ಶನಿವಾರ, ಮೇ 15, 2021
24 °C

ಯುವತಿ ವಿವಸ್ತ್ರಗೊಳಿಸಿ ವಿಡಿಯೊ ಚಿತ್ರೀಕರಣ: ₹25 ಲಕ್ಷಕ್ಕೆ ಬ್ಲಾಕ್‌ಮೇಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ಯುವತಿಯ ಮನೆಗೆ ನುಗ್ಗಿ ಚಾಕುವಿನಿಂದ ಬೆದರಿಸಿದ ಯುವಕ, ಅವಳನ್ನು ವಿವಸ್ತ್ರಗೊಳಿಸಿ ಮೊಬೈಲ್‌ನಲ್ಲಿ ವಿಡಿಯೊ ಚಿತ್ರೀಕರಿಸಿ 4 ತೊಲೆ ಬಂಗಾರ ದೋಚಿದ್ದಾನೆ. ಅಲ್ಲದೆ, ₹25 ಲಕ್ಷ ನೀಡಿದಿದ್ದರೆ, ವಿಡಿಯೊ ವೈರಲ್‌ ಮಾಡುವುದಾಗಿ ಬ್ಲಾಕ್‌ಮೇಲ್‌ ಮಾಡಿದ್ದಾನೆ.

ಪ್ರಕರಣಕ್ಕೆ ಸಂಬಂಧಿಸಿ ಯುವತಿಯ ತಾಯಿ ನೀಡಿದ ದೂರಿನ ಮೇರೆಗೆ ಹಳೇಹುಬ್ಬಳ್ಳಿ ರಾಜೇಂದ್ರನಗರದ ಆಟೊ ಚಾಲಕ ಅನಿಲರಾಜ್‌ ಡೊಂಗ್ರೆ ವಿರುದ್ಧ ಹಳೇಹುಬ್ಬಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯುವತಿ ತಾಯಿ ಗೀತಾ ಸರ್ಕಾರಿ ಉದ್ಯೋಗಿಯಾಗಿದ್ದು, ಅವರು ಅನಿಲರಾಜ್‌ ಪರಿಚಯವಿದ್ದರು. ಅವರನ್ನು ಆಗಾಗ ಆಟೊದಲ್ಲಿ ಕಚೇರಿಗೆ ಕರೆದೊಯ್ದು ಬಿಡುತ್ತಿದ್ದ. ಜನವರಿ 21ರಂದು ಗೀತಾ ಕಚೇರಿಗೆ ತೆರಳಿದ್ದ ಸಂದರ್ಭದಲ್ಲಿ ಆರೋಪಿ ಅವರ ಮನೆಗೆ ಹೋಗಿ, ‘ತಾಯಿ ಅಕ್ಕಿ ಪಾಕೆಟ್‌ ಕಳುಹಿಸಿದ್ದಾರೆ. ಬಾಗಿಲು ತೆಗೆ’ ಎಂದು ಮಗಳಿಗೆ ಸುಳ್ಳು ಹೇಳಿ ಒಳಗೆ ಹೋಗಿದ್ದಾನೆ. ಬಾಗಿಲು ಬಂದ್‌ ಮಾಡಿ, ‘ನಾನು ಹೇಳಿದಂತೆ ಕೇಳಬೇಕು’ ಎಂದು ಬಟ್ಟೆ ತೆಗೆಯಲು ಹೇಳಿದ್ದಾನೆ. ಅದಕ್ಕೆ ಯುವತಿ ನಿರಾಕರಿಸಿದ್ದಕ್ಕೆ ಬೆಲ್ಟ್‌ನಿಂದ ಹೊಡೆದು ಚಾಕು ತೋರಿಸಿದ್ದಾನೆ. ಅದಕ್ಕೆ ಬೆದರಿ ಯುವತಿ ಬಟ್ಟೆ ತೆಗೆಯುವಾಗ, ಅದನ್ನು ವಿಡಿಯೊ ಮಾಡಿಕೊಂಡು ‘ಹೇಳಿದಂತೆ ಕೇಳಬೇಕು. ಇಲ್ಲದಿದ್ದರೆ ಸ್ನೇಹಿತರ ಮೊಬೈಲ್‌ಗೆ ವಿಡಿಯೊ ಕಳುಹಿಸುತ್ತೇನೆ’ ಎಂದು ಬೆದರಿಸಿದ್ದಾನೆ.

ನಂತರ ತಾಯಿ ಗೀತಾಗೆ ವಿಡಿಯೊ ವಿಷಯ ತಿಳಿಸಿ, ‘ಮಗಳ ಮರ್ಯಾದೆ ಹರಾಜು ಹಾಕುತ್ತೇನೆ’ ಎಂದು ಚಾಕು ತೋರಿಸಿ ಅವರಿಂದ 4 ತೊಲೆ ಬಂಗಾರ ತೆಗೆದುಕೊಂಡಿದ್ದಾನೆ. ಅಲ್ಲದೆ, ‘ನಿನ್ನ ಮಗಳಿಗೆ ನನ್ನ ಜೊತೆ ಹಾಗೂ ನಾನು ಹೇಳಿದವರ ಜೊತೆ ಮಲಗಲು ಹೇಳಬೇಕು. ಜೊತೆಗೆ ₹25 ಲಕ್ಷ ನೀಡಬೇಕು. ಇಲ್ಲದಿದ್ದರೆ ಬೆತ್ತಲೆಯಾಗಿರುವ ವಿಡಿಯೊ ವೈರಲ್‌ ಮಾಡುತ್ತೇನೆ’ ಎಂದು, ಗೀತಾ ಹಾಗೂ ಅವರ ಮಗಳಿಗೆ ವಿಡಿಯೊ ಕಳುಹಿಸಿದ್ದಾನೆ ಎಂದು ದೂರಿನಲ್ಲಿ ದಾಖಲಿಸಲಾಗಿದೆ.

ತಮ್ಮನ ಕೊಲೆಗೆ ಅಣ್ಣ ಯತ್ನ: ಮನೆಯಲ್ಲಿ ಪದೇ ಪದೇ ಜಗಳ ಮಾಡಿ ಮಾನಸಿಕ ಹಿಂಸೆ ನೀಡುತ್ತಿದ್ದಾನೆ ಎಂದು ಕೋಪಗೊಂಡ ಅಣ್ಣನೊಬ್ಬ, ತಮ್ಮನಿಗೆ ಚಾಕು ಇರಿದು ಕೊಲೆಗೆ ಯತ್ನಿಸಿದ ಪ್ರಕರಣ ಅಶೋಕನಗರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದೆ.

ಬೈರಿದೇವರಕೊಪ್ಪದ ರಮೇಶ ಶಿಶನಳ್ಳಿ ಗಾಯಗೊಂಡಿದ್ದು, ಕಿಮ್ಸ್‌ಗೆ ದಾಖಲಿಸಲಾಗಿದೆ. ಆರೋಪಿ ಶಿವಾನಂದ ಶಿಶನಳ್ಳಿ ಕೊಲೆಗೆ ಯತ್ನಿಸಿದ್ದಾನೆ. ರಮೇಶ ಇಡೀ ದಿನ ಜಗಳವಾಡುತ್ತ, ಮನೆಯಲ್ಲಿದ್ದವರಿಗೆಲ್ಲ ಮಾನಸಿಕ ಹಿಂಸೆ ನೀಡುತ್ತಿದ್ದ. ಇದರಿಂದ ಕೋಪಗೊಂಡ ತಮ್ಮನನ್ನು ಕೊಲೆ ಮಾಡುವ ಉದ್ದೇಶದಿಂದ ಬೈಕಿನಲ್ಲಿ ಜೆ.ಕೆ. ಸ್ಕೂಲ್‌ನ ಸಪ್ತಗಿರಿ ಬಡಾವಣೆಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಬೆನ್ನು, ಬಲ ಮತ್ತು ಎಡ ಪಕ್ಕೆಗೆ ಚಾಕು ಇರಿದು ಪರಾರಿಯಾಗಿದ್ದಾನೆ ಎಂದು ಅವರ ತಂದೆ ನಾಗಪ್ಪ ಶಿಶನಳ್ಳಿ ದೂರು ದಾಖಲಿಸಿದ್ದಾರೆ.

₹1.79 ಲಕ್ಷ ವಂಚನೆ: ಆನ್‌ಲೈನ್‌ನಲ್ಲಿ ಗದಗ ರಸ್ತೆ ಬೃಂದಾವನ ಕಾಲೊನಿಯ ಜೋಬ್‌ ಯೇಸುಮಲ್‌ ಅವರು ಸಾಲಕ್ಕಾಗಿ ಆನ್‌ಲೈನ್‌ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಪಡೆದ ವಂಚಕರು, ಸಾಲ ನೀಡುವುದಾಗಿ ನಂಬಿಸಿ ₹1.36 ಲಕ್ಷ ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ.

ಜೋಬ್‌ ಅವರು ₹10 ಲಕ್ಷಕ್ಕಾಗಿ ಆನ್‌ಲೈನ್‌ ಅರ್ಜಿ ಸಲ್ಲಿಸಿದ್ದರು. ಅದರ ಮಾಹಿತಿ ಪಡೆದ ವಂಚಕರು, ಸಾಲ ಮಂಜೂರಾಗಿದೆ ಎಂದು ನಂಬಿಸಿ ವಿವಿಧ ಶುಲ್ಕವೆಂದು ಹಣ ವರ್ಗಾಯಿಸಿಕೊಂಡಿದ್ದಾರೆ. ಹುಬ್ಬಳ್ಳಿ ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಭರಣ ವಶ; ಆರೋಪಿ ಬಂಧನ: ಕಳವು ಮಾಡಿಕೊಂಡು ಬಂದ ಬಂಗಾರ, ಬೆಳ್ಳಿ ಆಭರಣಗಳನ್ನು ಮಾರಾಟ ಮಾಡಲು ಯತ್ನಿಸಿದ ಬೀರಬಂದರ ಓಣಿ ನಿವಾಸಿ ಬಾಬಾಜಾನ್‌ ಸುದಾರ್ಜಿಯನ್ನು ಕಸಬಾ ಠಾಣೆ ಪೊಲೀಸರು ಬಂಧಿಸಿ, ₹ 1.79 ಲಕ್ಷದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ನ್ಯೂ ಇಂಗ್ಲಿಷ್‌ ಸ್ಕೂಲ್‌ ಹಿಂಭಾಗ ಆರೋಪಿ ಪತ್ತೆಯಾಗಿದ್ದು, ಆಭರಣಗಳ ಬಗ್ಗೆ ಪೊಲೀಸರು ವಿಚಾರಿಸಿದಾಗ ಕಳವು ಮಾಡಿ ತಂದಿರುವುದು ಎಂದು ತಿಳಿದು ಬಂದಿದೆ.

ಚಿನ್ನಾಭರಣ, ನಗದು ಕಳವು: ಉಣಕಲ್‌ ಟೀಚರ್ಸ್‌ ಕಾಲೊನಿಯ ಮಹೇಶ ಗುಗ್ಗರಿ ಅವರ ಮನೆ ಬಾಗಿಲು ಮುರಿದು, 20 ಗ್ರಾಂ ಚಿನ್ನಾಭರಣ ಹಾಗೂ ₹ 45 ಸಾವಿರ ನಗದು ಸೇರಿ ಒಟ್ಟು ₹ 1.05 ಲಕ್ಷ ಮೌಲ್ಯದ ಸಾಮಗ್ರಿ ಕಳವು ಮಾಡಲಾಗಿದೆ. ವಿದ್ಯಾನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಾಂಜಾ ವಶ: ಗಾಂಜಾ ಮಾರಾಟ ಮಾಡುತ್ತಿದ್ದ ನಗರದ ಸಲ್ಮಾ ಜಾಧವ ಎಂಬಾಕೆಯನ್ನು ಘಂಟಿಕೇರಿ ಪೊಲೀಸರು ಬಂಧಿಸಿ, 780 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ. ಇನ್‌ಸ್ಪೆಕ್ಟರ್‌ ಜೆ.ಆರ್. ನಿಕ್ಕಂ ನೇತೃತ್ವದ ತಂಡ ದಾಳಿ ನಡೆಸಿತ್ತು.

ಮೊಬೈಲ್‌ ಕಳವು: ಗೋಕುಲ ರಸ್ತೆ ಸವಣೂರು ಬಡಾವಣೆಯ ನಜೀರ್‌ಅಹ್ಮದ್‌ ಅವರ ಮನೆಯ ಹಜಾರದಲ್ಲಿ ಇಟ್ಟಿದ್ದ ₹ 24 ಸಾವಿರ ಮೌಲ್ಯದ ಎರಡು ಮೊಬೈಲ್‌ ಕಳವಾಗಿವೆ. ಗೋಕುಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿ ಬಂಧನ: ಗಣೇಶಪೇಟೆ ಬಿಂದರಗಿ ಓಣಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಸ್ಥಳೀಯ ನಿವಾಸಿ ಸುನೀಲ ಬಳ್ಳಾರಿ ಎಂಬಾತನನ್ನು ಶಹರ ಠಾಣೆ ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬೈಕ್‌ ಕಳವು: ಕಾರವಾರ ರಸ್ತೆಯ ರಾಮನಾಥ ಟೈಯರ್ಸ್ ಅಂಗಡಿ ಹಿಂಭಾಗ ನಿಲ್ಲಿಸಿದ್ದ ಕೇನ್‌ ಅಗ್ರಿಟೆಕ್‌ ಲಿಮಿಟೆಡ್‌ನ ನಿರ್ದೇಶಕ ಮಂಜುನಾಥ ಹುಂಬಿ ಅವರ ಬೈಕ್‌ ಕಳವು ಆಗಿದೆ. ಹಳೇ ಹುಬ್ಬಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು