ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿವೃಷ್ಟಿಯಾಗಿದ್ದರೂ ಕುಡಿಯುವ ನೀರಿಗೆ ಬರ, ತಿಂಗಳಿಂದ ಕಾಡುತಿದೆ ಸಮಸ್ಯೆ

Last Updated 17 ಮಾರ್ಚ್ 2020, 9:53 IST
ಅಕ್ಷರ ಗಾತ್ರ

ಆನವಟ್ಟಿ: ಸೊರಬ ತಾಲ್ಲೂಕಿನ ಗಡಿ ಭಾಗದ ಹಂಚಿ ತಾಂಡಾ ಹಾಗೂ ಶಿಕಾರಿಪುರ ತಾಲ್ಲೂಕಿನ ಗಡಿಭಾಗದ ಚಿಕ್ಕಮಾಗಡಿ ತಾಂಡಾದಲ್ಲಿ ಒಂದು ತಿಂಗಳಿಂದ ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ನಾಲ್ಕು ವರ್ಷ ಬರಗಾಲ ಅನುಭವಿಸಿದ್ದ ಗಡಿಭಾಗದ ಗ್ರಾಮಗಳ ಜನರು ಈ ವರ್ಷ ಅತಿವೃಷ್ಟಿಯಿಂದಾಗಿ ಕುಡಿಯುವ ನೀರಿಗೆ ತೊಂದರೆ ಇಲ್ಲ ಎಂದು ಭಾವಿಸಿದ್ದರು. ಆದರೆ ಒಂದು ತಿಂಗಳಿಂದ ಕೊಳವೆಬಾವಿಯಲ್ಲಿ ನೀರು ಕಡಿಮೆಯಾಗಿ, ಕುಡಿಯುವ ನೀರಿನ ಅಭಾವ ಸೃಷ್ಟಿಯಾಗಿದೆ.

ಹಂಚಿ ತಾಂಡಾದಲ್ಲಿ ಮೂರು ಕೊಳವೆಬಾವಿಗಳು ಇದ್ದು, ಎರಡರಲ್ಲಿ ನೀರು ಬತ್ತಿದೆ. ಇರುವ ಕೊಳವೆಬಾವಿಯಲ್ಲಿ ನೀರು ಕಡಿಮೆ ಇದ್ದು, ಗ್ರಾಮದಲ್ಲಿರುವ 100ಕ್ಕೂ ಹೆಚ್ಚು ಕುಟುಂಬಗಳಿಗೆ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ಕೆಲವೊಮ್ಮೆ ಬೋರ್‌ವೆಲ್ ಬಂದಾಗಿ
ಬಿಡುತ್ತದೆ.

ಗ್ರಾಮ ಪಂಚಾಯಿತಿಯವರು ಈಚೆಗೆ ಸ್ಥಗಿತಗೊಂಡಿರುವ ಕೊಳವೆಬಾವಿಯನ್ನು ಇನ್ನಷ್ಟು ಆಳಕ್ಕೆ ಕೊರೆಸಿದ್ದರೂ ಪ್ರಯೋಜನ ಆಗಿಲ್ಲ.

ಪದೇ ಪದೇ ಕಾಡುವ ವಿದ್ಯುತ್ ಸಮಸ್ಯೆ: ಚಿಕ್ಕಮಾಗಡಿ ತಾಂಡಾದಲ್ಲಿ ತಕ್ಕ ಮಟ್ಟಿಗೆ ಕೊಳವೆಬಾವಿಯಿಂದ ನೀರು ಸರಬರಾಜು ಆಗುತ್ತಿದ್ದರೂ ಪದೇ ಪದೇ ವಿದ್ಯುತ್ ಸ್ಥಗಿತವಾಗುವುದರಿಂದ ನೀರು ಪೂರೈಸಲು ಸಾಧ್ಯವಾಗದ ಸ್ಥಿತಿ ಇದೆ. ಕೊಳವೆಬಾವಿಯಿಂದ ಚಿಕ್ಕದಾಗಿ ನೀರು ಬರುವುದರಿಂದ ಬಿಂದಿಗೆ ತುಂಬಲು ಅರ್ಧಗಂಟೆ ಬೇಕಾಗುತ್ತದೆ.

‘ನಾವು ಕೂಲಿ ಕೆಲಸ ಮಾಡಿ ಬದುಕು ನಡೆಸುವ ಜನ. ಒಂದು ವಾರದಿಂದ ಕುಡಿಯುವ ನೀರಿಗಾಗಿ ದಿನವಿಡೀ ಕಾಯುವುದೇ ಆಗಿದೆ. ಕೂಲಿ ಕೆಲಸಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ ಎಂದು ಹೆಸರು ಹೇಳಲು ಇಚ್ಛಿಸದ ಮಹಿಳೆ ಅಳಲು ತೋಡಿಕೊಂಡರು. ಹಂಚಿ ತಾಂಡಾ ಮತ್ತು ಚಿಕ್ಕಮಾಗಡಿ ತಾಂಡಾದ ಗ್ರಾಮಸ್ಥರು ಸಂಬಂಧಿಸಿದ ಜನಪ್ರತಿನಿಧಿಗಳು ಹಾಗೂ ಇಲಾಖೆಯ ಅಧಿಕಾರಿಗಳು ಗಡಿ ಭಾಗ ಎಂದು ತಾತ್ಸಾರ ಮಾಡದೇ ಕುಡಿಯುವ ನೀರಿನ ಸಮಸ್ಯೆಯನ್ನು ತಕ್ಷಣಕ್ಕೆ ಬಗೆಹರಿಸಲು ಮುಂದಾಬೇಕು. ಇಲ್ಲದಿದ್ದರೆ ಹೋರಾಟ ಕೈಗೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT