ಲಕ್ಷ್ಮೇಶ್ವರ: ಗ್ರಾಮೀಣ ಮಕ್ಕಳನ್ನು ಸರ್ಕಾರಿ ಶಾಲೆಗಳತ್ತ ಸೆಳೆಯಲು ಲಕ್ಷ್ಮೇಶ್ವರ ತಾಲ್ಲೂಕಿನ ಗೋವನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ‘ಶ್ರಾವಣ ಸಿರಿ- ಸಿಹಿ ಭೋಜನ’ ಎಂಬ ವಿನೂತನ ಕಾರ್ಯಕ್ರಮ ಅನುಷ್ಠಾನ ಮಾಡಿದ್ದಾರೆ.
ಶ್ರಾವಣ ಮಾಸದಾದ್ಯಂತ ಮಧ್ಯಾಹ್ನದ ಬಿಸಿಯೂಟದಲ್ಲಿ ಸಿಹಿಪದಾರ್ಥ ನೀಡಲಾಯಿತು. ಶಾಲೆಯಲ್ಲಿ 1ನೇ ತರಗತಿಯಿಂದ 8ನೇ ತರಗತಿಯವರೆಗೂ 125 ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದು, ಈ ವಿನೂತನ ಯೋಜನೆಯಿಂದ ಸಂತಸಗೊಂಡಿದ್ದಾರೆ.
ಎಸ್‌ಡಿಎಂಸಿ ಸದಸ್ಯರ, ಗ್ರಾಮಸ್ಥರ ಹಾಗೂ ದಾನಿಗಳ ಸಹಕಾರದಿಂದ ವಿದ್ಯಾರ್ಥಿಗಳಿಗೆ ಬಿಸಿಯೂಟದ ಜೊತೆಗೆ ಪ್ರತಿದಿನ ಜಿಲೇಬಿ, ಬೂಂದಿ, ಮೈಸೂರು ಪಾಕ್, ಶಾವಿಗೆ ಪಾಯಸ, ಕೇಸರಿಬಾತ್, ಹೋಳಿಗೆ, ಗೋಧಿ ಹುಗ್ಗಿ ವಿತರಿಸಲಾಯಿತು.
ಈ ಯೋಜನೆ ಪರಿಣಾಮಕಾರಿಯಾಗಿದ್ದು, ವಿದ್ಯಾರ್ಥಿಗಳು ಗೈರಾಗದೆ ಪ್ರತಿದಿನವೂ ಶಾಲೆಗೆ ಹಾಜರಾಗುತ್ತಿದ್ದರು. ಮುಂದಿನ ದಿನಗಳಲ್ಲೂ ಯೋಜನೆ ಮುಂದುವರಿಸಿಕೊಂಡು ಹೋಗುವ ಯೋಜನೆ ಶಾಲೆಯ ಶಿಕ್ಷಕರದ್ದಾಗಿದೆ.
‘ಅನೇಕ ವಿದ್ಯಾರ್ಥಿಗಳು ಶಾಲೆಗೆ ಗೈರಾಗುತ್ತಿದ್ದ ಕಾರಣ ಶಿಕ್ಷಕರು ಸಾರ್ವಜನಿಕರ ಸಹಭಾಗಿತ್ವದಲ್ಲಿ ಈ ಯೋಜನೆ ಜಾರಿಗೆ ತಂದಿದ್ದಾರೆ. ಸಿಹಿ ಪದಾರ್ಥ ನೀಡಲು ದಿನವೊಂದಕ್ಕೆ ₹1,500ರಿಂದ ₹2,000 ಖರ್ಚಾಗುತ್ತಿತ್ತು. ಗ್ರಾಮಸ್ಥರು ಆರ್ಥಿಕ ನೆರವು ನೀಡಿದ್ದರಿಂದ ಈ ಯೋಜನೆ ಯಶಸ್ವಿಯಾಗಿದೆ. ಪ್ರತಿಯೊಂದೂ ಗ್ರಾಮಗಳಲ್ಲಿ ಈ ರೀತಿಯ ಸಹಕಾರ ನೀಡಿದರೆ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಿಸಬಹುದು’ ಎನ್ನುತ್ತಾರೆ ಬಿಇಒ ಜಿ.ಎಂ.ಮುಂದಿನಮನಿ.
ತಾಲ್ಲೂಕಿನ ಸೋಗಿವಾಳ ಹಿರೇಮಲ್ಲಾಪೂರ ಲಕ್ಷ್ಮೇಶ್ವರದ ಪ್ರೌಢಶಾಲೆಗಳಲ್ಲಿಯೂ ಸಿಹಿಯೂಟ ಭೋಜನ ನೀಡಲಾಗುತ್ತಿದೆ. ಇದು ಮಾದರಿ ಯೋಜನೆಯಾಗಿದೆ
– ಎಚ್.ಎಸ್.ರಾಮನಗೌಡ, ತಾಲ್ಲೂಕು ಅಕ್ಷರ ದಾಸೋಹ ಕಾರ್ಯಕ್ರಮದ ಸಹ ನಿರ್ದೇಶಕ