ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಯೋಗದ ನಿರ್ದೇಶನದಂತೆ ಚುನಾವಣೆ ನಡೆಸಿ

ವಿಧಾನ ಪರಿಷತ್‌ ಚುನಾವಣೆ: ಧಾರವಾಡ ಕ್ಷೇತ್ರದ ಸಾಮಾನ್ಯ ವೀಕ್ಷಕ ಎಸ್.ಆರ್. ಉಮಾಶಂಕರ ಸೂಚನೆ
Last Updated 4 ಡಿಸೆಂಬರ್ 2021, 3:12 IST
ಅಕ್ಷರ ಗಾತ್ರ

ಗದಗ: ‘ವಿಧಾನ ಪರಿಷತ್‌ ಚುನಾವಣೆಯ ಮತದಾನದ ದಿನದಂದು ಸೂಕ್ಷ್ಮ ವೀಕ್ಷಕರು ಚುನಾವಣಾ ಆಯೋಗದ ನಿರ್ದೇಶನದಂತೆ ತಮ್ಮ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ನಡೆಯುವಂತೆ ನೋಡಿಕೊಳ್ಳಬೇಕು’ ಎಂದು ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಧಾರವಾಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಚುನಾವಣೆಯ ಸಾಮಾನ್ಯ ವೀಕ್ಷಕ ಎಸ್.ಆರ್.ಉಮಾಶಂಕರ ಹೇಳಿದರು.

ಚುನಾವಣಾ ಕೆಲಸಕ್ಕೆ ನಿಯೋಜಿಸ ಲಾದ ಸೂಕ್ಷ್ಮ ವೀಕ್ಷಕರು ಹಾಗೂ ವಿಡಿಯೊಗ್ರಾಫರ್‌ಗಳಿಗೆ ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ನಡೆದ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿದರು.

‘ಅಧಿಕಾರಿಗಳು ಚುನಾವಣಾ ಅಕ್ರಮಗಳಿಗೆ ಆಸ್ಪದ ನೀಡಬಾರದು. ಮತದಾನದ ದಿನ ಗುರುತಿನ ಚೀಟಿ ಹೊಂದಿದವರನ್ನು ಮಾತ್ರ ಮತಗಟ್ಟೆ ಪ್ರವೇಶಿಸಲು ಅನುಮತಿ ನೀಡಬೇಕು. ಚುನಾವಣೆಯಲ್ಲಿ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ ಹಾಗೂ ಪುರಸಭೆಗಳ ಚುನಾಯಿತ ಜನಪ್ರತಿನಿಧಿಗಳು ಮತದಾರರಾಗಿರುತ್ತಾರೆ. ಮತದಾನದ ದಿನದಂದು ಮತ ಚಲಾವಣೆಗೆ ಬರುವವರ ಹೆಸರು, ಹುಟ್ಟಿದ ದಿನಾಂಕ ಮತಪಟ್ಟಿಯೊಂದಿಗೆ ತಾಳೆ ಆಗುತ್ತಿದೆಯೇ ಎಂಬುದನ್ನು ಕೂಲಂಕಷವಾಗಿ ಪರಿಶೀಲಿಸಬೇಕು’ ಎಂದು ಸೂಚಿಸಿದರು.

ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಮಾತನಾಡಿ, ‘ಧಾರವಾಡ ಸ್ಥಳೀಯ ಸಂಸ್ಥೆಗಳ ಪ್ರಾಧಿಕಾರಗಳ ಕ್ಷೇತ್ರಕ್ಕೆ ನಡೆಯುವ ಚುನಾವಣೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 1,967 ಮತದಾರರಿದ್ದು, 130 ಮತಗಟ್ಟೆಗಳನ್ನು ತೆರೆಯಲಾಗುವುದು’ ಎಂದರು.

‘ಮತದಾನದ ದಿನದಂದು ಸೂಕ್ಷ್ಮ ವೀಕ್ಷಕರ ಮೇಲೆ ಗುರುತರ ಜವಾಬ್ದಾರಿ ಇರಲಿದೆ. ಮತದಾನದ ಪ್ರಕ್ರಿಯೆ ಶಾಂತವಾಗಿ ನಡೆಯುತ್ತಿದೆಯೇ ಎಂಬುದನ್ನು ಪರಿಶೀಲಿಸಬೇಕು. ಉಳಿದ ಚುನಾವಣೆಗಳಿಗಿಂತ ಇದು ಭಿನ್ನವಾಗಿದ್ದು ಸೂಕ್ಷ್ಮ ವೀಕ್ಷಕರು ಉದಾಸೀನ ತೋರದೆ ಚುನಾವಣಾ ಆಯೋಗದ ನಿರ್ದೇಶನಗಳನ್ವಯ ಚುನಾವಣಾ ಪ್ರಕ್ರಿಯೆ ನಡೆಸಲು ಹೆಚ್ಚಿನ ನಿಗಾ ವಹಿಸಬೇಕು’ ಎಂದರು.

ಮತದಾನದ ದಿನದಂದು ಸೂಕ್ಷ್ಮ ವೀಕ್ಷಕರು ಹಾಗೂ ವಿಡಿಯೊಗ್ರಾಫರ್‌ಗಳ ಜವಾಬ್ದಾರಿ ಕುರಿತು ಸಂಪನ್ಮೂಲ ವ್ಯಕ್ತಿ ಬಸವರಾಜ ಗಿರಿತಿಮ್ಮನ್ನವರ ತರಬೇತಿ ನೀಡಿದರು.

ಜಿಲ್ಲಾ ಪಂಚಾಯ್ತಿ ಸಿಇಒ ಭರತ್‌ ಎಸ್., ಎಡಿಸಿ ಸತೀಶ್ ಕುಮಾರ ಎಂ., ಉಪ ವಿಭಾಗಾಧಿಕಾರಿ ರಾಯಪ್ಪ ಹುಣಸಗಿ ಇದ್ದರು.

ಮತದಾನದ ದಿನದಂದು ಮುಂಚಿತವಾಗಿ ಮತಗಟ್ಟೆಗಳಿಗೆ ಭೇಟಿ ನೀಡಿ ಅಲ್ಲಿಯ ವ್ಯವಸ್ಥೆಗಳನ್ನು ಪರಿಶೀಲಿಸಬೇಕು. ಮತದಾನದ ನಂತರ ನಿಗದಿತ ನಮೂನೆಯಲ್ಲಿ ವರದಿ ಕೊಡಿ
ಎಸ್.ಆರ್.ಉಮಾಶಂಕರ, ಚುನಾವಣೆಯ ಸಾಮಾನ್ಯ ವೀಕ್ಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT