ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಂಡರಗಿ | ಪರಿಹಾರ ವಿಳಂಬ: ಕಚೇರಿಯಲ್ಲಿ ರೈತ ಆತ್ಮಹತ್ಯೆಗೆ ಯತ್ನ

Published 27 ಜೂನ್ 2024, 16:19 IST
Last Updated 27 ಜೂನ್ 2024, 16:19 IST
ಅಕ್ಷರ ಗಾತ್ರ

ಮುಂಡರಗಿ: ಕಾಲುವೆ ನೀರಿನಿಂದ ನಾಶವಾದ ಬೆಳೆ ಹಾಗೂ ಜಮೀನಿಗೆ ಸೂಕ್ತ ಪರಿಹಾರ ಬೇಸರಗೊಂಡ ಹಮ್ಮಿಗಿ ಗ್ರಾಮದ ರೈತ ಶಿವರಾಜ ಹೊಳೆಯಾಚೆ ಎಂಬುವವರು ತಾಲ್ಲೂಕಿನ ಶಿಂಗಟಾಲೂರ ಗ್ರಾಮದ ನೀರಾವರಿ ಇಲಾಖೆಯ ಕಚೇರಿಯಲ್ಲಿ ಬುಧವಾರ ಆತ್ಮಹತ್ಯೆಗೆ ಯತ್ನಿಸಿದರು.

ಬೆಳಿಗ್ಗೆ 11.30ಕ್ಕೆ ಕಚೇರಿಗೆ ಬಂದ ರೈತ ಶಿವರಾಜ ಅವರು, ಕಚೇರಿಯ ಫ್ಯಾನಿಗೆ ನೇಣು ಹಾಕಿಕೊಳ್ಳಲು ಮುಂದಾದರು. ಕಚೇರಿಯಲ್ಲಿದ್ದ ಸಿಬ್ಬಂದಿ ತಕ್ಷಣ ಅವರನ್ನು ತಡೆದಿದ್ದಾರೆ.

ಆತ್ಮಹತ್ಯೆಗೆ ಯತ್ನಿಸಿದ ರೈತ ಶಿವರಾಜ ಅವರು ಹಮ್ಮಿಗಿ ಗ್ರಾಮದಲ್ಲಿ 2.11 ಎಕರೆ ಜಮೀನು ಹೊಂದಿದ್ದಾರೆ. ಜಮೀನಿನ ಪಕ್ಕದಲ್ಲಿ ಶಿಂಗಟಾಲೂರ ಏತ ನೀರಾವರಿ ಯೋಜನೆಯ ಬೃಹತ್ ಕಾಲುವೆ ಹಾಯ್ದು ಹೋಗಿದೆ. ಕಾಲುವೆಯಲ್ಲಿ ಹರಿಯುವ ಅಪಾರ ಪ್ರಮಾಣದ ನೀರು ನಿತ್ಯ ರೈತನ ಜಮೀನಿಗೆ ನುಗ್ಗುತ್ತದೆ.

‘ಮೂರು ವರ್ಷಗಳಿಂದಲೂ ಅಪಾರ ಪ್ರಮಾಣದ ನೀರು ಜಮೀನಿಗೆ ನುಗ್ಗುವುದರಿಂದ ಬಿತ್ತನೆ ಮಾಡದಂತಾಗಿದೆ. ಸಾಕಷ್ಟು ಬೆಳೆ ನಷ್ಟ ಅನುಭವಿಸಿದ್ದೇನೆ. ನೀರಿನ ರಭಸಕ್ಕೆ ಜಮೀನಿನ ಮಣ್ಣು ಕೊಚ್ಚಿಕೊಂಡು ಹೋಗಿದೆ. ಕಾಲುವೆಯನ್ನು ದುರಸ್ತಿಗೊಳಿಸಿ ಜಮೀನನ್ನು ಸಮತಟ್ಟು ಮಾಡಿಕೊಡಬೇಕೆಂದು ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿಕೊಂಡಿದ್ದೇನೆ. ಆದರೆ ಅಧಿಕಾರಿಗಳು ಮಾತ್ರ ಸ್ಪಂದಿಸಿಲ್ಲ. ಹಾಗಾಗಿ ಆತ್ಮಹತ್ಯೆಗೆ ಯತ್ನಿಸಿದೆ’ ಎಂದು ಶಿವರಾಜ ಹೊಳೆಯಾಚೆ ‘ಪ್ರಜಾವಾಣಿ’ಗೆ ತಿಳಿಸಿದರು.

ಹದಿನೈದು ದಿನಗಳ ಹಿಂದೆ ಅವರು ನೀರಾವರಿ ಇಲಾಖೆಯ ಅಧಿಕಾರಿಗಳ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದರು. ಆಗ ಪೊಲೀಸರು, ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದ್ದರು.

ರೈತನ ಆತ್ಮಹತ್ಯೆಗೆ ಯತ್ನಿಸಿದ್ದ ವಿಷಯ ತಿಳಿದ ನೀರಾವರಿ ಇಲಾಖೆಯ ಅಧಿಕಾರಿಗಳು, ಗುರುವಾರ ರೈತನ ಜಮೀನಿಗೆ ತೆರಳಿ ಜಮೀನು ದುರಸ್ತಿ ಕಾರ್ಯ ಕೈಗೊಂಡಿದ್ದಾರೆ.

ಮೇಲಾಧಿಕಾರಿಗಳಿಗೆ ಪತ್ರ: ‘ಕಾಲುವೆ ದುರಸ್ತಿಗೊಳಿಸಬೇಕು ಎಂದು ಶಿವರಾಜ ಅವರು ಹಲವು ಬಾರಿ ಮನವಿ ಮಾಡಿಕೊಂಡಿದ್ದರು. ಕಾರಣಾಂತರಗಳಿಂದ ಅವರ ಜಮೀನನ್ನು ದುರಸ್ತಿಗೊಳಿಸಲು ಆಗಿರಲಿಲ್ಲ. ಬೆಳೆನಷ್ಟ ವಿತರಿಸುವ ಕುರಿತು ಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ’ ಎಂದು ಶಿಂಗಟಾಲೂರ ಗ್ರಾಮದ ನೀರಾವರಿ ಇಲಾಖೆಯ ಅಧಿಕಾರಿ ಸಿ.ಎಸ್.ದೇವರಾಜ ತಿಳಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT