ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ | ‘ಧರ್ಮದ ಹೆಸರಲ್ಲಿ ದ್ವಂದ್ವ ಸೃಷ್ಟಿ’

‘ವಚನ ದರ್ಶನ’ ಪುಸ್ತಕ ಬಿಡುಗಡೆ ಸಮಾರಂಭ
Published 7 ಆಗಸ್ಟ್ 2024, 16:19 IST
Last Updated 7 ಆಗಸ್ಟ್ 2024, 16:19 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಧರ್ಮದ ಹೆಸರಲ್ಲಿ ಕೆಲವರು ಸಮಾಜದಲ್ಲಿ ದ್ವಂದ್ವಗಳನ್ನು ಸೃಷ್ಟಿಸುತ್ತಿದ್ದಾರೆ.‌ ಧರ್ಮ ಎಂದರೆ ಪೂಜಾ ಪದ್ಧತಿಯಲ್ಲ, ಅದೊಂದು ಜೀವನ ಪದ್ಧತಿ’ ಎಂದು ರಾಷ್ಟ್ರೀಯ ಸ್ವಯಂ‌ಸೇವಕ ಸಂಘದ ಕರ್ನಾಟಕ ಉತ್ತರದ ಪ್ರಾಂತ ಕಾರ್ಯವಾಹ ರಾಘವೇಂದ್ರ ಕಾಗವಾಡ ಹೇಳಿದರು.

ಇಲ್ಲಿಯ ದೇಶಪಾಂಡೆ ನಗರದ ಸವಾಯಿ ಗಂಧರ್ವ ಸಭಾಭವನದಲ್ಲಿ ಸಾಮರಸ್ಯ ವೇದಿಕೆ, ಅರಿವು ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ‘ವಚನ ದರ್ಶನ’ ಪುಸ್ತಕ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದರು.

‘ಪ್ರತಿಯೊಂದಕ್ಕೂ ನಿಯಮಗಳಿವೆ, ಸಾರ್ವಕಾಲಿಕ ಸಂಗತಿಗಳಿವೆ. ಅದ್ಯಾವುದೂ ಜಾತಿಗೆ ಸಂಬಂಧಿಸಿದ್ದಲ್ಲ. ಮಾನವೀಯ ನೆಲೆಗಟ್ಟಲ್ಲಿ ಬದುಕು ಬಾಳುವುದಾಗಿದೆ. ದಯೆ ಮತ್ತು ಕರುಣೆಯೇ ಇಲ್ಲಿ ಧರ್ಮ. ಉಳ್ಳವರು ಇಲ್ಲದವರಿಗೆ ನೀಡುವುದು ಸಹ ಧರ್ಮ. ಆತ್ಮದ ನೆಲೆಯಲ್ಲಿ ಮನಸ್ಸುಗಳಿಗೂ ಸಂಸ್ಕಾರಬೇಕು. ಜೀವನ ಸುಖವಾಗಿರಬೇಕೆಂದರೆ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಅಗತ್ಯ. ಧರ್ಮವನ್ನು ಆಧಾರವಾಗಿಟ್ಟುಕೊಂಡು ಅರ್ಥ, ಕಾಮ ಈಡೇರಿಸಿಕೊಂಡು‌ ಮೋಕ್ಷದ ಹಾದಿ ಹಿಡಿಯಬೇಕು ಎನ್ನುವ ಸೂಕ್ಷ್ಮ ಸಂದೇಶವನ್ನು ನಮ್ಮ ದಾರ್ಶನಿಕರು ವಚನಗಳಲ್ಲಿ ತಿಳಿಸಿದ್ದಾರೆ’ ಎಂದರು.

‘ನಾನಾ ರೀತಿಯ ಜನರು ಇಲ್ಲಿದ್ದು, ಅವರೆಲ್ಲರ ಜೊತೆ ಸಹ ಜೀವನ ನಡೆಸುವ ಜವಾಬ್ದಾರಿ ನಮ್ಮದು. ಹೇಗೆ ಬದುಕಬೇಕೆನ್ನುವ ಜೀವನ ಕ್ರಮಗಳ ವಿಚಾರ ವಚನಗಳಲ್ಲಿದೆ. ಕುಟುಂಬ ಪದ್ಧತಿ, ಗುರುಪರಂಪರೆ, ವ್ಯವಸ್ಥೆಯಲ್ಲಿನ ವ್ಯವಹಾರ, ನಡವಳಿಕೆ, ಪ್ರೇಮಮಯ ಬದುಕು ಒಂದಕ್ಕೊಂದು ನಂಟಿದೆ. ಮನುಷ್ಯನ ಜೀವನ ಲೌಕಿಕಕ್ಕೆ ಸೀಮಿತವಾಗಬಾರದು.‌ ತಾನಷ್ಟೇ ಸುಖದಿಂದ ಇರುವುದಲ್ಲ, ಚರಾಚರ ಜೀವಿಗಳ‌ ಪೋಷಣೆ ಸಹ ಆಗಬೇಕು ಎನ್ನುವ ಅತ್ಯದ್ಭುತ ಸಂದೇಶವನ್ನು ವಚನಕಾರರು ತಿಳಿಸಿದ್ದಾರೆ’ ಎಂದು ಹೇಳಿದರು.

ಕೆಎಲ್ಇ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ, ‘ಅನೇಕ ದಾರ್ಶನಿಕರ ಮಾತುಗಳು ವಚನ ದರ್ಶನ ರೂಪದಲ್ಲಿ ಬಂದಿದೆ. ಬಸವಣ್ಣನವರು ಪ್ರತಿಯೊಬ್ಬರಿಗೂ ಅರ್ಥವಾಗುವ ಹಾಗೆ ವಚನ ರಚಿಸಿದ್ದಾರೆ. ಅವರಂತೆ ಹಲವಾರು ಶರಣರು ಭಾರದಲ್ಲಿ ಜನಿಸಿ, ದೇಶದ ಘನತೆ ಜಗತ್ತಿಗೆ ಸಾರಿದ್ದಾರೆ. ವಿದೇಶಗಳಲ್ಲಿ ನಡೆಯುತ್ತಿರುವ ಹಿಂಸಾಚಾರ, ಅನಾಚಾರ ಗಮನಿಸಿದರೆ ನಮ್ಮ ಸಂಸ್ಕೃತಿ ಉಳಿಸಿಕೊಂಡು ಹೋಗುವುದು ತೀರಾ ಅಗತ್ಯ‘ ಎಂದು ಅಭಿಪ್ರಾಯಪಟ್ಟರು.

ದೇವರ ಹುಬ್ಬಳ್ಳಿ ಸಿದ್ದಶಿವಯೋಗಿ ಸ್ವಾಮೀಜಿ‌ ಸಾನ್ನಿಧ್ಯ ವಹಿಸಿದ್ದರು. ಸಾಮರಸ್ಯ ವೇದಿಕೆ ಸದಸ್ಯ ಈರಣ್ಣ ಶಿರಸಂಗಿ, ಅರಿವು ಸಂಯೋಜಕ ಶರತ್ ದೇಶಪಾಂಡೆ, ಪತ್ರಕರ್ತ ಸುಶಿಲೇಂದ್ರ ಕುಂದರಗಿ, ಜನಮೇಜಯ ಉಮರ್ಜಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT