ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನರೇಗಾ ಕೂಲಿ: ದಿನದ ಹಾಜರಾತಿ ಆ್ಯಪ್‌

ನರೇಗಾ ಕಾಮಗಾರಿ ವೀಕ್ಷಿಸಿದ ಜಿಲ್ಲಾ ಪಂಚಾಯ್ತಿ ಸಿಇಒ ಡಾ. ಸುಶೀಲಾ ಬಿ.
Last Updated 25 ಮೇ 2022, 15:42 IST
ಅಕ್ಷರ ಗಾತ್ರ

ಗದಗ: ‘ನರೇಗಾ ಕಾಮಗಾರಿಗಳಲ್ಲಿ ಪಾರದರ್ಶಕತೆ ತರಲು ಸರ್ಕಾರ ಕೆಲಸಗಾರರ ದಿನದ ಹಾಜರಾತಿಯನ್ನು ಆನ್‌ಲೈನ್ ಮೂಲಕ ಕೆಲಸದ ಸ್ಥಳದಲ್ಲೇ ದಿನಕ್ಕೆ ಎರಡು ಬಾರಿ ಪಡೆಯಲು ನೆರವಾಗುವಂತೆ ಎನ್‌ಎಂಎಂಎಸ್ ಆ್ಯಪ್‌ ಜಾರಿಗೆ ತಂದಿದೆ’ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸುಶೀಲಾ ಬಿ. ಹೇಳಿದರು.

ಜಿಲ್ಲೆಯ ಗದಗ ತಾಲ್ಲೂಕಿನ ಅಡವಿಸೋಮಾಪೂರ, ಲಕ್ಕುಂಡಿ ಹಾಗೂ ತಿಮ್ಮಾಪೂರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ವೀಕ್ಷಿಸಿ ಅವರು ಮಾತನಾಡಿದರು.

‘ಹೀಗಾಗಿ ಕೆಲಸ ಮಾಡುವವರು ಎರಡು ಬಾರಿ ಹಾಜರಾತಿ ಹಾಕುವವರೆಗೆ ಕಾಮಗಾರಿ ಸ್ಥಳದಲ್ಲೇ ಇರಬೇಕು. ಆಗ ಮಾತ್ರ ಕೆಲಸಗಾರರು ಕೆಲಸ ಮಾಡಿದ ಕೂಲಿ ಹಣ ಅವರ ಬ್ಯಾಂಕ್‌ ಖಾತೆಗೆ ಜಮೆಯಾಗುತ್ತದೆ’ ಎಂದು ತಿಳಿಸಿದರು.

‘ನರೇಗಾ ಯೋಜನೆಯಡಿ ಹಳ್ಳದ ಹೊಳೆತ್ತುವುದು, ಕಂದಕ ಹಾಗೂ ಬದು ನಿರ್ಮಾಣ ಸೇರಿದಂತೆ ಹಲವು ಕಾಮಗಾರಿ ನಡೆಸಲಾಗುತ್ತದೆ. ಬೇಸಿಗೆಯಲ್ಲಿ ರೈತರಿಗೆ ಕೃಷಿ ಕೆಲಸಗಳು ಹೆಚ್ಚಾಗಿ ಇರುವುದಿಲ್ಲ. ಹೀಗಾಗಿ ರೈತರು ನರೇಗಾ ಕಾಮಗಾರಿಗಳಲ್ಲಿ ತೊಡಗಿಸಿಕೊಂಡರೆ ಆರ್ಥಿಕವಾಗಿ ಅನುಕೂಲವಾಗುತ್ತದೆ’ ಎಂದು ಹೇಳಿದರು.

‘ಮಳೆಗಾಲದಲ್ಲಿ ಸುರಿವ ಮಳೆ ನೀರು ಹಳ್ಳ-ಕೊಳ್ಳಗಳ ಮೂಲಕ ಹರಿದು ನದಿ ಸಮುದ್ರ ಸೇರಿ ವ್ಯರ್ಥವಾಗಿ ಹೋಗುತ್ತದೆ. ಇದನ್ನು ತಪ್ಪಿಸಲು ಕಂದಕ, ಬದು ನಿರ್ಮಾಣ ಮಾಡಿ ನೀರನ್ನು ಅಲ್ಲೇ ಸೆರೆಹಿಡಿಯಬಹುದು. ಇದರಿಂದ ಅಂತರ್ಜಲ ಮಟ್ಟ ಹೆಚ್ಚುತ್ತದೆಯಲ್ಲದೇ ನಮ್ಮ ಮುಂದಿನ ಮನುಕುಲಕ್ಕೆ ಜಲಸಂಪತ್ತನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.

ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸ ನಿರ್ವಹಿಸುವ ಕಾರ್ಮಿಕರೊಂದಿಗೆ ಸಂವಾದ ನಡೆಸಿದ ಅವರು ಯೋಜನೆಯು ತಮ್ಮ ಕುಟುಂಬ ನಿರ್ವಹಣೆಗೆ ನೆರವಾಗಿರುವ ಬಗ್ಗೆ ಮಾಹಿತಿ ಪಡೆದರು.

ತಾಲ್ಲೂಕು ಪಂಚಾಯ್ತಿ ಇಒ, ಪಿಡಿಒ, ಜಿಲ್ಲಾ ಹಾಗೂ ತಾಲ್ಲೂಕು ಐ.ಇ.ಸಿ ಸಂಯೋಜಕರು, ನರೇಗಾ ತಾಂತ್ರಿಕ ಸಂಯೋಜಕರು, ಗ್ರಾಮ ಪಂಚಾಯ್ತಿ ತಾಂತ್ರಿಕ ಸಹಾಯಕರು, ಬಿ.ಎಫ್.ಟಿ ಹಾಗೂ ಗ್ರಾಮ ಕಾಯಕ ಮಿತ್ರರು ಸೇರಿದಂತೆ 423 ಮಂದಿ ನೋಂದಾಯಿತ ನರೇಗಾ ಕೂಲಿ ಕಾರ್ಮಿಕರು ಇದ್ದರು.

ಕಾರ್ಮಿಕರು ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಹೆಚ್ಚು ಪಾಲ್ಗೊಳ್ಳುವ ಮೂಲಕ ಕುಟುಂಬದ ಆರ್ಥಿಕ ಸಬಲತೆಗೆ ಮುಂದಾಗಬೇಕು
ಡಾ. ಸುಶೀಲಾ ಬಿ., ಜಿಲ್ಲಾ ಪಂಚಾಯ್ತಿ ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT