ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ: ಮಾಗಡಿ ಕೆರೆಗೆ ಮಂಗೋಲಿಯಾ ಹೆಬ್ಬಾತು, ಅತಿಥಿಗಳನ್ನು ವೀಕ್ಷಿಸುವುದೇ ಖುಷಿ

Published 23 ಡಿಸೆಂಬರ್ 2023, 23:30 IST
Last Updated 23 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ಗದಗ: ಶಿರಹಟ್ಟಿ ತಾಲ್ಲೂಕಿನ ಮಾಗಡಿ ಕೆರೆಯಲ್ಲಿ ಈಗ ಪಟ್ಟೆತಲೆ ಹೆಬ್ಬಾತುಗಳದ್ದೇ ಕಲರವ. ಮಂಗೋಲಿಯಾದಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಂದಿರುವ ಈ ಪಕ್ಷಿಗಳ ವೀಕ್ಷಣೆ ಮತ್ತು ಅಧ್ಯಯನಕ್ಕೆಂದೇ ವಿದ್ಯಾರ್ಥಿಗಳು ಮತ್ತು ಪಕ್ಷಿ ತಜ್ಞರು ಬರತೊಡಗಿದ್ದಾರೆ.

ಮಂಗೋಲಿಯಾದಲ್ಲಿ ನವೆಂಬರ್‌ನಿಂದ ಚಳಿಗಾಲ ಆರಂಭಗೊಂಡಿದ್ದು, ಹಿಮ ಜಾಸ್ತಿ ಬೀಳುವ ಕಾರಣ ಆಹಾರ ಸಿಗುವುದಿಲ್ಲ. ಹೀಗಾಗಿ ಅಲ್ಲಿನ ಪಟ್ಟೆತಲೆ ಹೆಬ್ಬಾತುಗಳ ವಲಸೆ ಆರಂಭವಾಗುತ್ತದೆ. ಅವುಗಳಿಗೆ ಶೇಂಗಾ ಇಷ್ಟದ ತಿನಿಸು. ಮಾಗಡಿ ಕೆರೆ ಸುತ್ತಮುತ್ತಲಿನ ಹತ್ತಾರು ಕಿ.ಮೀ. ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಶೇಂಗಾ ಬೆಳೆಯುವುದರಿಂದ ಅವು ಈ ಸ್ಥಳವನ್ನೇ ಇಷ್ಟಪಡುತ್ತವೆ.

‘ಸುಮಾರು 7 ಸಾವಿರ ಕಿ.ಮೀ. ಕ್ರಮಿಸಿ ಬರುವ ಹೆಬ್ಬಾತುಗಳು ಮಾರ್ಚ್ ಎರಡನೇ ವಾರದವರೆಗೆ ಇರುತ್ತವೆ. ಆಹಾರ ಹುಡುಕುತ್ತ ದೂರದವರೆಗೆ ಹಾರುವ ಅವು ಹೊಟ್ಟೆ ತುಂಬಿದ ಬಳಿಕ ಕೆರೆಗೆ ಮರಳುತ್ತವೆ.  ಅವು ಸಂತಾನೋತ್ಪತ್ತಿಗೆ ಅಲ್ಲ, ಚಳಿಗಾಲದ ಅತಿಥಿಗಳಾಗಿ ಮಾತ್ರ ಇಲ್ಲಿ ಬರುವುದು ವಿಶೇಷ’ ಎಂದು ಶಿರಹಟ್ಟಿ ವಲಯ ಅರಣ್ಯಾಧಿಕಾರಿ ರಾಮಪ್ಪ ಪೂಜಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ನಸುಕಿನ 5.30ಕ್ಕೆ ಆಹಾರ ಹುಡುಕುತ್ತ ಈ ಪಕ್ಷಿಗಳು 20ರಿಂದ 80 ಕಿ.ಮೀ. ದೂರ ಹಾರುತ್ತವೆ. ಬೆಳಿಗ್ಗೆ 10ಕ್ಕೆ ಕೆರೆಗೆ ಮರಳುವ ಅವು 4 ಗಂಟೆವರೆಗೆ ವಿರಮಿಸುತ್ತವೆ. ಸಂಜೆ ಮತ್ತೆ ಅವು ಅಹಾರ ಹುಡುಕುತ್ತ ಹೊರಡುತ್ತವೆ. ಈ ಬಾರಿ ಅಂದಾಜು ಸುಮಾರು 7 ಸಾವಿರದಷ್ಟು ಪಕ್ಷಿಗಳು ಬಂದಿವೆ’ ಎಂದರು.

‘ಜನವರಿಯಲ್ಲಿ ಬೇರೆ ಬೇರೆ ದೇಶಗಳಿಂದ ವಿವಿಧ ಜಾತಿಯ ಪಕ್ಷಿಗಳು ಮಾಗಡಿ ಕೆರೆಗೆ ಬರುತ್ತವೆ. ಅವುಗಳ ಚೆಂದದ ಚಿತ್ರಗಳನ್ನು ಸೆರೆ ಹಿಡಿಯಲು ರಾಜ್ಯದ ವಿವಿಧೆಡೆಯಿಂದ ಛಾಯಾಗ್ರಾಹಕರು ಬರುತ್ತಾರೆ. ಹಲವು ದಿನಗಳವರೆಗೆ ಅವರು ಇಲ್ಲಿಯೇ ತಂಗುತ್ತಾರೆ’ ಎಂದು ಪಕ್ಷಿ ವೀಕ್ಷಕ ಸೋಮಣ್ಣ ಪಶುಪತಿಹಾಳ ತಿಳಿಸಿದರು.

ಶಿರಹಟ್ಟಿ ತಾಲ್ಲೂಕಿನ ಮಾಗಡಿ ಕೆರೆಯಲ್ಲಿ ಬೀಡು ಬಿಟ್ಟಿರುವ ಪಟ್ಟೆತಲೆ ಹೆಬ್ಬಾತುಗಳ ಹಿಂಡು
ಶಿರಹಟ್ಟಿ ತಾಲ್ಲೂಕಿನ ಮಾಗಡಿ ಕೆರೆಯಲ್ಲಿ ಬೀಡು ಬಿಟ್ಟಿರುವ ಪಟ್ಟೆತಲೆ ಹೆಬ್ಬಾತುಗಳ ಹಿಂಡು

ವಿದ್ಯಾರ್ಥಿಗಳಿಗೆ ಪಕ್ಷಿಪಾಠ

ಪರಿಸರದ ಮಹತ್ವ ವಲಸೆ ಹಕ್ಕಿಗಳ ಆಸಕ್ತಿಕರ ಅಂಶಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಲೆಂದೇ ಅರಣ್ಯ ಇಲಾಖೆ ವಿಶೇಷ ಆಸ್ಥೆ ವಹಿಸಿದೆ. ಅರಣ್ಯ ಇಲಾಖೆ ಸಿಬ್ಬಂದಿಯೇ ವಿದ್ಯಾರ್ಥಿಗಳನ್ನು ಮಾಗಡಿ ಕೆರೆಗೆ ಕರೆ ತಂದು ಅವರಿಗೆ ಪಕ್ಷಿಗಳ ಕುರಿತು ಮಾಹಿತಿ ನೀಡುತ್ತಾರೆ. ಈವರೆಗೆ 1700ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮಾಗಡಿ ಕೆರೆಗೆ ಭೇಟಿ ನೀಡಿದ್ದಾರೆ. ಹಲವರು ಚಿತ್ರಗಳನ್ನು ಕ್ಲಿಕ್ಕಿಸಿಕೊಂಡಿದ್ದಾರೆ. ಪಕ್ಷಿವೀಕ್ಷಕರು ಸಹ ಅರಣ್ಯ ಇಲಾಖೆಯ ಸಹಯೋಗದಲ್ಲಿ ಮಾಹಿತಿ ಸಂಗ್ರಹಣಾ ಕಾರ್ಯದಲ್ಲಿ ನಿರತರಾಗಿದ್ದಾರೆ.

ಮಾಗಡಿ ಕೆರೆ ಸುತ್ತಮುತ್ತಲಿನ ಸ್ಥಳವು ದೇಶಿ ವಿದೇಶಿ ಪಕ್ಷಿಗಳಿಗೆ ಅಚ್ಚುಮೆಚ್ಚು. ಅವುಗಳನ್ನು ನೋಡಲೆಂದೇ ಬರುವ ಪಕ್ಷಿ ವೀಕ್ಷಕರಿಗೆ ವಿದ್ಯಾರ್ಥಿಗಳಿಗೆ ನಾವು ನೆರವಾಗುತ್ತೇವೆ.
–ರಾಮಪ್ಪ ಪೂಜಾರ, ವಲಯ ಅರಣ್ಯಾಧಿಕಾರಿ ಶಿರಹಟ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT