ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ವೈದ್ಯರ ಸಹಾಯ ಪಡೆಯಿರಿ

ಜಿಲ್ಲೆಯಲ್ಲಿ ಕೋವಿಡ್‌–19 ಮರಣ ಪ್ರಮಾಣ ತಗ್ಗಿಸಲು ಕ್ರಮ: ಜಿಲ್ಲಾಧಿಕಾರಿ
Last Updated 14 ಸೆಪ್ಟೆಂಬರ್ 2020, 13:30 IST
ಅಕ್ಷರ ಗಾತ್ರ

ಗದಗ: ಜಿಲ್ಲೆಯಲ್ಲಿ ಕೋವಿಡ್-19 ಮರಣ ಪ್ರಮಾಣ ತಗ್ಗಿಸಲು ಹಾಗೂ ಸೋಂಕಿತರಿಗೆ ಉತ್ತಮ ಚಿಕಿತ್ಸೆ ನೀಡಲು ಖಾಸಗಿ ವೈದ್ಯರನ್ನು ಬಳಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಸೂಚನೆ ನೀಡಿದರು.

ಜಿಲ್ಲೆಯ ಕೋವಿಡ್‌ ಆಸ್ಪತ್ರೆಯಾದ ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (ಜಿಮ್ಸ್‌) ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು. ನಂತರ ನಡೆದ ಸಭೆಯಲ್ಲಿ ಮಾತನಾಡಿ, ಸೋಂಕಿನ ಸಾಮಾನ್ಯ ಲಕ್ಷಣ ಇದ್ದವರಿಗೆ ಕೋವಿಡ್ ಕೇರ್‌ ಕೇಂದ್ರಗಳಲ್ಲಿ ಚಿಕಿತ್ಸೆ ನೀಡಬೇಕು. ಗಂಭೀರ ಸ್ವರೂಪದ ಲಕ್ಷಣ ಇದ್ದವರಿಗೆ ಐಸಿಯು ಬೆಡ್‌, ವೆಂಟಿಲೇಟರ್‌ ಮೂಲಕ ಚಿಕಿತ್ಸೆ ಒದಗಿಸಲು ಕ್ರಮ ವಹಿಸಬೇಕು ಎಂದು ಹೇಳಿದರು.

ಕೋವಿಡ್-19 ಚಿಕಿತ್ಸೆ ನೀಡಲು ಔಷಧ ಹಾಗೂ ಸಿಬ್ಬಂದಿ ಕೊರತೆ ಇಲ್ಲ. ತುರ್ತು ಪರೀಕ್ಷೆಗೆ ಬಳಸಲಾಗುವ ರ‍್ಯಾಪಿಡ್‌ ಆಂಟಿಜೆನ್ ಟೆಸ್ಟ್‌ ಕಿಟ್‍ಗಳನ್ನು ಅಗತ್ಯಕ್ಕೆ ತಕ್ಕಂತೆ ಆರೋಗ್ಯ ಇಲಾಖೆಯಿಂದ ಪಡೆದುಕೊಳ್ಳಬೇಕು. ವರದಿ ಬಂದ ಕೂಡಲೇ ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಒದಗಿಸಬೇಕು ಎಂದು ಹೇಳಿದರು.

ಆಸ್ಪತ್ರೆಗೆ ಹೆಚ್ಚುವರಿಯಾಗಿ 100 ಆಕ್ಸಿಜನ್ ಬೆಡ್‌ಗಳ ಅಳವಡಿಕೆ ಕಾರ್ಯವನ್ನು ಶೀಘ್ರವೇ ಪೂರ್ಣಗೊಳಿಸಬೇಕು. ಈಗಿರುವ ಹಾಸಿಗೆಗಳ ವ್ಯವಸ್ಥೆಯನ್ನು ಇನ್ನೂ ಚೆನ್ನಾಗಿ ನಿರ್ವಹಣೆ ಮಾಡಬೇಕು ಎಂದು ಅವರು ಸೂಚನೆ ನೀಡಿದರು.

ಕೋವಿಡ್‌ನಿಂದ ಮೃತಪಟ್ಟವರ ಶವ ಸಾಗಣೆಗಾಗಿ ಜಿಮ್ಸ್‌ಗೆ ಒದಗಿಸಲಾದ ವಾಹನಗಳನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡಬೇಕು. ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆಯನ್ನು ಆರೋಗ್ಯ ಇಲಾಖೆ ಮಾರ್ಗಸೂಚಿ ಅನ್ವಯ ನಡೆಸಬೇಕು ಎಂದು ಸೂಚನೆ ನೀಡಿದರು.

ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ ಕೆ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ ಬಸರೀಗಡದ, ಜಿಮ್ಸ್‌ ನಿರ್ದೇಶಕ ಡಾ.ಪಿ.ಎಸ್.ಬೂಸರೆಡ್ಡಿ, ಜಿಮ್ಸ್‌ನ ವಿವಿಧ ವಿಭಾಗಗಳ ಮುಖ್ಯಸ್ಥರು, ಖಾಸಗಿ ವೈದ್ಯರು ಸಭೆಯಲ್ಲಿ ಭಾಗವಹಿಸಿದ್ದರು.

ವೈದ್ಯರ ಶ್ರಮಕ್ಕೆ ಮೆಚ್ಚುಗೆ

ಕೋವಿಡ್-19 ಸೋಂಕಿತರ ಚಿಕಿತ್ಸೆಗಾಗಿ ಜಿಮ್ಸ್‌ನ ವೈದ್ಯರು ಮತ್ತು ಸಿಬ್ಬಂದಿ ಹಗಳಿರುಳು ಶ್ರಮಿಸುತ್ತಿರುವುದು ಅಭಿನಂದನಾರ್ಹ ವಿಚಾರ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್‌ ಬಾಬು ಮೆಚ್ಚುಗೆ ವ್ಯಕ್ತಪಡಿಸಿದರು.

ಸೋಂಕಿತರ ಚಿಕಿತ್ಸೆಗಾಗಿ ನಿಯೋಜನೆಗೊಂಡಿರುವ ವೈದ್ಯರು ಹಾಗೂ ಸಿಬ್ಬಂದಿಗೆ ಅಗತ್ಯವಿರುವ ಸುರಕ್ಷಾ ಪರಿಕರಗಳ ಕೊರತೆಯಾಗದಂತೆ ನಿಗಾವಹಿಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಡುಗೆಮನೆಗೆ ಡಿಸಿ ಭೇಟಿ

ಜಿಮ್ಸ್‌ ಆಸ್ಪತ್ರೆಯ ಅಡುಗೆಮನೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಎಂ.ಸುಂದರೇಶ್‌ ಬಾಬು, ಸೋಂಕಿತರಿಗೆ ತಯಾರಿಸುವ ಊಟ, ಉಪಾಹಾರದ ವ್ಯವಸ್ಥೆಯನ್ನು ಪರಿಶೀಲಿಸಿದರು.

ಸರ್ಕಾರದ ಮಾರ್ಗಸೂಚಿಗಳ ಅನ್ವಯ ಸೋಂಕಿತರಿಗೆ ಒದಗಿಸುವ ಊಟ, ಉಪಾಹಾರ ವ್ಯವಸ್ಥೆಯಲ್ಲಿ ಯಾವುದೇ ಲೋಪವಾಗದಂತೆ ನಿಗಾವಹಿಸಬೇಕು. ಸಮಯಕ್ಕೆ ಸರಿಯಾಗಿ ಶುಚಿಯಾದ ಆಹಾರ ಪೂರೈಸಲು ಅಗತ್ಯದ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT