾಚಾರ ಹಾಕಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಕೊಟ್ಟ ಹಾಗೆ ಆಗಬೇಕು. ಆದರೆ, ಯಾರಿಗೂ ಸಿಕ್ಕಿರಬಾರದು ಎಂಬ ಲೆಕ್ಕಾಚಾರ ಅವರದ್ದು. ಜೂನ್ 15ರವರೆಗೆ ಉಚಿತ ಭರವಸೆಯ ಲೆಕ್ಕಾಚಾರದಲ್ಲಿ ಮತ್ತಷ್ಟು ಬದಲಾವಣೆ ಆಗುವುದರಲ್ಲಿ ಅನುಮಾನವಿಲ್ಲ’ ಎಂದರು.

‘ಹತ್ತು ಕೆ.ಜಿ. ಅಕ್ಕಿ ವಿತರಣೆ ಬಗ್ಗೆ ಸ್ಪಷ್ಟತೆಯಿಲ್ಲ. ಈಗಾಗಲೇ ಐದು ಕೆ.ಜಿ‌. ಅಕ್ಕಿಯನ್ನು ಕೇಂದ್ರ ಸರ್ಕಾರ‌ ನೀಡುತ್ತಿದೆ. ಐದು ಕೆ.ಜಿ‌. ಅಕ್ಕಿ ರಾಜ್ಯ ಸರ್ಕಾರ, ಮತ್ತೆ ಐದು ಕೆ.ಜಿ. ಅಕ್ಕಿ ಕೇಂದ್ರ ಸರ್ಕಾರ ನೀಡುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಾಮಾಣಿಕವಾಗಿ ಹೇಳಲಿ. ಅದನ್ನು ಬಿಟ್ಟು, ಎಲ್ಲವೂ ತಾವೇ ನೀಡುತ್ತಿದ್ದೇವೆ ಎಂದು ಹೇಳುವುದು ಸರಿಯಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ ರಾಜ್ಯ ಸರ್ಕಾರ ರೈತರಿಗೆ ನೀಡುವ ಪ್ರೋತ್ಸಾಹ ಧನ ಮತ್ತು ಹಾಲಿನ ಪ್ರೋತ್ಸಾಹ ಧನವನ್ನು, ರಾಜ್ಯ ಸರ್ಕಾರ ವಾಪಸ್ಸು ಪಡೆಯಲಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಮುಖ್ಯಮಂತ್ರಿ ಉತ್ತರ ನೀಡಬೇಕು’ ಎಂದು ಆಗ್ರಹಿಸಿದರು.

‘ಕೇಂದ್ರ ಕ್ರೀಡಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಕುಸ್ತಿಪಟುಗಳ ಜೊತೆ ಮಾತುಕತೆ ನಡೆಸಿದ್ದಾರೆ. ಆದರೂ, ಅವರು ಮಾತು‌ ಕೇಳುತ್ತಿಲ್ಲ. ಆದಷ್ಟು ಬೇಗ ಸಮಸ್ಯೆಗೆ ಪರಿಹಾರ ಸಿಗಲಿದೆ’ ಎಂದರು.

‘ಕಳೆದ ಮೂರು ವರ್ಷಗಳಲ್ಲಿ ಯಾವುದೇ ರೈಲು ದುರಂತ ನಡೆದಿರಲಿಲ್ಲ. ಒಡಿಸ್ಸಾ ರೈಲು ದುರಂತ ದುರ್ದೈವ ಸಂಗತಿಯಾಗಿದ್ದು, ದೊಡ್ಡ ಅಪಘಾತ ಮೂಡಿಸಿದೆ. ದುರಂತದಲ್ಲಿ ಮೃತಪಟ್ಟವರ ಹಾಗೂ ಗಾಯಗೊಂಡವರ ಕುಟುಂಬಗಳಿಗೆ ಕೇಂದ್ರ ಸರ್ಕಾರ ಎಲ್ಲ ರೀತಿಯ ಸಹಾಯ ಮಾಡುತ್ತಿದೆ. ದುರಂತದ ಬಗ್ಗೆ ಸಮಗ್ರ ತನಿಖೆ ನಡೆಯಲಿದೆ’ ಎಂದು ಜೋಶಿ ಹೇಳಿದರು.

‘ನಿರುದ್ಯೋಗಿಗಳಿಗೆ ಉದ್ಯೋಗ ಸಿಕ್ಕಿದೆ’: ‘ಇಷ್ಟು ದಿನ ಕಾಂಗ್ರೆಸ್‌ ನಾಯಕರು ದೇಶದಲ್ಲಿ ನಿರುದ್ಯೋಗಗಳಾಗಿದ್ದರು. ಕರ್ನಾಟಕದಲ್ಲಿ ಸರ್ಕಾರ ರಚನೆಯಾಗುತ್ತಿದ್ದಂತೆ ಉದ್ಯೋಗ ಸಿಕ್ಕಿದೆ. ಹೀಗಾಗಿ ದೊಡ್ಡದಾಗಿ ಹಾರಾಡುತ್ತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಜನ ಪಾಠ ಕಲಿಸಲಿದ್ದಾರೆ. ಸಂಸತ್‌ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಅವರಿಗೆ ವಿರೋಧ ಪಕ್ಷದ ನಾಯಕರಾಗಲು ಸಹ ಅರ್ಹತೆಯಿಲ್ಲ. ಇದನ್ನು ಮರೆಯ ಬಾರದು. ಅಹಂಕಾರದಿಂದ ಮೆರೆದಾಡುವುದು ಸರಿಯಲ್ಲ’ ಎಂದು ಪ್ರಲ್ಹಾದ ಜೋಶಿ ಹೇಳಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT