ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3ಡಿ ಆಕ್ಟಿವ್ ತಾರಾಲಯ ಉದ್ಘಾಟನೆ

ತ್ರೀಡಿ ಕನ್ನಡಕದಲ್ಲಿ ವೀಕ್ಷಣೆ; ಖಗೋಳ ಹೊಕ್ಕ ರೋಮಾಂಚನಕಾರಿ ಅನುಭವ
Last Updated 19 ಮಾರ್ಚ್ 2023, 16:17 IST
ಅಕ್ಷರ ಗಾತ್ರ

ಗದಗ: ‘ಖಗೋಳದ ಬಗ್ಗೆ ವಿದ್ಯಾರ್ಥಿಗಳಿಗೆ ನೈಜ ಜ್ಞಾನ ದೊರಕಿಸಿಕೊಡಲು ತಾರಾಲಯ ಸಹಕಾರಿಯಾಗಲಿದೆ. ಈ ಸೌಲಭ್ಯ ಸದ್ಬಳಕೆಯಾಗುವುದರ ಜತೆಗೆ ಅಚ್ಚುಕಟ್ಟಾಗಿ ನಿರ್ವಹಣೆ ಆಗಬೇಕು’ ಎಂದು ಶಾಸಕ ಎಚ್‌.ಕೆ.ಪಾಟೀಲ ಸೂಚಿಸಿದರು.

ಜಿಲ್ಲಾಡಳಿತ, ಗದಗ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ತಾರಾಲಯ ಸಂಸ್ಥೆ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹ ಸಂಸ್ಥೆಗಳ ಸಹಯೋಗದಲ್ಲಿ ಬೆಟಗೇರಿಯ ಹೆಲ್ತ್‌ ಕ್ಯಾಂಪ್‌ನಲ್ಲಿ ನಿರ್ಮಾಣವಾಗಿರುವ ತಾರಾಲಯವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಅನೇಕ ತಾಂತ್ರಿಕ ತೊಂದರೆಗಳಿಂದಾಗಿ ತಾರಾಲಯ ಲೋಕಾರ್ಪಣೆ ವಿಳಂಬವಾಯಿತು. ಹಲವು ಕನಸುಗಳಲ್ಲಿನ ಒಂದು ಕನಸು ಇಂದು ನನಸಾಗಿದೆ. ತಾರಾಲಯ ನಿರ್ಮಾಣಕ್ಕೆ ಶ್ರಮಿಸಿದ ಪ್ರತಿಯೊಬ್ಬರೂ ಅಭಿನಂದನಾರ್ಹರು. ₹8 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ತಾರಾಲಯ ಶೀಘ್ರವೇ ಸಾರ್ವಜನಿಕರ ಬಳಕೆಗೆ ಒದಗಿಸಲು ಕ್ರಮವಹಿಸಬೇಕು’ ಎಂದರು.

‘ಜಿಲ್ಲೆಯಲ್ಲಿ ವಿಜ್ಞಾನ ಕೇಂದ್ರಕ್ಕೆ ₹7.75 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಶೀಘ್ರದಲ್ಲಿಯೇ ವಿಜ್ಞಾನ ಕೇಂದ್ರ ಕೂಡ ಆರಂಭಗೊಳ್ಳಲಿದೆ’ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಮಾತನಾಡಿ, ‘ವಿಜ್ಞಾನ ಶಿಕ್ಷಕರು ಹಾಗೂ ಜನಪ್ರತಿನಿಧಿಗಳ 25 ವರ್ಷಗಳ ಹೋರಾಟದ ಫಲವಾಗಿ ಆಕ್ವಿವ್ 3ಡಿ ತಾರಾಲಯ ದೊರಕಿದೆ. ಇದರ ಜೊತೆಗೆ ಸೈನ್ಸ್ ಸೆಂಟರ್ ಕೂಡ ಬರಬೇಕೆನ್ನುವುದು ವಿಜ್ಞಾನ ಶಿಕ್ಷಕರು, ಉಪನ್ಯಾಸಕರ ಅಪೇಕ್ಷೆಯಾಗಿದೆ. ಇದು ವಿದ್ಯಾರ್ಥಿಗಳ ಜೊತೆಗೆ ರೈತರಿಗೆ, ಮಹಿಳೆಯರಿಗೆ ಹಾಗೂ ಯುವಕರಿಗೆ ಉಪಯೋಗವಾಗುವಂತಾಗಬೇಕು. ಮೂಢನಂಬಿಕೆಗಳನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಆಕ್ವಿವ್ 3ಡಿ ತಾರಾಲಯ ಕೆಲಸ ಮಾಡಬೇಕು’ ಎಂದು ಆಶಿಸಿದರು.

ವರ್ಣಾಝ್ ಟೆಕ್ನಾಲಜಿಯ ಸಂಸ್ಥಾಪಕ ದಿನೇಶ ಬಾಡಗಂಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ‘ತಾರೆ ಜಮೀನ್ ಪರ್ ಎಂಬ ಪರಿಕಲ್ಪನೆಯೊಂದಿಗೆ ಈ ತಾರಾಲಯವನ್ನು ನಿರ್ಮಿಸಲಾಗಿದೆ. 3ಡಿ ಕನ್ನಡಕಗಳೊಂದಿಗೆ ದೃಶ್ಯಗಳನ್ನು ವೀಕ್ಷಿಸುವಾಗ ಖಗೋಳದಲ್ಲಿ ಹೊಕ್ಕಂತಹ ಅನುಭವವಾಗುತ್ತದೆ’ ಎಂದು ತಿಳಿಸಿದರು.

ಎಂಸಿಎ ಅಧ್ಯಕ್ಷ ಎಂ.ಎಸ್.ಕರಿಗೌಡ್ರ, ಗದಗ-ಬೆಟಗೇರಿ ನಗರಸಭೆ ಅಧ್ಯಕ್ಷೆ ಉಷಾ ದಾಸರ, ಉಪಾಧ್ಯಕ್ಷೆ ಸುನಂದಾ ಬಾಕಳೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿದ್ದಪ್ಪ ಪಲ್ಲೇದ, ಗದಗ-ಬೆಟಗೇರಿ ನಗರಸಭೆ ಸದಸ್ಯರು, ಜಿಲ್ಲಾಧಿಕಾರಿ ವೈಶಾಲಿ.ಎಂ.ಎಲ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ, ನಿರ್ಮಿತಿ ಕೇಂದ್ರದ ಶಿರೋಳ, ವರ್ಣಾಝ್ ಟೆಕ್ನಾಲಾಜಿಯ ಅಭಿಷೇಕ ಚೌಧರಿ, ನಳನಿ ಅಪರಂಜಿ ಇದ್ದರು.

65 ಆಸನಗಳ ತಾರಾಲಯ

ಹವಾನಿಯಂತ್ರಿತ ಡಿಜಿಟಲ್ ಆಕ್ಟಿವ್ 3ಡಿ ರಾತಾಲಯವು 65 ಆಸನಗಳನ್ನು ಹೊಂದಿದ್ದು, ಅರ್ಧ ಗಂಟೆ ಅವಧಿಯ ದೃಶ್ಯಾವಳಿಗಳನ್ನು ಒಂದು ಅವಧಿಯಲ್ಲಿ 65 ಜನರು ವೀಕ್ಷಿಸಬಹುದಾಗಿದೆ. ಪ್ರತಿಯೊಬ್ಬರಿಗೂ ಆಕ್ಟಿವ್ 3ಡಿ ಗ್ಲಾಸ್ ಲಭ್ಯವಿದ್ದು, ದೃಶ್ಯಾವಳಿಗಳ ಜತೆಗೆ ಸಾಗಿದ ಅನುಭವ ಉಂಟಾಗಲಿದೆ.ವೆಚ್ಚ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT