ಶನಿವಾರ, ಜುಲೈ 2, 2022
20 °C
ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿದ್ದ ಅಪರಾಧಿ

ಪತ್ನಿ ಕೊಲೆ: ಪತಿಗೆ ಜೀವಾವಧಿ ಶಿಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಪತ್ನಿಯನ್ನು ಕೊಲೆ ಮಾಡಿ ಆತ್ಮಹತ್ಯೆ ಎಂದು ಬಿಂಬಿಸಲು ಯತ್ನಿಸಿದ್ದ ಪತಿಗೆ ಇಲ್ಲಿನ ಒಂದನೇ ಸೆಷನ್ಸ್‌ ಕೋರ್ಟ್‌ ಬುಧವಾರ ಜೀವಾವಧಿ ಶಿಕ್ಷೆ ಹಾಗೂ ₹50 ಸಾವಿರ ದಂಡ ವಿಧಿಸಿದೆ. ಈ ಪೈಕಿ, ₹40 ಸಾವಿರವನ್ನು ಮೃತ ಪತ್ನಿಯ ಮಗಳಿಗೆ ನೀಡುವಂತೆ ಆದೇಶಿಸಿದೆ.

ಗದಗ ರಸ್ತೆಯ ಚಾಲುಕ್ಯ ನಗರದ ಕಿಶೋರ ಬೊಮ್ಮಾಜಿ ಶಿಕ್ಷೆಗೊಳಗಾದ ಅಪರಾಧಿ. 2011ರಲ್ಲಿ ಲವಿನಾ ಅವರನ್ನು ಮದುವೆಯಾಗಿದ್ದ ಬೊಮ್ಮಾಜಿ ಪತ್ನಿಯ ಶೀಲದ ಬಗ್ಗೆ ಶಂಕೆ ವ್ಯಕ್ತಪಡಿಸಿ ಕಿರುಕುಳ ನೀಡಲಾರಂಭಿಸಿದ್ದ. ಇದೇ ವಿಷಯಕ್ಕಾಗಿ 2018ರ ಮಾರ್ಚ್ 23ರಂದು ಜಗಳವಾಡಿ, ನೀರು ಕಾಯಿಸುವ ಹೀಟರ್‌ ವೈಯರ್‌ನಿಂದ ಪತ್ನಿಯ ಕುತ್ತಿಗೆಯನ್ನು ಬಿಗಿದು ಹತ್ಯೆ ಮಾಡಿದ್ದ.

ಆತ್ಮಹತ್ಯೆ ಎಂದು ಬಿಂಬಿಸುವುದಕ್ಕಾಗಿ ವೇಲ್‌ನಿಂದ ಮನೆಯ ಜಂತಿಗೆ ಮೃತದೇಹವನ್ನು ನೇತು ಹಾಕಿದ್ದ. ನಂತರ ತಾನೇ ವೇಲ್‌ ಕತ್ತರಿಸಿ ಕಿಮ್ಸ್‌ಗೆ ಸಾಗಿಸಿದ್ದ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಕೊಲೆ ಎಂದು ಸಾಬೀತಾಗಿತ್ತು. ಕೇಶ್ವಾಪುರ ಠಾಣೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದರು. ಇನ್‌ಸ್ಪೆಕ್ಟರ್‌ ಬಿ.ಆರ್. ಗಡ್ಡೇಕರ ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. 

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ದೇವೇಂದ್ರಪ್ಪ ಬಿರಾದಾರ ಅವರು ಶಿಕ್ಷೆ ಪ್ರಕಟಿಸಿದರು. ಸರ್ಕಾರಿ ಅಭಿಯೋಜಕಿ ಗಿರಿಜಾ ತಮ್ಮಿನಾಳ ವಾದ ಮಂಡಿಸಿದ್ದರು.

ಬೆಟ್ಟಿಂಗ್: ಆರೋಪಿ ಬಂಧನ:

ಕ್ರಿಕೆಟ್ ಬೆಟ್ಟಿಂಗ್ ಆರೋಪದ ಮೇಲೆ ಉಪನಗರ ಠಾಣೆ ಪೊಲೀಸರು, ವಿಕಾಸನಗರ ಪೆಟ್ರೋಲ್ ಬಂಕ್ ಬಳಿ ಬುಧವಾರ ವ್ಯಕ್ತಿಯೊಬ್ಬನನ್ನು ಬಂಧಿಸಿ ₹3,300 ನಗದು ಹಾಗೂ ಎರಡು ಮೊಬೈಲ್ ಜಪ್ತಿ ಮಾಡಿದ್ದಾರೆ. ಬಂಧನದ ಸಂದರ್ಭದಲ್ಲಿ ಮತ್ತೊಬ್ಬ ಪರಾರಿಯಾಗಿದ್ದಾನೆ. ಐಪಿಎಲ್ ಪಂದ್ಯಾವಳಿಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೋಲ್ಕತ ನೈಟ್ ರೈಡರ್ಸ್ ಪಂದ್ಯದ ಸಂದರ್ಭದಲ್ಲಿ ಆರೋಪಿ ಬೆಟ್ಟಿಂಗ್ ಆಡುವಾಗ ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಪತ್ರ ಬರೆದಿಟ್ಟು ಆತ್ಮಹತ್ಯೆ: ತಾಲ್ಲೂಕಿನ ಶಿರಗುಪ್ಪಿಯ ಚನ್ನಬಸವಯ್ಯ ಹಿರೇಮಠ (29) ಅವರು ನವಲೂರು ರೈಲು ನಿಲ್ದಾಣದ ಬಳಿ ರೈಲಿಗೆ ತಲೆ ಕೊಟ್ಟು ಬುಧವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳದಲ್ಲಿ ಮರಣ ಪತ್ರ ಸಿಕ್ಕಿದ್ದು, ಅದರಲ್ಲಿ ತನ್ನ ಸಾವಿಗೆ ಮೂವರು ವ್ಯಕ್ತಿಗಳು ಕಾರಣರಾಗಿದ್ದಾರೆ ಎಂದು ಹಿರೇಮಠ ಅವರು ಆರೋಪಿಸಿದ್ದಾರೆ. ಹುಬ್ಬಳ್ಳಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು