ಗಜೇಂದ್ರಗಡ: ಪಟ್ಟಣದ ರೋಣ ರಸ್ತೆಯಲ್ಲಿ ಜಗದ್ಗುರು ತೋಂಟದಾರ್ಯ ಸಿಬಿಎಸ್‌ಇ ಶಾಲೆ ಪಕ್ಕದ 2.11 ಎಕರೆ ಜಮೀನಿನಲ್ಲಿ ಹುಲುಸಾಗಿ ಬೆಳೆದಿದ್ದ ಅಲಸಂದಿ ಹಾಗೂ ಪುರ್ತಗೇರಿ ಗ್ರಾಮದ ಹತ್ತಿರದ 2.12 ಎಕರೆ ಜಮೀನಿನಲ್ಲಿ ಬೆಳೆದಿದ್ದ ಹತ್ತಿ ಬೆಳೆಗಳನ್ನು ಗುರುವಾರ ರಾತ್ರಿ ದುಷ್ಕರ್ಮಿಗಳು ಹರಗಿ ನಾಶ ಮಾಡಿದ್ದಾರೆ.
ಪುರ್ತಗೇರಿ ಗ್ರಾಮದ ಮಲ್ಲಪ್ಪ ಕಳಕಪ್ಪ ಮುಶಿಗೇರಿ ಕುಟುಂಬದವರು ಪಿತ್ರಾರ್ಜಿತವಾದ ರಿ.ಸ.ನಂ. 23ರ 2.11 ಎಕರೆ ಹಾಗೂ ರಿ.ಸ.ನಂ. 18/6ರ 2.12 ಎಕರೆ ಜಮೀನಿನಲ್ಲಿ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿದ್ದು, ರಿ.ಸ.ನಂ. 23ರ 2.11 ಎಕರೆ ಜಮೀನಿನಲ್ಲಿ ಅಲಸಂದಿ ಹಾಗೂ ರಿ.ಸ.ನಂ 18/6ರ 2.12 ಎಕರೆ ಜಮೀನಿನಲ್ಲಿ ಬೀಜೋತ್ಪಾದನೆ ಹತ್ತಿ ಬೆಳೆ ಬೆಳೆದಿದ್ದರು.
ಹುಲುಸಾಗಿ ಬೆಳೆದಿದ್ದ ಎರಡೂ ಜಮೀನುಗಳಲ್ಲಿನ ಬೆಳೆಯನ್ನು ಗುರುವಾರ ರಾತ್ರಿ ದುಷ್ಕರ್ಮಿಗಳು ಟ್ರ್ಯಾಕ್ಟರ್ ಮೂಲಕ ಹರಗಿ ನಾಶ ಮಾಡಿದ್ದಾರೆ. ಶುಕ್ರವಾರ ಬೆಳಿಗ್ಗೆ ಜಮೀನಿಗೆ ಬಂದು ನಾಶವಾದ ಬೆಳೆ ನೋಡಿದ ಮುಶಿಗೇರಿ ಕುಟುಂಬಸ್ಥರು ಕೈಗೆ ಬಂದಿದ್ದ ತುತ್ತನ್ನು ಕುಲಗೇಡಿಗಳು ಬಾಯಿಗೆ ಬರದಂತೆ ಮಾಡಿದ್ದಾರೆ ಎಂದು ರೋಧಿಸುತ್ತಿರುವುದನ್ನು ಕಂಡು ನೆರೆದಿದ್ದ ಜನರಲ್ಲಿ ಮರುಕ ಹುಟ್ಟಿಸಿತು.
ʼನಮ್ಮ 2.11 ಎಕರೆ ಜಮೀನಿನಲ್ಲಿ ₹ 40-50 ಸಾವಿರ ಖರ್ಚು ಮಾಡಿ ಅಲಸಂದಿ ಮತ್ತೊಂದು 2.12 ಎಕರೆ ಜಮೀನಿನಲ್ಲಿ 70-80 ಸಾವಿರ ಖರ್ಚು ಮಾಡಿ ಪ್ಲಾಟಿನ ಹತ್ತಿ ಬೆಳೆದಿದ್ವಿ. ಕಳೆ ತಗಿಸಿ, ಗೊಬ್ಬರ ಹಾಕಿ, ಎರಡ್ಮೂರು ಸಲ ಪಿಳಗುಂಟಿ ಹೊಡಿಸಿದ್ವಿ. ಎರಡೂ ಬೆಳೆ ಚನ್ನಾಗಿ ಬಂದಿದ್ವು. ಈ ಬಾರಿ ₹ 5-6 ಲಕ್ಷ ಫಸಲು ಬರುತ್ತದೆ ಎಂಬ ನಿರೀಕ್ಷೆಯಲ್ಲಿದ್ವಿ. ಆದ್ರ ಯಾರೋ ದುಷ್ಟರು ರಾತ್ರಿ ಹರಿಗಿ ಎಲ್ಲ ಬೆಳಿ ಹಾಳ ಮಾಡ್ಯಾರ. ಪೊಲೀಸರು ತಪ್ಪಿತಸ್ಥರನ್ನು ಹಿಡಿದು ಶಿಕ್ಷಿಸುವುದರ ಜೊತೆಗೆ ಬೆಳೆಯ ನಷ್ಟ ಕೊಡಿಸಬೇಕುʼ ಎಂದು ಮಲ್ಲಪ್ಪ ಕಳಕಪ್ಪ ಮುಶಿಗೇರಿ ಗೋಳಾಡಿದರು.
ʼಈ ಸಲ ಅಲಸಂದಿ ಬಾಳ ಚಂದ ಬೆಳೆದಿತ್ತ ರಿ, ಹೊಲತುಂಬ ಹೂ, ಕಾಯಿ ಬಿಟ್ಟಿತ್ತು. ಈ ಸಲ ಪೀಕ ಚೋಲೋ ಬರುತ್ತ ಅಂತ ಆಸೆ ಇಟ್ಟಿದ್ವಿ ಆದ್ರ ಯಾರೋ ಕುಲಗೇಡಿತನದಿಂದ ರಾತ್ರೋರಾತ್ರಿ ಅಲಸಂದಿ ಹೊಲ ಎಲ್ಲ ಹರಗಿ ಹಾಳ ಮಾಡ್ಯಾರ. ರಟ್ಟಿ ನಂಬಿ ದುಡಿಯಾರಿಗೆ ಹಿಂಗ್ ಮಾಡಿದ್ರ ನಾವು ಬಾಳೆ ಹೆಂಗ್ ಮಾಡೋದ್ರಿ....ʼ ಎಂದು ಬೆಳೆ ನಾಶವಾದ ಜಮೀನಿನ ರೈತ ಮಹಿಳೆ ಶಶಿಕಲಾ ಮುಶಿಗೇರಿ ಕಣ್ಣೀರು ಇಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.