ಸೋಮವಾರ, ಮೇ 17, 2021
31 °C
ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಎಸ್‌.ಆರ್. ಪಾಟೀಲ ಹೇಳಿಕೆ

ಅಧಿವೇಶನದಲ್ಲಿ ಪ್ರವಾಹ, ಮಹದಾಯಿ ಬಗ್ಗೆ ದನಿ: ಎಸ್‌.ಆರ್. ಪಾಟೀಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಹುಬ್ಬಳ್ಳಿ: ‘ಫೆಬ್ರುವರಿಯಲ್ಲಿ ನಡೆಯಲಿರುವ ವಿಧಾನ ಮಂಡಲದ ಜಂಟಿ ಅಧಿವೇಶನದಲ್ಲಿ ರಾಜ್ಯದಲ್ಲಿ ಸಂಭವಿಸಿದ ಪ್ರವಾಹದ ನಿರ್ವಹಣೆ, ಕೃಷ್ಣಾ ಹಾಗೂ ಮಹದಾಯಿ ಯೋಜನೆ ಕುರಿತು ದನಿ ಎತ್ತಲಾಗುವುದು’ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್‌.ಆರ್. ಪಾಟೀಲ ಹೇಳಿದರು.

ಹುಬ್ಬಳ್ಳಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಅಧಿವೇಶನವನ್ನು ಬೆಳಗಾವಿಯಲ್ಲೇ ನಡೆಸಬೇಕು. ಇದರಿಂದ, ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಸ್ಪಂದನೆ ಸಿಗುತ್ತದೆ ಎಂದು ಒತ್ತಾಯಿಸಿದ್ದೆ. ಆದರೆ, ಬಿಜೆಪಿ ಸರ್ಕಾರಕ್ಕೆ ಈ ಭಾಗದ ಜನಪ್ರತಿನಿಧಿಗಳನ್ನು ಎದುರಿಸುವ ಧೈರ್ಯವಿಲ್ಲ. ಜತೆಗೆ, ಪ್ರವಾಹ ನಿರ್ವಹಣೆಯಲ್ಲಿ ತಮ್ಮ ವೈಫಲ್ಯ ಜಗಜ್ಜಾಹೀರಾಗುತ್ತದೆ ಎಂದು ಬೆಂಗಳೂರಿನಲ್ಲೇ ಅಧಿವೇಶನ ನಡೆಸುತ್ತಿದ್ದಾರೆ’ ಎಂದರು.

ಕೃಷ್ಣಾ ತೀರ್ಪು

‘ಕೇಂದ್ರದಲ್ಲೂ ಬಿಜೆಪಿ ಸರ್ಕಾರವೇ ಇರುವುದರಿಂದ, ಕೃಷ್ಣಾ ಮತ್ತು ಮಹದಾಯಿ ತೀರ್ಪಿನ ಗೆಜೆಟ್ ಅಧಿಸೂಚನೆ ಹೊರಡಿಸಿ ಯೋಜನೆ ಜಾರಿಗೆ ತರುವ ಸುವರ್ಣಾವಕಾಶ ರಾಜ್ಯ ಸರ್ಕಾರಕ್ಕಿದೆ. ಆದರೆ, ಎರಡೂ ಸರ್ಕಾರಗಳಿಗೆ ರಾಜ್ಯದ ಹಿತಾಸಕ್ತಿ ಬಗ್ಗೆ ಕಾಳಜಿ ಇಲ್ಲದಿರುವುದರಿಂದ, ಅಧಿಸೂಚನೆ ಹೊರಡಿಸಲು ಮೀನಮೇಷ ಎಣಿಸುತ್ತಿವೆ’ ಎಂದು ಟೀಕಿಸಿದರು.

‘ಕುಡಿಯುವ ನೀರಿನ ಉದ್ದೇಶದ ಮಹದಾಯಿ ಯೋಜನೆಗೆ ಅಧಿಸೂಚನೆ ಹೊರಡಿಸಲು ಯಾವುದೇ ಅಡ್ಡಿ ಇಲ್ಲ. ಆದರೆ, ಓಲೈಕೆ ರಾಜಕಾರಣದ ಕಾರಣಕ್ಕಾಗಿ ಬೇಕೆಂದೇ ಹಿಂದೇಟು ಹಾಕುತ್ತಿದ್ದಾರೆ. ಆ ಮೂಲಕ, ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ನಾಲ್ಕು ಜಿಲ್ಲೆಗಳ ಜನರಿಗೆ ಅನ್ಯಾಯ ಮಾಡುತ್ತಿದ್ದಾರೆ. ಇನ್ನಾದರೂ ಈ ಭಾಗದ ಕೇಂದ್ರ ಮತ್ತು ರಾಜ್ಯ ಸಚಿವರು ಮಹದಾಯಿ ಅಧಿಸೂಚನೆ ಹೊರಡಿಸಲು ಒತ್ತಡ ಹೇರಬೇಕು’ ಎಂದು ಆಗ್ರಹಿಸಿದರು.

ಸರ್ಕಾರ ವೈಫಲ್ಯ

‘ಪ್ರವಾಹ ನಿರ್ವಹಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಶೇ 75ರಷ್ಟು ಮತ್ತು ಅದಕ್ಕಿಂತ ಹೆಚ್ಚು ಹಾನಿಗೊಂಡಿರುವ ಮನೆಗಳಿಗೆ ಕೇವಲ ₹1 ಲಕ್ಷ ಪರಿಹಾರ ನೀಡಲಾಗಿದೆ. ಭಾಗಶಃ ಹಾನಿಗೊಂಡಿರುವ ಮನೆಗಳಿಗೆ ಕೇವಲ ₹25 ಸಾವಿರ ಕೊಟ್ಟಿದ್ದಾರೆ. ಇಷ್ಟರಲ್ಲಿ ಪ್ರವಾಹ ಸಂತ್ರಸ್ತರು ಸೂರು ನಿರ್ಮಿಸಿಕೊಳ್ಳಲು ಸಾಧ್ಯವೇ?’ ಎಂದು ಪ್ರಶ್ನಿಸಿದರು.

‘ರಾಜ್ಯದ 22 ಜಿಲ್ಲೆಗಳ 103 ತಾಲ್ಲೂಕುಗಳು ಪ್ರವಾಹದಿಂದ ಹಾನಿಗೊಂಡಿವೆ. ಲಕ್ಷಾಂತರ ಎಕರೆ ಬೆಳೆ ನಾಶವಾಗಿದೆ. ಸರ್ಕಾರವೇ ಅಂದಾಜಿಸಿದಂತೆ ₹38 ಸಾವಿರ ಕೋಟಿ ಹಾನಿಯಾಗಿದೆ. ಆದರೆ, ಕೇಂದ್ರದಿಂದ ಸಿಕ್ಕಿದ್ದು ಕೇವಲ ₹1,200 ಕೋಟಿ. ಇಷ್ಟು ಮೊತ್ತದಲ್ಲಿ ಪರಿಹಾರ ಒದಗಿಸಲು ಸಾಧ್ಯವೆ?’ ಎಂದು ಪ್ರಶ್ನಿಸಿದ ಅವರು, ‘ಕೇಂದ್ರದಲ್ಲಿ ಬಿಜೆಪಿಯೇ ಅಧಿಕಾರವಿದ್ದರೂ, ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಪರಿಹಾರ ತರಲು ಸಾಧ್ಯವಾಗಿಲ್ಲ’ ಎಂದು ವಾಗ್ದಾಳಿ ನಡೆಸಿದರು.

‘ರಾಜೀನಾಮೆ: ಪರಿಶೀಲಿಸಿ ತೀರ್ಮಾನ’

‘ಉಪ ಚುನಾವಣೆಯಲ್ಲಿ ಪಕ್ಷವು ಕಳಪೆ ಸಾಧನೆ ಮಾಡಿದ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ನೀಡಿರುವ ರಾಜೀನಾಮೆಯನ್ನು ಸ್ವೀಕರಿಸಬೇಕೇ, ಬೇಡವೇ ಎಂಬುದರ ಬಗ್ಗೆ ವರಿಷ್ಠರು ತೀರ್ಮಾನ ಕೈಗೊಳ್ಳುತ್ತಾರೆ. ಈ ಬಗ್ಗೆ, ಈಗಾಗಲೇ ರಾಜ್ಯದ ನಾಯಕರ ಅಭಿಪ್ರಾಯ ಸಂಗ್ರಹಿಸಿದ್ದಾರೆ’ ಎಂದು ಎಸ್‌.ಆರ್. ಪಾಟೀಲ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು