ಮಂಗಳವಾರ, ಮೇ 17, 2022
26 °C
ಪ್ರಗತಿ ಪರಿಶೀಲನಾ ಸಭೆ; ಜಿಲ್ಲಾಧಿಕಾರಿ ಎಂ.ಸುಂದರೇಶ್‌ ಬಾಬು ಸೂಚನೆ

ಗೋಶಾಲೆ ನಿವೇಶನಕ್ಕೆ ಪ್ರಸ್ತಾವ ಸಲ್ಲಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗದಗ: ‘ತಾಲ್ಲೂಕು ಕೇಂದ್ರಗಳಲ್ಲಿ ಗೋಶಾಲೆ ನಿರ್ಮಿಸಲು ಅಗತ್ಯವಿರುವ ನಿವೇಶನಕ್ಕಾಗಿ ತಹಶೀಲ್ದಾರ್‌ಗಳಿಗೆ ಪ್ರಸ್ತಾವ ಸಲ್ಲಿಸಿ’ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಕೃತಕ ಗರ್ಭಧಾರಣೆ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಹೈನುಗಾರಿಕೆಯಿಂದ ರೈತರು ಆರ್ಥಿಕವಾಗಿ ಸದೃಢರಾಗಲು ನೆರವಾಗು ವಂತೆ ಜಾನುವಾರುಗಳಿಗೆ ವಿಶ್ವಾಸಾರ್ಹ ಕೃತಕ ಗರ್ಭಧಾರಣೆ ವಿತರಣೆ ವ್ಯವಸ್ಥೆಯನ್ನು ಮನೆ ಬಾಗಿಲಿಗೆ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು’ ಎಂದರು.

‘ಸಂತಾನೋತ್ಪತ್ತಿ ಮಾಡ ಬಹುದಾದ ರಾಸುಗಳ ಸಂಖ್ಯೆಯ ಮಾನದಂಡದ ಮೇಲೆ ಪ್ರತಿ ಗ್ರಾಮಗಳಲ್ಲಿ ರಾಸುಗಳಿಗೆ ಮಾಡಬೇಕಾದ ಕೃತಕ ಗರ್ಭಧಾರಣೆಯ ಗುರಿ ನಿಗದಿಪಡಿಸಬೇಕು. ಕೃತಕ ಗರ್ಭಧಾರಣೆ ಕಾರ್ಯಕ್ರಮ ಅನುಷ್ಠಾನಕ್ಕಾಗಿ ನೇಮಿಸಲಾದ ಕಾರ್ಯಕರ್ತರು ಹಳ್ಳಿಗಳಲ್ಲಿ ಸಂತಾನೋತ್ಪತ್ತಿ ಮಾಡಬಹುದಾದ ರಾಸುಗಳನ್ನು ಗುರುತಿಸಿ ಅವುಗಳಿಗೆ ಗುರುತಿನ ಸಂಖ್ಯೆ ಅಥವಾ ಕಿವಿಯೋಲೆ ಅಳವಡಿಸಬೇಕು’ ಎಂದು ಹೇಳಿದರು.

ಗರ್ಭಧಾರಣೆ ಮಾಡಿದ ಎಲ್ಲ ರಾಸುಗಳಿಗೆ ಆರೋಗ್ಯ ಕಾರ್ಡ್‌ ವಿತರಿಸಬೇಕು. ಕೃತಕ ಗರ್ಭಧಾರಣೆ ನಂತರ ಗರ್ಭ ತಪಾಸಣೆ ನಡೆಸಿ ಅವುಗಳ ಫಲಿತಾಂಶವನ್ನು ತಂತ್ರಾಂಶದಲ್ಲಿ ದಾಖಲಿಸಬೇಕು ಎಂದು ಸೂಚಿಸಿದರು.

ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ.ಗುರುರಾಜ ಮನಗೂಳಿ ಮಾತನಾಡಿ, ‘ಎನ್.ಎ.ಐ.ಪಿ ಎರಡನೇ ಹಂತದ ಕಾರ್ಯಕ್ರಮ ಮೇ ಅಂತ್ಯದವರೆಗೆ ಚಾಲ್ತಿಯಲ್ಲಿದ್ದು ಈ ಕಾರ್ಯಕ್ರಮದಲ್ಲಿ ಗದಗ ಜಿಲ್ಲೆಯ ಎಲ್ಲ ಗ್ರಾಮಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ 50 ಸಾವಿರ ರಾಸುಗಳನ್ನು ಕೃತಕ ಗರ್ಭಧಾರಣೆಗೆ ಒಳಪಡಿಸಲು ಗುರಿ ನಿಗದಿ
ಪಡಿಸಲಾಗಿದ್ದು, ಈ ಕಾರ್ಯಕ್ರಮದ ಅನುಷ್ಠಾನಕ್ಕಾಗಿ ಒಟ್ಟು 133 ಕೃತಕ ಗರ್ಭಧಾರಣೆ ಕಾರ್ಯಕರ್ತರನ್ನು ನೇಮಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು