ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದ್ರಯಾನಕ್ಕೆ ಮುಂಡರಗಿ ಯುವಕನ ಕೊಡುಗೆ

ಅವಕಾಶ ದೊರೆತರೆ ಅಂತರಿಕ್ಷಕ್ಕೂ ತೆರಳಲು ಸಿದ್ಧ ಎನ್ನುವ ಯುವ ವಿಜ್ಞಾನಿ
Published 25 ಆಗಸ್ಟ್ 2023, 5:36 IST
Last Updated 25 ಆಗಸ್ಟ್ 2023, 5:36 IST
ಅಕ್ಷರ ಗಾತ್ರ

ಕಾಶೀನಾಥ ಬಿಳಿಮಗ್ಗದ

ಮುಂಡರಗಿ: ಕಳೆದ ಎರಡು ದಿನಗಳಿಂದ ಚಂದ್ರಯಾನ-3ರ ಯಶಸ್ಸಿನ ಅಲೆಯಲ್ಲಿ ಇಡೀ ದೇಶವೇ ತೇಲಾಡುತ್ತಲಿದೆ. ಇಸ್ರೊ ವಿಜ್ಞಾನಿಗಳ ಸಾಧನೆಯನ್ನು ವಿಶ್ವವೇ ಹಾಡಿ ಹೊಗಳುತ್ತಿದೆ. ಇಸ್ರೊ ಕೈಗೊಂಡಿದ್ದ ಚಂದ್ರಯಾನ-3ರಲ್ಲಿ ಪಟ್ಟಣದ ಯುವ ವಿಜ್ಞಾನಿ ಬಸವರಾಜ ವೆಂಕಣ್ಣ ಕಲ್ಲಕುಟಿಗರ ಅವರು ಪಾಲ್ಗೊಳ್ಳುವ ಮೂಲಕ ಜಿಲ್ಲೆ ಹಾಗೂ ತಾಲ್ಲೂಕಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಪಟ್ಟಣದ ಸರ್ಕಾರಿ ಕನ್ನಡ ಶಾಲೆ, ಸ್ವಾಮಿ ವಿವೇಕಾನಂದ ಶಾಲೆ ಹಾಗೂ ಜಗದ್ಗುರು ಅನ್ನದಾನೀಶ್ವರ ಶಾಲೆಗಳಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಮುಗಿಸಿ ಗದಗ ಹಾಗೂ ತುಮಕೂರಿನಲ್ಲಿ ಉನ್ನತ ಶಿಕ್ಷಣ ಪಡೆದುಕೊಂಡಿರುವ ಬಸವರಾಜ ಆರು ವರ್ಷಗಳಿಂದ ಇಸ್ರೊದಲ್ಲಿ ಹಿರಿಯ ಶ್ರೇಣಿ ವಿಜ್ಞಾನಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇಸ್ರೊ ಕೈಗೊಂಡಿದ್ದ ಚಂದ್ರಯಾನ-2 ಹಾಗೂ ಚಂದ್ರಯಾನ-3ರಲ್ಲಿ ಪ್ರಮುಖ ಕಾರ್ಯನಿರ್ವಹಿಸುವ ಮೂಲಕ ಹಿರಿಯ ಅಧಿಕಾರಿಗಳಿಂದ ಸೈ ಎನಿಸಿಕೊಂಡಿದ್ದಾರೆ. ಚಂದ್ರನ ಕಕ್ಷೆಗೆ ಸೇರಿದ ವಿಕ್ರಮ್ ಅನ್ನು ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡುವ ಗುರುತರ ಜವಾಬ್ದಾರಿ ಹೊತ್ತಿದ್ದ ತಂಡದಲ್ಲಿ ಬಸವರಾಜ ಅವರು ಕಾರ್ಯನಿರ್ವಹಿಸಿದ್ದಾರೆ.

ಶೂನ್ಯ ಗುರುತ್ವ ಪ್ರದೇಶದಲ್ಲಿ ವಿಕ್ರಮ್ ಅಥವಾ ತತ್ಸಮಾನವಾದ ಯಂತ್ರವನ್ನು ಸುರಕ್ಷಿತವಾಗಿ ಹಾಗೂ ಯಶಸ್ವಿಯಾಗಿ ನಿಗದಿತ ಸ್ಥಳದಲ್ಲಿ ಇಳಿಸುವ ಕುರಿತಂತೆ ಬಸವರಾಜ ಹಾಗೂ ಅವರ ತಂಡದವರು ಡ್ರೋಣ್‌ ಹಾಗೂ ಹೆಲಿಕಾಪ್ಟರ್ ಮಾದರಿಯ ಯಂತ್ರಗಳ ನೆರವಿನಿಂದ 2020-21ರಲ್ಲಿ ಚಿತ್ರದುರ್ಗ, ಚಳ್ಳಕೇರಿ ಮೊದಲಾದ ಭಾಗಗಳಲ್ಲಿ ಯಶಸ್ವಿ ಪ್ರಯೋಗಗಳನ್ನು ಕೈಗೊಂಡಿದ್ದರು.

ವಿಕ್ರಮ್ ಅನ್ನು ಚಂದ್ರನ ಕಕ್ಷೆಗೆ ಸೇರಿಸುವುದು ಇಸ್ರೊ ವಿಜ್ಞಾನಿಗಳಿಗೆ ಸುಲಭವಾದ ಕಾರ್ಯವಾಗಿತ್ತು. ಆ ನಂತರದ ಕಾರ್ಯವೇ ತುಂಬಾ ಸಂಕೀರ್ಣ ಹಾಗೂ ಕ್ಲಿಷ್ಟಕರವಾಗಿತ್ತು. ಚಂದ್ರನ ಕಕ್ಷೆಗೆ ಸೇರಿದ ವಿಕ್ರಮ್ ಅನ್ನು ನಿಧಾನವಾಗಿ, ಸುರಕ್ಷಿತವಾಗಿ ಹಾಗೂ ನಿಶ್ಚಿತ ಪ್ರದೇಶದೊಳಗೆ ಇಳಿಸುವ ಕಾರ್ಯ ಸವಾಲಿನದಾಗಿತ್ತು. ಇಸ್ರೊ ಹಿರಿಯ ವಿಜ್ಞಾನಿಗಳ ಸಲಹೆ ಹಾಗೂ ಮಾರ್ಗದರ್ಶನದಲ್ಲಿ ಬಸವರಾಜ ಹಾಗೂ ಅವರ ತಂಡದ ಸದಸ್ಯರು ಯಶಸ್ವಿಯಾಗಿ ವಿಕ್ರಮನನ್ನು ನಿಗದಿತ ಸ್ಥಳಕ್ಕೆ ಇಳಿಸಿದ್ದಾರೆ. ಆ ಮೂಲಕ ಚಂದ್ರಯಾನ-3ರ ಯಶಸ್ಸಿನಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.

ಡ್ರೋಣ್‌ ಬಳಕೆಯಲ್ಲಿ ವಿಶೇಷ ತರಬೇತಿ ಹಾಗೂ ಪರಿಣತಿ ಹೊಂದಿರುವ ಬಸವರಾಜ ಅವರು ಈಗಾಗಲೇ ಸುಮಾರು 500ಕ್ಕೂ ಹೆಚ್ಚು ಪೊಲೀಸ್ ಠಾಣೆಗಳಲ್ಲಿ ಪೊಲೀಸರಿಗೆ ಹಾಗೂ ವಿದ್ಯಾರ್ಥಿಗಳಿಗೆ ಡ್ರೋಣ್‌ ಬಳಕೆ ಹಾಗೂ ಅದರ ಮಹತ್ವ ಕುರಿತು ಪ್ರಾತ್ಯಕ್ಷಿಕೆ ಹಾಗೂ ಉಪನ್ಯಾಸ ನೀಡಿದ್ದಾರೆ. ಬಡ ಮಧ್ಯಮ ಕುಟುಂಬದಲ್ಲಿ ಜನಿಸಿ ಇಸ್ರೊದಂತಹ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಮೂಲಕ ಬಸವರಾಜ ಅವರು ತಾಲ್ಲೂಕಿನ ಹೆಮ್ಮೆ ತಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT