ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾ.ಪಂ ಚುನಾವಣೆ: ಚಿಹ್ನೆ ಹಂಚಿಕೆಗೆ ಕ್ರಮ

ಹಂಚಿಕೆ ಪ್ರಕ್ರಿಯೆ ಇಂದು: ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಮಾಹಿತಿ
Last Updated 14 ಡಿಸೆಂಬರ್ 2020, 6:42 IST
ಅಕ್ಷರ ಗಾತ್ರ

ಗದಗ: ‘ಗ್ರಾಮ ಪಂಚಾಯ್ತಿ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಚುನಾವಣಾ ಆಯೋಗದ ನಿಯಮಾನುಸಾರ ಡಿ.14ರಂದು ಚಿಹ್ನೆಗಳನ್ನು ಹಂಚಿಕೆ ಮಾಡಲಾಗುವುದು’ ಎಂದು ಜಿಲ್ಲಾ ಚುನಾವಣಾ ಅಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ತಿಳಿಸಿದ್ದಾರೆ.

‘ಕರ್ನಾಟಕ ಪಂಚಾಯತ್ ರಾಜ್ ನಿಯಮಗಳು, 1993ರ ನಿಯಮ 21ರಂತೆ ರಾಜ್ಯ ಚುನಾವಣಾ ಆಯೋಗವು ಆಧಿಸೂಚನೆಯ ಮೂಲಕ ಮುಕ್ತ ಚಿಹ್ನೆಗಳ ಪಟ್ಟಿ ಪ್ರಕಟಿಸಿದೆ. ರಾಷ್ಟ್ರೀಯ, ಪ್ರಾದೇಶಿಕ ಹಾಗೂ ಇತರ ನೋಂದಾಯಿತ ಮಾನ್ಯತೆ ಪಡೆದ ಪಕ್ಷಗಳಿಗೆ ಈಗಾಗಲೇ ಹಂಚಿಕೆಯಾಗಿರುವ ಚಿಹ್ನೆಗಳನ್ನು ಹೊರತುಪಡಿಸಿ ಹಂಚಿಕೆಗೆ ಮುಕ್ತವಾಗಿರುವ ಚಿಹ್ನೆಗಳ ಪೈಕಿ ಯಾವುದಾದರೂ ಒಂದು ಚಿಹ್ನೆಯನ್ನು ಅಭ್ಯರ್ಥಿಗಳು ನಾಮಪತ್ರದಲ್ಲಿ ನಮೂದಿಸಬೇಕು. ಆ ಚಿಹ್ನೆಗಳ ವಿನಃ ಬೇರೆ ಯಾವುದೇ ಚಿಹ್ನೆಯನ್ನು ಅಭ್ಯರ್ಥಿಗಳಿಗೆ ನೀಡುವುದಿಲ್ಲ’ ಎಂದುಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ನಿಯಮ 22ರಂತೆ ಅಭ್ಯರ್ಥಿಗಳಿಗೆ ಚಿಹ್ನೆಯನ್ನು ನಾಮಪತ್ರದ ಕ್ರಮಾಂಕವನ್ನು ಅನುಸರಿಸಿ ಹಂಚಿಕೆ ಮಾಡಲಾಗುತ್ತದೆ. ಆದರೆ, ಆ ಮೊದಲು ಯಾವುದೇ ಇಬ್ಬರು ಅಭ್ಯರ್ಥಿಗಳು ಒಂದೇ ಚಿಹ್ನೆಯನ್ನು ಕೋರಿದ್ದಾರೆಯೇ ಎಂಬುದನ್ನು ಪರಿಶೀಲಿಸಲಾಗುವುದು. ಒಂದು ವೇಳೆ ಇಬ್ಬರು ಅಥವಾ ಹೆಚ್ಚು ಅಭ್ಯರ್ಥಿಗಳು ಒಂದೇ ಚಿಹ್ನೆ ಕೋರಿದ್ದಲ್ಲಿ ನಿಯಮ 22(5)(ಎ) ಪ್ರಕಾರ ಯಾರಿಗೆ ಆ ಚಿಹ್ನೆಯನ್ನು ನೀಡಬೇಕು ಎಂಬುದನ್ನು ಚೀಟಿ ಎತ್ತುವ ಮೂಲಕ ತೀರ್ಮಾನಿಸಲಾಗುತ್ತದೆ. ಉಳಿದ ಅಭ್ಯರ್ಥಿಗಳಿಗೆ ಅವರು ಕೋರಿದ 2ನೇ ಅಥವಾ 3ನೇ ಚಿಹ್ನೆಯನ್ನು ನಿಯಮ 22ನ್ನು ಅನುಸರಿಸಿ ನೀಡಲಾಗುವುದು’ ಎಂದು ಹೇಳಿದ್ದಾರೆ.

‘ಅಭ್ಯರ್ಥಿಗಳಿಗೆ ಮಂಜೂರು ಮಾಡಿದ ಚುನಾವಣಾ ಚಿಹ್ನೆಯ ಮಾದರಿ ಪ್ರತಿಯನ್ನು ಸ್ಪರ್ಧಿಸುವ ಅಭ್ಯರ್ಥಿಗೆ ಅಥವಾ ಚುನಾವಣಾ ಏಜೆಂಟ್‌ಗೆ ನೀಡಿ ಸ್ವೀಕೃತಿ ಪಡೆದುಕೊಳ್ಳಲಾಗುತ್ತದೆ. ಯಾವುದೇ ಅಭ್ಯರ್ಥಿ ಹಾಜರಿಲ್ಲದಿದ್ದಲ್ಲಿ ಚುನಾವಣಾಧಿಕಾರಿಯು ಆ ಅಭ್ಯರ್ಥಿಗೆ ಮಂಜೂರು ಮಾಡಿರುವ ಚಿಹ್ನೆಯ ಬಗ್ಗೆ ನಡಾವಳಿ ಮಾಡಿ, ಇತರೆ ಅಭ್ಯರ್ಥಿಗಳಿಂದ ಸಹಿ ಪಡೆದುಕೊಳ್ಳುವರು’ ಎಂದು ಹೇಳಿದ್ದಾರೆ.
‘ಕ್ಷೇತ್ರವಾರು ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳ ಪಟ್ಟಿಯನ್ನು ತಯಾರಿಸಿ, ಅವರಿಗೆ ಚುನಾವಣಾ ಚಿಹ್ನೆಯನ್ನು ಹಂಚಿಕೆ ಮಾಡುವ ಸಂದರ್ಭದಲ್ಲಿ ಆಯಾ ಕ್ಷೇತ್ರದ ಅಭ್ಯರ್ಥಿಗಳು ಮಾತ್ರ ಹಾಜರಿರಬೇಕು. ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರೆ, ಕ್ರಮವಾಗಿ ಒಬ್ಬೊಬ್ಬರನ್ನೇ ಕರೆದು ಅವರಿಗೆ ಚಿಹ್ನೆಯನ್ನು ಹಂಚಿಕೆ ಮಾಡಲಾಗುತ್ತದೆ. ಹೆಚ್ಚಿನ ಅಭ್ಯರ್ಥಿಗಳು ಒಂದೇ ಚಿಹ್ನೆಯನ್ನು ಕೋರಿರುವ ಸಂದರ್ಭದಲ್ಲಿ ಲಾಟರಿ ಮೂಲಕ ಚಿಹ್ನೆಯನ್ನು ಹಂಚಿಕೆ ಮಾಡಬೇಕಾಗಿರುವುದರಿಂದ, ಇಂತಹ ಎಲ್ಲಾ ಅಭ್ಯರ್ಥಿಯನ್ನು ಕರೆದು ಚಿಹ್ನೆಯನ್ನು ಹಂಚಿಕೆ ಮಾಡಬಹುದಾಗಿದೆ. ಕೊಠಡಿಯಲ್ಲಿ ಸೇರುವ ಅಧಿಕಾರಿ ಮತ್ತು ಅಭ್ಯರ್ಥಿಗಳು ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ತಪ್ಪದೆ ಪಾಲಿಸಬೇಕು’ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT