ಭಾನುವಾರ, ಆಗಸ್ಟ್ 1, 2021
27 °C

ಭೀತಿಯ ನಡುವೆಯೂ ವರಮಹಾಲಕ್ಷ್ಮಿ ಪೂಜೆ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಕೊರೊನಾ ಸೋಂಕಿನ ಆತಂಕದ ನಡುವೆಯೂ ನಗರದಲ್ಲಿ ಶುಕ್ರವಾರ ವರಮಹಾಲಕ್ಷ್ಮಿ ಪೂಜೆಯ ಸಂಭ್ರಮ ಕಂಡು ಬಂತು.

ಶ್ರಾವಣ ಮಾಸದ ಪ್ರಮುಖ ಹಬ್ಬವಾದ ವರಮಹಾಲಕ್ಷ್ಮಿ ಪೂಜೆಯಂದು ಗೌರಿ ಮೂರ್ತಿಗೆ ತರಹೇವಾರಿ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ಐದಾರು ತರಹದ ಹಣ್ಣುಗಳು, ಹೋಳಿಗೆ, ಕಡುಬು ಸೇರಿದಂತೆ ಐದಾರು ತರಹದ ಸಿಹಿ ತಿನಿಸುಗಳನ್ನು ಮಾಡಲಾಗಿತ್ತು. ಈ ಮೊದಲು ಪ್ರತಿ ವರ್ಷ ಸಂಜೆ ಮುತೈದೆಯರನ್ನು ಮನೆಗೆ ಕರೆಯಿಸಿ ಅರಿಶಿಣ ಮತ್ತು ಕುಂಕುಮ ನೀಡುವ ಶಾಸ್ತ್ರ ಮಾಡಲಾಗುತ್ತಿತ್ತು. ಸೋಂಕಿನ ಭೀತಿ ಇರುವ ಕಾರಣ ಈ ವರ್ಷ ಹಬ್ಬದ ಆಚರಣೆ ಆಯಾ ಮನೆಗಳಿಗಷ್ಟೇ ಸೀಮಿತವಾಗಿತ್ತು.

ನಗರದ ದಾಜೀಬಾನ ಪೇಟೆಯಲ್ಲಿರುವ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಬಾಳೆ ದಿಂಡು ಕಟ್ಟಿ, ಮೂರ್ತಿಗೆ ಹೂವಿನಿಂದ ವಿಶೇಷ ಅಲಂಕಾರ ಮಾಡಲಾಗಿತ್ತು. ಭಕ್ತರು ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿ ದೇವಿಯ ದರ್ಶನ ಪಡೆದರು. ಮನೆಗಳಲ್ಲಿಯೂ ಆಚರಣೆಯ ಸಡಗರ ಕಂಡು ಬಂತು.

ಮಾಸ್ಕ್‌ ಹಂಚಿಕೆ: ಸಾಂಪ್ರದಾಯಿಕ ಆಚರಣೆಯ ಜೊತೆಗೆ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸಲು ಗೋಕುಲ ರಸ್ತೆಯಲ್ಲಿರುವ ಅಕ್ಷಯ ಪಾರ್ಕ್‌ನ ವಿಜಯಲಕ್ಷ್ಮಿ ಕಟ್ಟಿಮಠ ಅವರು ತಮ್ಮ ಮನೆಗೆ ಬಂದಿದ್ದವರಿಗೆ ಮಾಸ್ಕ್‌ ನೀಡಿದರು.

‘ವರಮಹಾಲಕ್ಷ್ಮಿ ಪೂಜೆಗೆ ಎರಡ್ಮೂರು ದಿನಗಳಿಂದ ತಯಾರಿ ಮಾಡಿಕೊಂಡು, ಬೆಳಿಗ್ಗೆನಿಂದಲೇ ಅಲಂಕಾರ ಹಾಗೂ ಅಡುಗೆ ಮಾಡುವ ಸಂಭ್ರಮ ಒಂದೆಡೆಯಾದರೆ, ಸಂಜೆ ಮುತೈದೆಯರನ್ನು ಮನೆಗೆ ಪೂಜೆಗೆ ಆಹ್ವಾನಿಸುವುದು ಇನ್ನೊಂದು ದೊಡ್ಡ ಸಂಭ್ರಮ. ಕೊರೊನಾ ಕಾರಣಕ್ಕೆ ಈ ಬಾರಿ ಮನೆಗೆ ಯಾರನ್ನೂ ಕರೆದಿಲ್ಲ. ಮನೆಗೆ ಬಂದಿದ್ದ ಸಂಬಂಧಿಕರಿಗೆ ಮಾಸ್ಕ್‌ ನೀಡಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದೇನೆ’ ಎಂದು ವಿಜಯಲಕ್ಷ್ಮಿ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.