ಮಂಗಳವಾರ, ಅಕ್ಟೋಬರ್ 4, 2022
25 °C

ನನ್ನನ್ನು ಮಂತ್ರಿ ಮಾಡದಿರಲು ಷಡ್ಯಂತ್ರ: ಯತ್ನಾಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಲಕ್ಷ್ಮೇಶ್ವರ: ‘ನಾನು ಮಂತ್ರಿ ಆಗಬಾರದು ಎಂದು ನಮ್ಮವರು ಮತ್ತು ಕಾಂಗ್ರೆಸ್‍ನವರು ಷಡ್ಯಂತ್ರ ನಡೆಸುತ್ತಿದ್ದಾರೆ’ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದರು.

ಪಟ್ಟಣದಲ್ಲಿ ಭಾನುವಾರ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ಮೆರವಣಿಗೆಗೂ ಮುನ್ನ ನಡೆಸದ ಸಭೆಯಲ್ಲಿ ಅವರು ಮಾತನಾಡಿದರು.

‘ನಾನು ಗೃಹಸಚಿವನಾದರೆ ಹಿಂದೂಗಳ ಹತ್ಯೆ ಮಾಡುವವರ ವಿರುದ್ಧ ಎನ್‍ಕೌಂಟರ್ ಮಾಡಿಸುತ್ತೇನೆ ಎಂಬ ಭಯ ಎಲ್ಲರಲ್ಲೂ ಇದೆ. ಹೀಗಾಗಿ ನನ್ನನ್ನು ಮಂತ್ರಿ ಮಾಡಲು ನಮ್ಮವರು ಮತ್ತು ಕಾಂಗ್ರೆಸ್‍ನವರು ಹೆದರುತ್ತಿದ್ದಾರೆ’ ಎಂದು ಹೇಳಿದ ಅವರು, ‘ಮುಂದಿನ ದಿನಗಳಲ್ಲಿ ನಾನು ಮಂತ್ರಿ ಆಗೇ ಆಗುತ್ತೇನೆ. ಅದರಲ್ಲೂ ಗೃಹ ಸಚಿವನೇ ಆಗುತ್ತೇನೆ’ ಎಂದರು.

‘ಒಂದು ವೇಳೆ ನಾನು ಮುಖ್ಯಮಂತ್ರಿ ಆದರೆ ಒಬ್ಬ ಜೈಲಿಗೆ ಮತ್ತೊಬ್ಬ ಕಾಡಿಗೆ ಹೋಗುತ್ತಾನೆ’ ಎಂದು ಕುಟುಕಿದರು.

‘ಮಹಾತ್ಮಾ ಗಾಂಧಿ ಒಬ್ಬರೇ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿ ಕೊಟ್ಟಿಲ್ಲ. ವೀರ ಸಾರ್ವಕರ್, ಸುಭಾಷಚಂದ್ರ ಭೋಷ್, ಬಾಲಗಂಗಾಧರ ತಿಲಕ, ಭಗತ್‍ಸಿಂಗ್ ಹೀಗೆ ಸಾವಿರಾರು ಜನರು ತಮ್ಮ ಪ್ರಾಣವನ್ನೇ ಅರ್ಪಿಸಿದ್ದಾರೆ. ಕಾಂಗ್ರೆಸ್‍ನವರು ಸಂವಿಧಾನ ಶಿಲ್ಪಿ ಡಾ.ಬಿಆರ್. ಅಂಬೇಡ್ಕರ್ ಅವರಿಗೂ ಅನ್ಯಾಯ ಮಾಡಿದೆ. ಅವರ ಅಂತ್ಯಕ್ರಿಯೆಗೂ ದೆಹಲಿಯಲ್ಲಿ ಕಾಂಗ್ರೆಸ್ ಜಾಗ ನೀಡಲಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ‘ದಿ ಪಾರ್ಟಿಷನ್ ಆಫ್ ಪಾಕಿಸ್ತಾನ’ ಪುಸ್ತಕದಲ್ಲಿ ಅಂಬೇಡ್ಕರ್ ಅವರು ನಮ್ಮ ಭಾರತವನ್ನು ಒಡೆಯಬೇಡಿ, ಅನಿವಾರ್ಯತೆ ಬಂದರೆ ಭಾರತದಲ್ಲಿನ ಮುಸ್ಲಿಂರನ್ನು ಪಾಕಿಸ್ತಾನಕ್ಕೆ ಮತ್ತು ಅಲ್ಲಿನ ಹಿಂದೂಗಳನ್ನು ಭಾರತಕ್ಕೆ ಕರೆತರಬೇಕು’ ಎಂದು ಸ್ಪಷ್ಟವಾಗಿ ಹೇಳಿದ್ದಾರೆ’ ಎಂದರು.

‘ಅಮೀರ್ ಖಾನ್, ಶಾರುಖಾನ್, ಸಲ್ಮಾನಖಾನ್ ಅವರು ಭಾರತದಲ್ಲಿ ಹಣ ಗಳಿಸಿ ಪಾಕಿಸ್ತಾನದಲ್ಲಿ ಭೂಕಂಪ ಆದರೆ ಅಲ್ಲಿಗೆ ಹಣ ಕೊಟ್ಟು ಕಳುಹಿಸುತ್ತಾರೆ. ಅಷ್ಟು ಪ್ರೀತಿ ಇದ್ದರೆ ಇವರೂ ಅಲ್ಲಿಗೇ ಹೋಗಲಿ’ ಎಂದು ಕಿಡಿಕಾರಿದರು.

‘ನಮ್ಮ ರಾಜ್ಯದ ಪೊಲೀಸರು ಸಶಕ್ತರಾಗಿದ್ದಾರೆ. ಅವರಿಗೆ ಅವರ ಕರ್ತವ್ಯವನ್ನು ಮಾಡಲು ರಾಜಕಾರಣಿಗಳು ಬಿಡಬೇಕು. ಪ್ರಧಾನಿ ನರೇಂದ್ರ ಮೋದಿಯವರು ಸೈನಿಕರಿಗೆ ಸ್ವಾತಂತ್ರ್ಯ ಕೊಟ್ಟಂತೆ ಪೊಲೀಸರಿಗೂ ಕೊಟ್ಟರೆ ಒಬ್ಬನೇ ಒಬ್ಬ ಹಿಂದೂ ಯುವಕನ ಹತ್ಯೆ ಆಗಲು ಅವರು ಬಿಡುವುದಿಲ್ಲ’ ಎಂದು ಹೇಳಿದ ಅವರು, ‘ನಾನು ಗೃಹಸಚಿವನಾದರೆ ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡುತ್ತೇನೆ. ಪದೇ ಪದೇ ನಡೆಯುತ್ತಿರುವ ಹಿಂದೂ ಹತ್ಯೆಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಈಗಾಗಲೇ ಮುಖ್ಯಮಂತ್ರಿ ಮತ್ತು ಗೃಹ ಸಚಿವರಿಗೂ ಸ್ಪಷ್ಟವಾಗಿ ತಿಳಿಸಿದ್ದೇನೆ’ ಎಂದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು