ಮಂಗಳವಾರ, ಜೂನ್ 28, 2022
28 °C
ಎರಡು ಗುಂಪುಗಳ ನಡುವೆ ಕಲ್ಲು ತೂರಾಟ

ರಾಜಕೀಯ ವೈಷಮ್ಯ; ಇಬ್ಬರು ಪೊಲೀಸರು ಸೇರಿ 12 ಮಂದಿಗೆ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ಗ್ರಾಮ ಪಂಚಾಯ್ತಿ ಚುನಾವಣೆ ವೇಳೆ ಹುಟ್ಟಿಕೊಂಡಿದ್ದ ರಾಜಕೀಯ ವೈಷಮ್ಯದಿಂದಾಗಿ ತಾಲ್ಲೂಕಿನ ಹಾತಲಗೇರಿ ಗ್ರಾಮದಲ್ಲಿ ಗುರುವಾರ ಎರಡು ಗುಂಪುಗಳ ನಡುವೆ ಕಲ್ಲು ತೂರಾಟ ನಡೆದಿದ್ದು, ಇಬ್ಬರು ಪೊಲೀಸರು ಸೇರಿದಂತೆ 12 ಮಂದಿ ಗಾಯಗೊಂಡಿದ್ದಾರೆ.

‘ಸತೀಶ ದೊಡ್ಡಮನಿ ಮತ್ತು ಈರಪ್ಪ ಬೇಲೇರಿ ಅವರ ನಡುವಿನ ರಾಜಕೀಯ ವೈಷಮ್ಯ ಎರಡು ಸಮುದಾಯಗಳ ನಡುವಿನ ತಿಕ್ಕಾಟಕ್ಕೆ ಕಾರಣವಾಗಿದೆ. ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಈರಪ್ಪ ಬೇಲೇರಿ ವಿರುದ್ಧ ಅಲ್ಪ ಮತಗಳ ಅಂತರದಿಂದ ಸೋತಿದ್ದ ಸತೀಶ ದೊಡ್ಡಮನಿ ಆಗಿನಿಂದಲೂ ಹಗೆ ಸಾಧಿಸುತ್ತ ಬಂದಿದ್ದ’ ಎಂದು ಗ್ರಾಮಾಂತರ ಪೊಲೀಸ್‌ ಠಾಣೆ ಎಸ್‌ಐ ಅಜಿತ್‌ ಹೊಸಮನಿ ತಿಳಿಸಿದ್ದಾರೆ.

ಗ್ರಾಮದ ಗೋವಿಂದಪ್ಪ ಬರ್ಹಿದೆಸೆಗೆ ತೆರಳುತ್ತಿದ್ದಾಗ ಅದೇ ಗ್ರಾಮದ ಕೆಲವರು ಗುಂಪು ಕಟ್ಟಿಕೊಂಡು ಬಂದು ಹಲ್ಲೆ ನಡೆಸಿದ್ದಾರೆ. ಇದನ್ನು ಪ್ರಶ್ನಿಸಿದ ಗೋವಿಂದಪ್ಪನ ಮಗನನ್ನೂ ಥಳಿಸಿದ್ದಾರೆ. ಇದರಿಂದ ಕೆರಳಿದ ಹಲ್ಲೆಗೊಳಗಾದವರ ಗುಂಪು ಆರೋಪಿಗಳ ಓಣಿಗೆ ತೆರಳುತ್ತಿದ್ದರು. ಈ ವೇಳೆ ಗ್ರಾಮದಲ್ಲಿದ್ದ ಪೊಲೀಸರು ಗೋವಿಂದಪ್ಪನ ಗುಂಪಿಗೆ ತಡೆಯೊಡ್ಡಿದರು. ಈ ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ಕಲ್ಲು ತೂರಾಟ ನಡೆದಿದೆ.

‘ರಾಜಕೀಯ ವೈಷಮ್ಯದಿಂದ ನಡೆದ ಕಲ್ಲು ತೂರಾಟದಲ್ಲಿ ಇಬ್ಬರು ಪೊಲೀಸರು ಸೇರಿದಂತೆ ಎರಡು ಗುಂಪುಗಳ ತಲಾ ಐದು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗ್ರಾಮದಲ್ಲಿ ಪೊಲೀಸ್‌ ಬಂದೋಬಸ್ತ್‌ ಹಾಕಲಾಗಿದ್ದು, ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ’ ಎಂದು ಡಿವೈಎಸ್‌ಪಿ ಶಿವಾನಂದ ಪವಾಡಶೆಟ್ಟರ ತಿಳಿಸಿದ್ದಾರೆ.

ಗದಗ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗೊಲ್ಲ ಸಮುದಾಯ ಎಂಟು ಮಂದಿ ಹಾಗೂ ಪರಿಶಿಷ್ಟ ಸಮುದಾಯದ 9 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು