ನರಗುಂದ: ಪಟ್ಟಣದ ಪುರಸಭೆ ಅಧ್ಯಕ್ಷರಾಗಿ 8ನೇ ವಾರ್ಡಿನ ಅನ್ನಪೂರ್ಣ ಸಿದ್ದಪ್ಪ ಯಲಿಗಾರ , ಉಪಾಧ್ಯಕ್ಷರಾಗಿ 20ನೇ ವಾರ್ಡಿನ ಕಾಶವ್ವ ಬಸಪ್ಪ ಮಳಗಿ ಅವರು ಸೋಮವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು. ಈ ಮೂಲಕ ಬಿಜೆಪಿಗರೇ ಮತ್ತೆ ಅಧಿಕಾರದ ಗದ್ದುಗೆ ಏರಿದರು.
ಎರಡು ಸ್ಥಾನಕ್ಕೆ ತಲಾ ಒಬ್ಬೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿಯಾಗಿದ್ದ ತಹಶೀಲ್ದಾರ್ ಶ್ರೀಶೈಲ ತಳವಾರ ಅವರು ಅಧ್ಯಕ್ಷ, ಉಪಾಧ್ಯಕ್ಷರನ್ನು ಘೋಷಣೆ ಮಾಡಿದರು. ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಶಾಸಕ ಸಿ.ಸಿ.ಪಾಟೀಲ, ಸಂಸದ ಪಿ.ಸಿ.ಗದ್ದಿಗೌಡರ ಅಭಿನಂದಿಸಿದರು.
ಶಾಸಕ ಸಿ.ಸಿ.ಪಾಟೀಲ ಮಾತನಾಡಿ, ‘ಅಭಿವೃದ್ಧಿ ಪರ ಆಡಳಿತ ನಡೆಸಬೇಕು. ಪಟ್ಟಣದ ಪ್ರತಿ ವಾರ್ಡಿನಲ್ಲೂ ಸಂಚರಿಸಿ ಸಮಸ್ಯೆಗಳನ್ನು ಆಲಿಸಬೇಕು. ಇಲ್ಲಿ 25 ವರ್ಷಗಳಿಂದ ಸುದೀರ್ಘ ಅವಧಿಯ ಆಡಳಿತವನ್ನು ಬಿಜೆಪಿ ನಡೆಸುತ್ತಾ ಬಂದಿದೆ’ ಎಂದರು.
‘ನನ್ನ ಹಿಂದಿನ ಅಧಿಕಾರದ ಅವಧಿಯಲ್ಲಿ ನಗರ ಅಭಿವೃದ್ಧಿಯಾಗಿದೆ. ಉಳಿದ ಅಭಿವೃದ್ಧಿ ಕೆಲಸ ಪೂರ್ಣಗೊಳಿಸಬೇಕು. ಇದೀಗ ಕಾಂಗ್ರೆಸ್ ಸರ್ಕಾರದಿಂದ ಅಭಿವೃದ್ಧಿ ಕಾರ್ಯಕ್ಕೆ ಯಾವುದೇ ಅನುದಾನ ಬಂದಿಲ್ಲ. ಇದರ ನಡುವೆಯೂ ಪಟ್ಟಣವನ್ನು ಅಭಿವೃದ್ಧಿಯತ್ತ ಮುನ್ನಡೆಸಬೇಕು’ ಎಂದು ಸಲಹೆ ನೀಡಿದರು.
ಪ್ರಮುಖರಾದ ಎಸ್.ಆರ್. ಪಾಟೀಲ, ಬಸು ಪಾಟೀಲ, ಎ.ಎಂ.ಹುಡೇದ, ಸಂಭಾಜಿ ಕಾಶೀದ, ಶಿವಾನಂದ ಮುತವಾಡ, ಶಂಕರ ಪಲ್ಟನಕರ, ಅನೀಲ ಧರಿಯಣ್ಣವರ ಇತರರು ಇದ್ದರು.