ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ನರೇಗಲ್:‌ ಸಮಗ್ರ ಕೃಷಿಯಲ್ಲಿ ರೈತನ ಸಾಧನೆ

ನೀರಾವರಿ, ಒಣಬೇಸಾಯ ಪದ್ಧತಿಯಲ್ಲಿ ಬಹುವಿಧ ಬೆಳೆ
ಚಂದ್ರು ಎಂ. ರಾಥೋಡ್‌
Published 31 ಮೇ 2024, 5:07 IST
Last Updated 31 ಮೇ 2024, 5:07 IST
ಅಕ್ಷರ ಗಾತ್ರ

ನರೇಗಲ್:‌ ಕೃಷಿಯನ್ನೇ ಉಸಿರಾಗಿಸಿಕೊಂಡಿರುವ ನರೇಗಲ್‌ ಸಮೀಪದ ಕೋಟುಮಚಗಿ ಗ್ರಾಮದ ರೈತ ವೀರಣ್ಣ ಲಕ್ಕುಂಡಿ (ಜಾಡರ) ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ಸೈ ಅನಿಸಿಕೊಂಡಿದ್ದು, ಕೃಷಿ ಬಗೆಗಿನ ಅಪರಿಮಿತ ಪ್ರೀತಿ, ಕಾಯಕದ ಮೂಲಕ ಇತರೆ ರೈತರಿಗೆ ಮಾದರಿಯಾಗಿದ್ದಾರೆ.

ಎಸ್‌ಎಸ್‌ಎಲ್‌ಸಿ ಓದಿರುವ ಇವರು ಚಿಕ್ಕಂದಿನಿಂದಲೂ ಕೃಷಿ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದಾರೆ. ಪಿತ್ರಾರ್ಜಿತ ಜಮೀನಿನಲ್ಲಿ ಸಾವಯವ, ರಾಸಾಯನಿಕ ಪದ್ದತಿಯಲ್ಲಿ ಕೃಷಿ ಮಾಡುತ್ತಿದ್ದಾರೆ. ನಾರಾಯಣಪುರ-ಕೋಟುಮಚಗಿ ಗ್ರಾಮದ ರಸ್ತೆ ಬದಿಯಿರುವ ಒಟ್ಟು 16 ಎಕರೆ ಭೂಮಿಯಲ್ಲಿ 12 ಎಕರೆ ನೀರಾವರಿ ಪದ್ಧತಿಯ ತೋಟ ಹಾಗೂ 4 ಎಕರೆ ಭೂಮಿಯಲ್ಲಿ ಒಣಬೇಸಾಯ ಪದ್ಧತಿಯಲ್ಲಿ ಹೆಸರು, ಜೋಳ, ಕಡಲೆ, ಗೋಧಿಯಂತಹ ಬೆಳೆಗಳನ್ನು ಬೆಳೆಯುತ್ತಿದ್ದಾರೆ.

ತೋಟದ ಭಾಗದಲ್ಲಿ ಮೂರು ಕೊಳವೆಬಾವಿಗಳನ್ನು ಹಾಕಿಸಿದ್ದು ಪ್ರತಿಯೊಂದರಲ್ಲಿ 2.5 ಇಂಚಿನಷ್ಟು ನೀರು ಬಿದ್ದಿದೆ. ಸದ್ಯ ತೋಟದ 5 ಎಕರೆ ಕೃಷಿ ಭೂಮಿಯಲ್ಲಿ ಪೇರಲೆ ಹಣ್ಣಿನ ಗಿಡಗಳನ್ನು, ಸೀತಾಫಲ 800 ಗಿಡಗಳನ್ನು, 80 ನೇರಳೆ ಹಣ್ಣಿನ ಗಿಡಗಳನ್ನು ನೆಡಲಾಗಿದೆ. ತೆಂಗು 250, ಹುಣಸೆ 40 ಗಿಡಗಳನ್ನು ನೆಟ್ಟು ಬೆಳೆಸಲಾಗಿದೆ. 4 ಎಕರೆ ಕೃಷಿ ಭೂಮಿಯಲ್ಲಿ ಕರಿಬೇವು ಹಾಕಲಾಗಿದೆ. ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಕರಿಬೇವು ಲಭ್ಯತೆ ಹೆಚ್ಚಾಗಿದೆ ಹಾಗಾಗಿ ಬೆಲೆಕುಸಿತ ಕಂಡಿದೆ.

ಸ್ಪರ್ಧಾತ್ಮಕ ಮಾರುಕಟ್ಟೆ ಇರುವ ಕಾರಣ ಲಾಭವು ಹವಮಾನ ಹಾಗೂ ಬೇಡಿಕೆಯ ಮೇಲೆ ಅವಲಂಬಿತವಾಗಿರುತ್ತದೆ. ಆದರೆ ನಾನು ಇಲ್ಲೀವರೆಗೆ ಮಾಡಲಾದ ಕೃಷಿಗೆ ಉತ್ತಮ ಲಾಭ ಸಿಕ್ಕಿದೆ. ಗದಗ-ಬೇಟಗೇರಿ ಮಾರುಕಟ್ಟೆಯನ್ನು ಅವಲಂಬಿಸಿದ್ದು ಕಟಾವು ಮಾಡಿದ ನಂತರ ನಮ್ಮದೇ ವಾಹನದ ಮೂಲಕ ಮಾರುಕಟ್ಟೆಗೆ ಹೋಗುತ್ತೇವೆ. ಯಾವಾಗ ಹಣ್ಣುಗಳಿಗೆ ಚುಕ್ಕೆ ಬಿದ್ದಿರುತ್ತದೆಯೋ ಆಗ ಲಾಭ ಕಡಿಮೆ ಆಗುತ್ತದೆ. ಉಳಿದ ಸಂದರ್ಭದಲ್ಲಿ ಲಾಭ ಚೆನ್ನಾಗಿರುತ್ತದೆ ಎಂದು ವೀರಣ್ಣ ಮಾಹಿತಿ ನೀಡಿದರು.

ಕೃಷಿ ಭೂಮಿ ಸಂಪೂರ್ಣವಾಗಿ ಸಾವಯವ ಮಾಡಿದಎರೂ ಒಗ್ಗುವುದಿಲ್ಲ. ಸಂಪೂರ್ಣವಾಗಿ ರಾಸಾಯನಿಕ ಮಾಡಿದರೂ ಉತ್ತಮ ಫಲಿತಾಂಶ ನಿರಂತರವಾಗಿ ಬರುವುದಿಲ್ಲ. ಹಾಗಾಗಿ ಹವಾಮಾನ, ಭೂಮಿ ಸ್ಥಿತಿಗತಿಗೆ ತಕ್ಕಂತೆ ಸಗಣಿ ಗೊಬ್ಬರ, ರಾಸಾಯನಿಕ ಗೊಬ್ಬರ ಬಳಕೆ ಮಾಡುತ್ತೇವೆ. ಆದರೆ ಹೆಚ್ಚಿನ ಪ್ರಮಾಣದಲ್ಲಿ ಸಗಣಿಗೊಬ್ಬರ ಬಳಕೆಗೆ ಮುಂದಾಗುತ್ತೇವೆ. ಹಣ್ಣಿನ ಗಿಡಗಳು ಮಾರುಕಟ್ಟೆಯಿಂದ ಲಾಭ ನೀಡಿದರೆ ಒಣ ಬೇಸಾಯದ ಭೂಮಿಗಳು ಮಳೆಗಾಲ ಚೆನ್ನಾಗಿ ಇದ್ದಾಗ ಕೈ ಹಿಡಿಯುತ್ತವೆ. ಮನೆಗೆ ಕಾಳುಕಡಿ ನೀಡುತ್ತವೆ ಎಂದರು.

ಗಿಡಗಳಿಂದ ಉದುರುವ ಎಲೆಗಳನ್ನು, ಕಸ, ಕಟಾವು ಮಾಡಿದ ಬಳಿಕ ಉಳಿಯುವ ಕಡ್ಡಿಗಳನ್ನು ಒಂದುಕಡೆ ಹಾಕಿ ಕಾಂಪೋಸ್ಟ್‌ ಮಾಡಿ ಫಲವತ್ತಾದ ಗೊಬ್ಬರವನ್ನು ತೋಟದಲ್ಲಿಯೇ ಉತ್ಪಾದನೆ ಮಾಡುತ್ತಾರೆ. ನಂತರ ಹೊಲಕ್ಕೆ ಸಿಂಪರಣೆ ಮಾಡುತ್ತಾರೆ. ಕೃಷಿ ಪ್ರಯೋಗಗಳಿಗೆ ಇವರ ಇಬ್ಬರೂ ಸಹೋದರರು ಕೃಷಿಕರಾಗಿರುವ ಕಾರಣ ಸಾಥ್‌ ನೀಡುತ್ತಾರೆ.

ಜಿಲ್ಲಾ, ತಾಲ್ಲೂಕು ಮಟ್ಟದ ಪ್ರಗತಿಪರ ರೈತ, ಹುಲಕೋಟಿ ಕೃಷಿ ವಿಜ್ಞಾನ ಕೇಂದ್ರ, ಧಾರವಾಡ ಕೃಷಿ ವಿಶ್ವವಿದ್ಯಾಲಯ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ವೀರಣ್ಣ ಹಾಗೂ ಅವರ ತಂದೆಯವರು ಸಹ ಪ್ರಗತಿಪರ ರೈತ, ಉತ್ತಮ ರೈತ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ನರೇಗಲ್‌ ಸಮೀಪದ ಕೋಟುಮಚಗಿ ಗ್ರಾಮದ ರೈತ ವೀರಣ್ಣ ಲಕ್ಕುಂಡಿ(ಜಾಡರ) ಸೀತಾಫಲ ಹಣ್ಣಿನ ಗಿಡಗಳ ಮುಂದೆ ನಿಂತಿರುವುದು
ನರೇಗಲ್‌ ಸಮೀಪದ ಕೋಟುಮಚಗಿ ಗ್ರಾಮದ ರೈತ ವೀರಣ್ಣ ಲಕ್ಕುಂಡಿ(ಜಾಡರ) ಸೀತಾಫಲ ಹಣ್ಣಿನ ಗಿಡಗಳ ಮುಂದೆ ನಿಂತಿರುವುದು
ಹವಾಮಾನಕ್ಕೆ ತಕ್ಕಂತೆ ಭೂಮಿ ಹದಗೊಳಿಸಿ ಕೃಷಿ ಮಾಡಿದರೆ ಉತ್ತ ಸಾಧನೆ ಮಾಡಬಹುದು
ವೀರಣ್ಣ ಲಕ್ಕುಂಡಿ(ಜಾಡರ) ರೈತ
ಕೃಷಿ ಕಾಯಕಕ್ಕೆ ಆಳು ಸಿಗುತ್ತಿಲ್ಲ
ಕೈತುಂಬಾ ಸಂಬಳ ಕೊಟ್ಟರು ಹೊಲದ ಕೆಲಸ ಮಾಡಲು ಆಳು ಸಿಗುತ್ತಿಲ್ಲ. ಇದರಿಂದ ಕೆಲವೊಮ್ಮೆ ಕೃಷಿ ಕಾಯಕ ತುಂಬಾ ಬೇಜಾರು ಅನಿಸುತ್ತದೆ. ಊರಲ್ಲಿ ಖಾಲಿ ಅಲೆಯುವ ಯುವಕ ಯುವತಿಯರು ಹೊಲದ ಕೆಲಸವೆಂದರೆ ಅಸಡ್ಡೆ ಭಾವನೆ ತೋರುತ್ತಾರೆ. ಈಗಿನವರು ಕೇವಲ ಮಾತಲ್ಲಿ ರೈತರಾಗಿದ್ದಾರೆ ಹೊರತು ಹೊಲದಲ್ಲಿ ಬೆವರು ಸುರಿಸಿ ರೈತರಾಗುತ್ತಿಲ್ಲ. ಹೀಗಾಗಿ ದುಡಿಯುವವರೇ ಇಲ್ಲವಾದರೆ ಕೃಷಿ ಮಾಲೀಕರಿಗೆ ನಿರ್ವಹಣೆ ಮಾಡುವುದು ಕಷ್ಟವಾಗುತ್ತದೆ ಎನ್ನುತ್ತಾರೆ ರೈತ ವೀರಣ್ಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT