ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಂಡರಗಿ | ರೈತರ ಬದುಕಿಗೆ ಬರಗಾಲದ ಬರಸಿಡಿಲು

ಕಾಶೀನಾಥ ಬಿಳಿಮಗ್ಗದ
Published 23 ನವೆಂಬರ್ 2023, 4:37 IST
Last Updated 23 ನವೆಂಬರ್ 2023, 4:37 IST
ಅಕ್ಷರ ಗಾತ್ರ

ಮುಂಡರಗಿ: ಪ್ರಸ್ತುತ ವರ್ಷ ಮುಂಗಾರು ಮಳೆ ಸಂಪೂರ್ಣವಾಗಿ ಕೈಕೊಟ್ಟಿರುವುದರಿಂದ ತಾಲ್ಲೂಕಿನಾದ್ಯಂತ ಜನ ಹಾಗೂ ಜಾನುವಾರುಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಸಕಾಲದಲ್ಲಿ ಮಳೆ ಬೀಳದ ಕಾರಣ ಬಿತ್ತಿದ ಬೆಳೆ ಸಂಪೂರ್ಣವಾಗಿ ಒಣಗಿ ಹೋಗಿ ರೈತರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ. ಸರ್ಕಾರ ತಾಲ್ಲೂಕನ್ನು ಬರಗಾಲ ಪೀಡಿತ ಎಂದು ಘೋಷಣೆ ಮಾಡಿದ್ದು, ರೈತರು ಸರ್ಕಾರದ ನೆರವು ಹಾಗೂ ಪರಿಹಾರಕ್ಕಾಗಿ ಕಾಯುತ್ತಿದ್ದಾರೆ.

ಮುಂಗಾರು ಆರಂಭದಲ್ಲಿ ಒಂದೆರಡು ಬಾರಿ ಉತ್ತಮವಾಗಿ ಮಳೆ ಸುರಿದದ್ದರಿಂದ ಮುಂದೆಯೂ ಉತ್ತಮವಾಗಿ ಮಳೆ ಸುರಿಯಬಹುದು ಎನ್ನುವ ಭರವಸೆಯಲ್ಲಿ ತಾಲ್ಲೂಕಿನ ರೈತರು ಮೆಕ್ಕೆಜೋಳ, ಸೂರ್ಯಕಾಂತಿ, ಹೆಸರು, ಶೇಂಗಾ, ತೊಗರಿ, ಸಜ್ಜಿ ಸೇರಿದಂತೆ ಮೊದಲಾದ ಬೆಳೆಗಳನ್ನು ಬಿತ್ತಿದ್ದರು. ಆರಂಭದಲ್ಲಿ ಸುರಿದ ಮಳೆಯು ನಂತರ ಸಂಪೂರ್ಣವಾಗಿ ಮಾಯವಾಯಿತು.

ಮುಂಡರಗಿ ಹೋಬಳಿಯಲ್ಲಿ 295 ಮಿ.ಮೀ. ವಾಡಿಕೆ ಮಳೆ ಸುರಿಯಬೇಕಿತ್ತು. ಆದರೆ, ಪ್ರಸ್ತುತ ವರ್ಷ 251ಮಿ.ಮೀ. ಮಳೆ ಸುರಿದಿದ್ದು, ಶೇ 15ರಷ್ಟು ಮಳೆಕೊರತೆ ಉಂಟಾಗಿದೆ. ಅದೇರೀತಿ, ಡಂಬಳ ಹೋಬಳಿಯಲ್ಲಿ 244 ಮಿ.ಮೀ. ವಾಡಿಕೆ ಮಳೆ ಸುರಿಯಬೇಕಿತ್ತು. ಆದರೆ, ಈ ವರ್ಷ ರೈತರು ನಿರೀಕ್ಷಿಸಿದ ಸಮಯದಲ್ಲಿ ಮಳೆ ಸುರಿಯದೆ ಇದ್ದುದ್ದರಿಂದ ರೈತರು ಬೆಳೆನಷ್ಟ ಎದುರಿಸುವಂತಾಗಿದೆ.

ಸಕಾಲದಲ್ಲಿ ಮುಂಗಾರು ಮಳೆಯಾಗದೆ ತಾಲ್ಲೂಕಿನ ರೈತರೆಲ್ಲ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದು ಸರ್ಕಾರ ತಕ್ಷಣ ರೈತರ ನೆರವಿಗೆ ಧಾವಿಸಬೇಕು.
ನಾಗರಾಜ ಮತ್ತೂರು, ಬಿದರಳ್ಳಿ ಗ್ರಾಮದ ಯುವ ರೈತ

ತಾಲ್ಲೂಕಿನಾದ್ಯಂತ ಪ್ರಸ್ತುತ ವರ್ಷ ನೀರಾವರಿ ಜಮೀನಿನಲ್ಲಿ ಒಟ್ಟು 15,650 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ, 14,345 ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಬಿತ್ತನೆ ಮಾಡಲಾಗಿತ್ತು. ಅದೇರೀತಿ ತಾಲ್ಲೂಕಿನಾದ್ಯಂತ ಕುಷ್ಕಿ ಜಮೀನಿನಲ್ಲಿ 31,970 ಹೆಕ್ಟೇರ್‌ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ, 22,135 ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಬಿತ್ತನೆ ಮಾಡಲಾಗಿತ್ತು. ಸಕಾಲದಲ್ಲಿ ಸಮರ್ಪಕವಾಗಿ ಮಳೆ ಸುರಿಯದೆ ಇದ್ದುದ್ದರಿಂದ ರೈತರು ಬಿತ್ತಿದ ಬೆಳೆಯು ಸಂಪೂರ್ಣವಾಗಿ ಒಣಗಿ ಹೋಯಿತು.

ರೈತರು ಸಾಲ ಸೋಲ ಮಾಡಿ ಬಿತ್ತನೆ ಬೀಜ, ಗೊಬ್ಬರ, ಕ್ರಿಮಿನಾಶಕ ಖರೀದಿಸಿ ಬಿತ್ತನೆ ಮಾಡಿದ್ದರು. ಕೂಲಿ ಕಾರ್ಮಿಕರ ವೇತನ ಮೊದಲಾದವುಗಳಿಗಾಗಿ ಸಾಕಷ್ಟ ಹಣ ವ್ಯಯಿಸಿದ್ದರು. ಅಲ್ಪ ಸ್ವಲ್ಪ ಮಳೆ ಸುರಿದು ಬಿತ್ತನೆ ಬೀಜ ಹಾಗೂ ಬಿತ್ತನೆಯ ಖರ್ಚಾದರೂ ದೊರೆಯಬಹುದು ಎಂದು ನಿರೀಕ್ಷಿಸಿದ್ದ ರೈತರಿಗೆ ಬರಗಾಲ ಬರಸಿಡಿಲಿನಂತೆ ಬಡಿದಿದೆ ಎಂದು ರೈತರು ಅಲವತ್ತುಕೊಳ್ಳುತ್ತಿದ್ದಾರೆ.

ಕೈಕೊಟ್ಟ ಸೂರ್ಯಕಾಂತಿ

ತಾಲ್ಲೂಕಿನ ನೀರಾವರಿ ಜಮೀನುಗಳಲ್ಲಿ ಸುಮಾರು 6 ಸಾವಿರ ಎಕರೆ ಪ್ರದೇಶದಲ್ಲಿ ಸೂರ್ಯಕಾಂತಿ ಬಿತ್ತನೆ ಮಾಡಲಾಗಿತ್ತು. ಆದರೆ ಖಾಸಗಿ ಕಂಪನಿಯು ಕಳಪೆ ಗುಣಮಟ್ಟದ ಬಿತ್ತನೆ ಬೀಜ ಪೂರೈಸಿದ್ದರಿಂದ ರೈತರು ಬಿತ್ತಿದ್ದ ಸೂರ್ಯಕಾಂತಿ ಬೆಳೆಯ ತೆನೆಗಳಲ್ಲಿ ಕಾಳು ಹಿಡಿಯದೆ ರೈತರೆಲ್ಲ ಬೆಳೆ ನಷ್ಟ ಅನುಭವಿಸುವಂತಾಯಿತು. ನಂತರ ರೈತರೆಲ್ಲ ಬೀದಿಗಿಳಿದು ಸರ್ಕಾರ ಹಾಗೂ ಬೀಜ ಪೂರೈಸಿದ್ದ ಕಂಪನಿಯ ವಿರುದ್ಧ ಹಲವಾರು ಬಾರಿ ಹೋರಾಟ ಮಾಡಿದರು. ರೈತರ ಹೋರಾಟಕ್ಕೆ ಮಣಿದ ಕಂಪನಿಯು ಒಂದು ಪ್ಯಾಕೇಟ್‌ ಬೀಜ ಪಡೆದ ರೈತರಿಗೆ ₹5000 ರೂಪಾಯಿ ಪರಿಹಾರ ವಿತರಿಸಿ ಕೈತೊಳೆದುಕೊಂಡಿತು. ಹೀಗಾಗಿ ಸೂರ್ಯಕಾಂತಿ ಬೆಳೆಯ ಲಾಭಾಂಶ ರೈತರಿಗೆ ತಲುಪದಾಯಿತು.

ಬರ ಪರಿಹಾರ ನಿರೀಕ್ಷೆಯಲ್ಲಿ ಅನ್ನದಾತ

ತಾಲ್ಲೂಕಿನ ಜನರು ನಿರಂತರವಾಗಿ ಹೋರಾಟ ಮಾಡಿದ್ದರಿಂದ ಸರ್ಕಾರ ಎರಡನೇ ಪಟ್ಟಿಯಲ್ಲಿ ಮುಂಡರಗಿ ತಾಲ್ಲೂಕನ್ನು ಬರಗಾಲ ಪೀಡಿತ ಎಂದು ಘೋಷಣೆ ಮಾಡಿತು. ಈಗ ರೈತರು ಸರ್ಕಾರ ನೀಡುವ ಬರಗಾಲ ಪರಿಹಾರದ ನಿರೀಕ್ಷೆಯಲ್ಲಿದ್ದು ತಕ್ಷಣ ಬರಗಾಲ ಪರಿಹಾರ ಮಂಜೂರಾದರೆ ರೈತರಿಗೆ ಅನುಕೂಲವಾಗಲಿದೆ. ತಾಲ್ಲೂಕಿನಾದ್ಯಂತ ಕೃಷಿ ಹಾಗೂ ತೋಟಗಾರಿಕೆಯ ಒಟ್ಟು 38891 ಹೆಕ್ಟೇರ್‌ ಬೆಳೆನಾಶವಾಗಿದೆ. ನೀರಾವರಿ ಜಮೀನಿನ ಪ್ರತಿ ಹೆಕ್ಟೇರ್ ಬೆಳೆಹಾನಿಗೆ 17000 ಹಾಗೂ ಕುಷ್ಕಿ ಜಮೀನಿಗೆ 8500 ಬೆಳೆಹಾನಿ ದೊರೆಯಬಹುದು ಎಂದು ಅಂದಾಜಿಸಲಾಗಿದೆ. ಪ್ರತಿ ರೈತರ ಗರಿಷ್ಠ ಎರಡು ಹೆಕ್ಟೇರ್ ಪ್ರದೇಶಕ್ಕೆ ಬೆಳೆಹಾನಿ ಪರಿಹಾರ ದೊರೆಯುವ ಸಾಧ್ಯತೆ ಇದೆ. ‘ಬೆಳೆ ನಷ್ಟ ಪರಿಹಾರ ಪಡೆದುಕೊಳ್ಳಲು ತಾಲ್ಲೂಕಿನ ಎಲ್ಲ ರೈತರು ಕಡ್ಡಾಯವಾಗಿ ಎಫ್.ಆರ್.ಐ.ಡಿ. ಮಾಡಿಸಬೇಕಿದೆ. ತಾಲ್ಲೂಕಿನಾದ್ಯಂತ ಇನ್ನೂ 8792 ರೈತರು ಎಫ್.ಆರ್.ಐ.ಡಿ. ಮಾಡಿಸಬೇಕಿದ್ದು ಎಲ್ಲ ರೈತರು ನೋಂದಣಿ ಮಾಡಿಸಿದರೆ ಮಾತ್ರ ರೈತರಿಗೆ ಬೆಳೆ ಹಾನಿ ಪರಿಹಾರ ದೊರೆಯಲಿದೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.

ಮುಂಡರಗಿ ತಾಲ್ಲೂಕಿನ ಬಿದರಳ್ಳಿ ಗ್ರಾಮದಲ್ಲಿ ಮಳೆ ಇಲ್ಲದೆ ಸಂಪೂರ್ಣವಾಗಿ ಒಣಗಿ ಹೋಗಿರುವ ಮೆಣಿಸಿನಕಾಯಿ ಬೆಳೆ
ಮುಂಡರಗಿ ತಾಲ್ಲೂಕಿನ ಬಿದರಳ್ಳಿ ಗ್ರಾಮದಲ್ಲಿ ಮಳೆ ಇಲ್ಲದೆ ಸಂಪೂರ್ಣವಾಗಿ ಒಣಗಿ ಹೋಗಿರುವ ಮೆಣಿಸಿನಕಾಯಿ ಬೆಳೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT