ಶುಕ್ರವಾರ, ಸೆಪ್ಟೆಂಬರ್ 24, 2021
23 °C

ರೋಣದಲ್ಲಿ ವೈದ್ಯಕೀಯ ಕಾಲೇಜಿಗೆ ದೇಹ ದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರೋಣ: ನಗರದ ನಿವಾಸಿಯಾಗಿದ್ದ ಶಿವಣ್ಣ ಬೆನಹಾಳ (72) ಅನಾರೋಗ್ಯದ ಕಾರಣ ಬುಧವಾರ ನಿಧನರಾದರು. ಅವರ ಇಚ್ಛೆಯ ಮೇರೆಗೆ ಮೃತದೇಹವನ್ನು ಇಲ್ಲಿನ ರಾಜೀವ್‌ ಗಾಂಧಿ ವೈದ್ಯಕೀಯ ಶಿಕ್ಷಣ ಸಂಸ್ಥೆಗೆ ದೇಹದಾನ ಮಾಡಿದ್ದು, ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ಶಿವಣ್ಣ ಬೆನಹಾಳ ಅವರ ಪತ್ನಿ ಅನ್ನಪೂರ್ಣ ಬೆನ್ನಹಾಳ, ಮಗ ಬಸವರಾಜ ಬೆನಹಾಳ, ಹೆಣ್ಣುಮಕ್ಕಳಾದ ನಾಗರತ್ನ ಗೆದಗೇರಿ, ರಾಜೇಶ್ವರಿ ಮೇರನಾಳ, ರೂಪಾದೇವಿ ಕಾಲೇಜಿಗೆ ದೇಹದಾನ ಮಾಡಿದರು.

ಶಿವಣ್ಣ ಅವರು ದೇಹದಾನ ಮಾಡುವ ವಿಷಯವನ್ನು ಕುಟುಂಬಸ್ಥರ ಗಮನಕ್ಕೆ ಈ ಮೊದಲು ತಂದಿದ್ದರು. ಅವರ ಅಂತಿಮ ಆಸೆಗೆ ಕುಟುಂಬಸ್ಥರು ಕೂಡ ಒಪ್ಪಿಗೆ ನೀಡಿದ್ದರು. ಮರಣಾನಂತರ ವಿದ್ಯಾರ್ಥಿಗಳ ಪ್ರಾಯೋಗಿಕ ಅಭ್ಯಾಸಕ್ಕಾಗಿ ಶರೀರ ದಾನ ಮಾಡುವುದರ ಬಗ್ಗೆ ಸ್ವಇಚ್ಛೆಯಿಂದ 2012ರ ಏಪ್ರಿಲ್ 20ರಂದು ಬಾಂಡ್‌ ಮಾಡಿಸಿ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಕುಟುಂಬಸ್ಥರ ಸಮಕ್ಷಮದಲ್ಲಿ ಬರೆದುಕೊಟ್ಟಿದ್ದರು.

‘ಶಿವಣ್ಣ ಅವರು ಹತ್ತು ದಿನಗಳ ಹಿಂದೆ ವಯೋಸಹಜ ಚಿಕಿತ್ಸೆಗಾಗಿ ನಮ್ಮ ಆಸ್ಪತ್ರೆಗೆ ದಾಖಲಾಗಿದ್ದರು. ಆಗಲೂ ಅವರು ದೇಹದಾನದ ಮಹತ್ವದ ಕುರಿತು ಮಾತನಾಡಿದ್ದರು. ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನಕ್ಕೆ ಅನುಕೂಲವಾಗಲಿ ಎನ್ನುವ ಮಾನವೀಯ ಮೌಲ್ಯಗಳನ್ನು ಬದುಕಿದ್ದಾಗ ಅಳವಡಿಸಿಕೊಂಡಿದ್ದ ಹಿರಿಯರು ಸಾವಿನಲ್ಲಿಯೂ ಸಾಮಾಜಿಕ ಕಳಕಳಿ ಮೆರೆದಿದ್ದಾರೆ’ ಎಂದು ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಐ.ಬಿ.ಕೊಟ್ಟೂರ ತಿಳಿಸಿದ್ದಾರೆ.

ಮೂಢನಂಬಿಕೆ ಕಾರಣದಿಂದ ಬಹುತೇಕರು ದೇಹದಾನ ಮತ್ತು ಅಂಗಾಂಗ ದಾನ ಮಾಡಲು ಮುಂದೆ ಬರುವುದಿಲ್ಲ. ಆದರೆ ಮನುಷ್ಯರಾದವರು ಸಾವಿನ ನಂತರವೂ ಇನ್ನೊಬ್ಬರ ಜೀವನದಲ್ಲಿ ಬೆಳಕು ತರಬೇಕೆಂದರೆ ದೇಹ ಮತ್ತು ಅಂಗಾಂಗ ದಾನ ಬಹುಮುಖ್ಯ. ಕಣ್ಣು, ಕಿಡ್ನಿ, ಲಿವರ್‌, ಹೃದಯ, ಚರ್ಮ ಏನು ಬೇಕಾದರೂ ದಾನ ಮಾಡಬಹುದು. ಜನರು ತಪ್ಪು ತಿಳಿವಳಿಕೆ ಬಿಟ್ಟು ದೇಹ ಮತ್ತು ಅಂಗಾಂಗ ದಾನಕ್ಕೆ ಮುಂದಾಗಬೇಕು ಎಂದು ವೈದ್ಯರು ಜಾಗೃತಿ ಮೂಡಿಸಿದರು.

ಮೃತ ಹಿರಿಯ ಜೀವದ ಆತ್ಮಕ್ಕೆ ಶಾಂತಿ ಕೋರಿ ಸ್ಥಳೀಯ ನಾಗರಿಕರು ಪ್ರಾರ್ಥನೆ ಸಲ್ಲಿಸಿದರು. ನಂತರ ವೈದ್ಯರು ಮೃತ ದೇಹವನ್ನು ವೈದ್ಯಕೀಯ ಆಸ್ಪತ್ರೆಗೆ ಕೊಂಡೊಯ್ದರು.

ಡಾ. ಕೆ.ಬಿ.ಧನ್ನೂರ, ಶರೀರ ರಚನಾ ವಿಭಾಗದ ಮುಖ್ಯಸ್ಥ ಡಾ. ಪ್ರಹ್ಲಾದ ಸುಬ್ಬಣ್ಣವರ, ಡಾ. ಹರ್ಷ, ಸಿಬ್ಬಂದಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.