ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಕ್ಕುಪತ್ರ ವಿತರಣೆಗೆ ಕ್ರಮ ವಹಿಸಿ: ಡಿಸಿ

ವಿವಿಧ ಬಡಾವಣೆಗಳ ಅಭಿವೃದ್ಧಿ, ಸ್ಲಂ ನಿವಾಸಿಗಳ ಕುಂದುಕೊರತೆ ಸಭೆ
Last Updated 6 ಮೇ 2022, 4:56 IST
ಅಕ್ಷರ ಗಾತ್ರ

ಗದಗ: ಕೊಳಚೆ ಪ್ರದೇಶಗಳ ಘೋಷಣೆ ಹಾಗೂ ಆ ಪ್ರದೇಶಗಳನ್ನು ಮಂಡಳಿಗೆ ಹಸ್ತಾಂತರಿಸಿ ಅಲ್ಲಿನ ನಿವಾಸಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಲು ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ವಿವಿಧ ಬಡಾವಣೆಗಳ ಅಭಿವೃದ್ಧಿ ಹಾಗೂ ಸ್ಲಂ ನಿವಾಸಿಗಳ ಕುಂದುಕೊರತೆಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸ್ಲಂ ನಿವಾಸಿಗಳ ಮನೆಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿ, ಪಂಗಡದ ಫಲಾನುಭವಿಗಳಿಗೆ ಶೇ 24.10 ಅನುದಾನದಲ್ಲಿ ನಗರಸಭೆಯಲ್ಲಿ ಅನುದಾನ ಮೀಸಲಿರಿಸಿದ್ದು, ಅಮೃತ ನಗರೋತ್ಥಾನ ಹಂತ-4ರಲ್ಲಿಯೂ ಸಹ ಅನುದಾನ ಮೀಸಲಿರಿಸಲು ಕ್ರಿಯಾಯೋಜನೆ ತಯಾರಿಸಲಾಗುತ್ತಿದೆ ಎಂದು ತಿಳಿಸಿದರು.

ನಗರಸಭೆಯವರು ಕೊಳಚೆ ಪ್ರದೇಶಗಳಿಗೆ ಮೂಲಸೌಲಭ್ಯಗಳನ್ನು ಒದಗಿಸಿ ಅಭಿವೃದ್ಧಿಪಡಿಸಬೇಕು. ಸ್ಲಂ ವಾಸಿಗಳು ನಿವೇಶನ ಹೊಂದಿದ್ದಲ್ಲಿ ಸರ್ಕಾರದ ವಿವಿಧ ವಸತಿ ಯೋಜನೆಗಳಡಿ ಅವರಿಗೆ ಮನೆ ಮಂಜೂರಾತಿ ನೀಡಬೇಕು. ಸ್ಲಂಗಳಲ್ಲಿ ವಾಸಿಸುವ ಕಾರ್ಮಿಕರನ್ನು ಗುರುತಿಸಿ ಅರ್ಹರಿಗೆ ಕಾರ್ಮಿಕ ಇಲಾಖೆಯಿಂದ ನೀಡುವ ಕಾರ್ಮಿಕ ಕಾರ್ಡ್‌ ಹಾಗೂ ವಿವಿಧ ಸೌಲಭ್ಯಗಳನ್ನು ದೊರಕಿಸಿಕೊಡಬೇಕು. ಅಲ್ಲದೇ ಸ್ಲಂ ವಾಸಿಗಳನ್ನು ಆರ್ಥಿಕವಾಗಿ ಸಬಲರನ್ನಾಗಿಸಲು ಬ್ಯಾಂಕ್‌ಗಳಿಂದ ಸಾಲ ಸೌಲಭ್ಯ ದೊರಕಿಸಲು ಇಲಾಖೆ ಅಧಿಕಾರಿಗಳು ಕೆಲಸ ಮಾಡಬೇಕು ಎಂದು ಸೂಚಿಸಿದರು.

ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಭಿವೃದ್ಧಿಪಡಿಸಿದ ಬಡಾವಣೆಗಳ ನಿವೇಶನಗಳಿಗೆ ನಗರಸಭೆಯಿಂದ ನಮೂನೆ-3 ವಿತರಿಸಲು ಕ್ರಮ ವಹಿಸಬೇಕು. ಈ ಕುರಿತು ಸಂಬಂಧಿಸಿದ ಇಲಾಖೆಗಳ ಸಮನ್ವಯಗಳೊಂದಿಗೆ ಅಭಿವೃದ್ಧಿ ಕಾರ್ಯಗಳ ಮೇಲ್ವಿಚಾರಣೆ ಮಾಡಿ ಸಂಪೂರ್ಣತಾ ಪ್ರಮಾಣಪತ್ರಗಳನ್ನು ನೀಡಿ, ನಗರಸಭೆಯಿಂದ ನಮೂನೆ-3 ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಸಾರ್ವಜನಿಕರಿಗೆ ನಿಯಮಾನುಸಾರ ನಮೂನೆ-3 ವಿತರಿಸುವುದಕ್ಕೆ ಸಂಬಂಧಿಸಿದಂತೆ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರ ಅಧ್ಯಕ್ಷತೆಯಲ್ಲಿ ನಗರಸಭೆ, ನಗರಾಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಹೆಸ್ಕಾಂ, ಜಿಲ್ಲಾ ನೋಂದಣಾಧಿಕಾರಿ ಸೇರಿದಂತೆ ಸಮಿತಿಯನ್ನು ರಚಿಸಲಾಗಿದೆ. ವಿವಿಧ ಪ್ರಾಧಿಕಾರಗಳಲ್ಲಿ ಸ್ವೀಕೃತವಾಗಿರುವ ಮನವಿ ಹಾಗೂ ಅರ್ಜಿಗಳನ್ನು ಸರ್ಕಾರದ ಆದೇಶ ಮತ್ತು ಸುತ್ತೋಲೆಗಳ ಪ್ರಕಾರ ಸಮಸ್ಯೆಗಳನ್ನು ಪರಿಹರಿಸಿ ಸಾರ್ವಜನಿಕರಿಗೆ ನಿಯಮಾನುಸಾರ ನಮೂನೆ-3 ಹಾಗೂ ಬಡಾವಣೆಗಳ ಅಭಿವೃದ್ಧಿಗಾಗಿ ಕ್ರಮವಹಿಸುವ ಬಗ್ಗೆ ಚರ್ಚಿಸಿ ಕ್ರಮಕೈಕೊಳ್ಳಬೇಕು ಎಂದು ತಿಳಿಸಿದರು.

ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಎಚ್.ಎನ್.ಗುರುಪ್ರಸಾದ, ಗದಗ-ಬೆಟಗೇರಿ ನಗರಸಭೆ ಪೌರಾಯುಕ್ತ ರಮೇಶ ಸುಣಗಾರ, ನರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಮೇಶ ವಟಗಲ್, ಲೀಡ್ ಬ್ಯಾಂಕ್‌ ಮ್ಯಾನೇಜರ್‌ ಜಬ್ಬಾರ ಅಹ್ಮದ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಜೆ.ಯು.ಪೂಜಾರ, ವಿವಿಧ ಇಲಾಖೆ ನಿಗಮಗಳ ಅಧಿಕಾರಿಗಳು ಗದಗ ಜಿಲ್ಲಾ ಕೊಳಚೆ ನಿವಾಸಿಗಳ ಹಿತರಕ್ಷಣಾ ಸಮಿತಿ ಅಧ್ಯಕ್ಷ ಇಮ್ತಿಯಾಜ್ ಮಾನ್ವಿ, ಪ್ರತಿನಿಧಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT