ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೊಜನೂರು ಶಾಲೆಗೆ ರಾಷ್ಟ್ರಮಟ್ಟದ ಇಕೋ ಕ್ಲಬ್ ಪ್ರಶಸ್ತಿ ಗರಿ

ಶಾಲೆಯಲ್ಲಿ ಅಳವಡಿಸಿಕೊಂಡಿರುವ ಪರಿಸರ ಸ್ನೇಹಿ ಕ್ರಮಗಳಿಗೆ ಮನ್ನಣೆ
Last Updated 17 ಡಿಸೆಂಬರ್ 2019, 19:31 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: ರಾಷ್ಟ್ರಮಟ್ಟದ 2018-19ನೇ ಸಾಲಿನ ಇಕೋ ಕ್ಲಬ್ ಪ್ರಶಸ್ತಿಗೆ ಲಕ್ಷ್ಮೇಶ್ವರ ತಾಲ್ಲೂಕಿನ ಗೊಜನೂರು ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಪಾತ್ರವಾಗಿದೆ. ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆಯು ಶಾಲೆಯನ್ನು ಪ್ರಶಸ್ತಿಗಾಗಿ ಆಯ್ಕೆ ಮಾಡಿದೆ. ಡಿ.20 ಮತ್ತು 21ರಂದು ಗುಜರಾತ್‍ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಭಾಗವಹಿಸಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.

‘ರಾಜ್ಯದ ಎಲ್ಲ ಪ್ರೌಢಶಾಲೆಗಳು ಈ ಪ್ರಶಸ್ತಿಗಾಗಿ ಸ್ಪರ್ಧಿಸಿದ್ದವು. ನಮ್ಮ ಶಾಲೆ ಇಡೀ ರಾಜ್ಯದ ಪ್ರತಿನಿಧಿಯಾಗಿ ಆಯ್ಕೆಯಾಗಿರುವುದು ದೊಡ್ಡ ಗೌರವ ತಂದಿದೆ. ಇಕೋ ಕ್ಲಬ್ ನಿಗದಿಪಡಿಸಿದ ಎಲ್ಲ ಚಟುವಟಿಕೆಗಳನ್ನು ಶಾಲೆಯಲ್ಲಿ ಅನುಷ್ಠಾನ ಮಾಡಿದ್ದನ್ನು ಪರಿಗಣಿಸಿ ಈ ಪ್ರಶಸ್ತಿ ಲಭಿಸಿದೆ’ ಎಂದು ಮುಖ್ಯ ಶಿಕ್ಷಕ ರವಿ ಬೆಂಚಳ್ಳಿ ಸಂತಸ ವ್ಯಕ್ತಪಡಿಸಿದರು.

ಶಾಲಾ ಆವರಣದಲ್ಲಿ ನೂರಾರು ಸಸಿಗಳನ್ನು ಬೆಳೆಸಲಾಗಿದೆ. ಶಾಲೆಯಲ್ಲಿ ಉತ್ಪತ್ತಿಯಾಗುವ ಕಸದಿಂದ ಸಾವಯವ, ಎರೆಹುಳು ಗೊಬ್ಬರ, ಜೀವಸಾರ ತಯಾರಿಸಿ ಅದನ್ನು ಸಸಿಗಳಿಗೆ ಗೊಬ್ಬರವಾಗಿ ಬಳಸಲಾಗುತ್ತದೆ. 25 ಜಾತಿಯ ಔಷಧ ಸಸಿಗಳನ್ನು ಬೆಳೆಸಲಾಗಿದ್ದು, ಅವುಗಳನ್ನು ಮಕ್ಕಳಿಗೆ ದತ್ತು ನೀಡಲಾಗಿದೆ. ‘ಶತ್ರು ಕಸ ಮತ್ತು ಮಿತ್ರ ಕಸ ಬೇರ್ಪಡಿಸಿ ಶತ್ರು ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುತ್ತೇವೆ’ ಎಂದು ಅವರು ಶಾಲೆಯಲ್ಲಿ ಕೈಗೊಂಡಿರುವ ಪರಿಸರಸ್ನೇಹಿ ಕ್ರಮಗಳನ್ನು ವಿವರಿಸಿದರು.

ಈ ಶಾಲೆಯಲ್ಲಿ ಮಳೆ ನೀರು ಕೊಯ್ಲನ್ನು ಯಶಸ್ವಿಯಾಗಿ ಜಾರಿಗೆ ತರಲಾಗಿದೆ. ಮಳೆ ನೀರನ್ನೇ ಶುದ್ಧೀಕರಿಸಿ ಮಕ್ಕಳಿಗೆ ಕುಡಿಯಲು ನೀಡಲಾಗುತ್ತದೆ. ಬಿಸಿಯೂಟಕ್ಕೆ ಬೇಕಾದ ತರಕಾರಿಗಳನ್ನು ಶಾಲಾ ಕೈತೋಟದಲ್ಲೇ ಬೆಳೆಯಲಾಗುತ್ತದೆ. ಗ್ರಾಮದ ಕೆರೆಯೊಂದನ್ನು ದತ್ತು ತೆಗೆದುಕೊಂಡು ಅದನ್ನು ಸ್ವಚ್ಛ ಮಾಡಿ ಅದರ ಬಳಕೆ ಕುರಿತು ಗ್ರಾಮದ ಜನರಲ್ಲಿ ಅರಿವು ಮೂಡಿಸುವ ಕೆಲಸವೂ ಶಾಲಾ ಮಕ್ಕಳು, ಶಿಕ್ಷಕರಿಂದ ನಡೆಯುತ್ತಿದೆ.

‘ನಮ್ಮೂರಿನ ಶಾಲೆಗೆ ರಾಷ್ಟ್ರಮಟ್ಟದ ಪ್ರಶಸ್ತಿ ಬಂದಿರುವುದು ನಮಗೆಲ್ಲ ಸಂತೋಷ ತಂದಿದೆ. ಶಾಲೆ ಅಭಿವೃದ್ಧಿಗೆ ನಮ್ಮೂರಿನ ಜನ ಎಲ್ಲ ಸಹಾಯ ಸಹಕಾರ ನೀಡುತ್ತಿದ್ದಾರೆ’ ಎಂದು ಗ್ರಾಮ ಪಂಚಾಯ್ತಿ ಸದಸ್ಯ ಶಿವರಾಜಗೌಡ ಪಾಟೀಲ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT