ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ₹14 ಕೋಟಿ ಬೇಡಿಕೆ: ಎಚ್‌.ಕೆ.ಪಾಟೀಲ

Published 13 ಆಗಸ್ಟ್ 2023, 12:57 IST
Last Updated 13 ಆಗಸ್ಟ್ 2023, 12:57 IST
ಅಕ್ಷರ ಗಾತ್ರ

ಗದಗ: ‘ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಸಮಗ್ರವಾಗಿ ಅಭಿವೃದ್ಧಿ ಮಾಡಲು ನೆರವಾಗುವಂತಹ ವರದಿಯನ್ನು ಮನೋಜ್‌ ಕುಮಾರ್‌ ನೇತೃತ್ವದ ಸಮಿತಿ ವಾರದ ಹಿಂದಷ್ಟೇ ಸಲ್ಲಿಸಿತ್ತು. ಈ ಸಂದರ್ಭದಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಗದಗ ಜಿಲ್ಲೆಗೆ ಭೇಟಿ ನೀಡಿರುವುದು ಅಭಿವೃದ್ಧಿ ಕೆಲಸಗಳನ್ನು ಮಾಡಲು ಬಲ ತಂದಂತೆ ಆಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ.ಪಾಟೀಲ ಹೇಳಿದರು.

ನಗರದಲ್ಲಿ ಭಾನುವಾರ ಮಾಧ್ಯಮ ಪ್ರತಿನಿಧಿಗಳ ಜತೆಗೆ ಮಾತನಾಡಿದ ಅವರು, ‘ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಭಾನುವಾರ ಅರಣ್ಯ ಇಲಾಖೆ ಅಧಿಕಾರಿಗಳ ಜತೆಗೆ ಸಭೆ ನಡೆಸಿ, ವಿವಿಧ ವಿಷಯಗಳನ್ನು ಚರ್ಚಿಸಿದ್ದಾರೆ. ಕಪ್ಪತ್ತಗುಡ್ಡ ಅಭಿವೃದ್ಧಿಗಾಗಿ ₹5.50 ಕೋಟಿ, ಗದಗ ಮೃಗಾಲಯ ಅಭಿವೃದ್ಧಿಗಾಗಿ ₹3.50 ಕೋಟಿ, ಶೆಟ್ಟಿಕೆರೆ, ಭೀಷ್ಮ ಕೆರೆ, ಮಾಗಡಿ ಕೆರೆಗಳ ಅಭಿವೃದ್ಧಿ, ಜಲಕ್ರೀಡೆ, ಇಕೋ ಸ್ಪೋರ್ಟ್ಸ್‌ ಅಭಿವೃದ್ಧಿಗಾಗಿ ₹2.5 ಕೋಟಿ ಸೇರಿದಂತೆ ಒಟ್ಟು ₹14 ಕೋಟಿ ಅನುದಾನ ನೀಡುವಂತೆ ಈ ಸಂದರ್ಭದಲ್ಲಿ ಮನವಿ ಮಾಡಿದ್ದೇವೆ’ ಎಂದು ಅವರು ತಿಳಿಸಿದರು.

‘ಸಮಿತಿ ನೀಡಿದ ವರದಿಯನ್ನು ಪ್ರವಾಸೋದ್ಯಮ ಇಲಾಖೆ ತಾತ್ವಿಕವಾಗಿ ಒಪ್ಪಿಕೊಂಡಿದ್ದು, ತಕ್ಷಣದ ದೃಢ ಹೆಜ್ಜೆಗಳನ್ನು ಇರಿಸಲು ನೆರವಾಗುವಂತೆ ಹೆಚ್ಚಿನ ಅನುದಾನ ನೀಡುವಂತೆ ಕೋರಲಾಗಿದೆ’ ಎಂದು ತಿಳಿಸಿದರು.

‘ಬಿಂಕದಕಟ್ಟಿ ಮೃಗಾಲಯಕ್ಕೆ ಆನೆ, ಜಿರಾಫೆ, ಜೀಬ್ರಾಗಳನ್ನು ಒದಗಿಸಬೇಕು. ಬಿಂಕದಕಟ್ಟಿ ಮೃಗಾಲಯವನ್ನು ಮೇಲ್ದರ್ಜೆಗೇರಿಸಬೇಕು, ಗದಗ ಮೃಗಾಲಯ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಾಧಿಕಾರ ಸ್ಥಾಪಿಸುವಂತೆಯೂ ಮನವಿ ಮಾಡಲಾಗಿದೆ’ ಎಂದು ತಿಳಿಸಿದರು.

‘ಇತಿಹಾಸ ಪ್ರಸಿದ್ಧ ಗದಗ ಜಿಲ್ಲೆಗೆ ಬಂದಿರುವುದು ಖುಷಿ ಕೊಟ್ಟಿದೆ. ರಾಜ್ಯದಲ್ಲಿ ಹಸಿರು ವ್ಯಾಪ್ತಿಯನ್ನು ಹೆಚ್ಚು ಮಾಡಬೇಕು ಎಂಬ ಉದ್ದೇಶದಿಂದ 5 ಕೋಟಿ ಸಸಿಗಳನ್ನು ನೆಡುವ ಗುರಿ ನೀಡಲಾಗಿದೆ. ಗುರಿ ಸಾಧನೆಗೆ ಎಲ್ಲ ಜಿಲ್ಲೆಗಳಲ್ಲಿ ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಈವರೆಗೆ 3.10 ಕೋಟಿ ಸಸಿಗಳನ್ನು ನೆಡಲಾಗಿದೆ. ಕರ್ನಾಟಕ ನಾಮಕರಣದ ಸುವರ್ಣ ಮಹೋತ್ಸವದ ಅಂಗವಾಗಿ ಗದಗ ಜಿಲ್ಲೆಯಲ್ಲಿ 10 ಲಕ್ಷ ಸಸಿ ನೆಡುವ ತೀರ್ಮಾನ ಮಾಡಲಾಗಿದೆ’ ಎಂದು ತಿಳಿಸಿದರು.

‘ದಿ. ಕೆ.ಎಚ್‌.ಪಾಟೀಲರ ಅವರ ಕನಸು ಗದಗ ಮೃಗಾಲಯ. ಅದನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿಪಡಿಸಲು ₹2 ಕೋಟಿ ತಕ್ಷಣ ಬಿಡುಗಡೆ ಮಾಡಲಾಗುವುದು. ಆನೆ, ಜಿರಾಫೆ, ಜೀಬ್ರಾ ಶೀಘ್ರ ಒದಗಿಸಲು ಕ್ರಮವಹಿಸಲಾಗುವುದು. ಈ ಸಂಬಂಧ ಅವುಗಳಿಗೆ ಬೇಕಿರುವ ಆವರಣ ನಿರ್ಮಾಣಕ್ಕೆ ಕ್ರಮವಹಿಸುವಂತೆ ಮೃಗಾಲಯದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದರು.

‘ಬಸವರಾಜ ರಾಯರೆಡ್ಡಿ ಪಕ್ಷದ ಹಿರಿಯ ಮುಖಂಡರು. ಅವರ ಅನಿಸಿಕೆ, ನೋವುಗಳನ್ನು ಪಕ್ಷದ ವರಿಷ್ಠರು ಅವರ ಜತೆಗೆ ಚರ್ಚಿಸಿ ಬಗೆಹರಿಸಲಿದ್ದಾರೆ. ಎಲ್ಲ ಗ್ಯಾರಂಟಿಗಳನ್ನು ಈಡೇರಿಸುತ್ತೇವೆ. ಅಭಿವೃದ್ಧಿ ಕೆಲಸಗಳಿಗೆ ಹಿನ್ನಡೆ ಆಗುವುದಿಲ್ಲ. ಅನುದಾನವನ್ನೂ ಕಡಿತಗೊಳಿಸುವುದಿಲ್ಲ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT