ಲಕ್ಷ್ಮೇಶ್ವರ: ಕಳೆದ 25 ವರ್ಷಗಳಿಂದ ಇಲ್ಲಿನ ರೈತ ನಾಗರಾಜ ಚಿಂಚಲಿ ಎಲೆಬಳ್ಳಿ ಕೃಷಿ ಮಾಡುತ್ತಿದ್ದು, ಉತ್ತಮ ಲಾಭ ಗಳಿಸುತ್ತಾ ಬೇರೆ ರೈತರಿಗೆ ಮಾದರಿಯಾಗಿದ್ದಾರೆ.
ಗ್ರಾಮದ ಬಸಣ್ಣ ಬೆಟಗೇರಿ ಅವರ ಒಂದು ಎಕರೆ ಹೊಲವನ್ನು ಲಾವಣಿ ಪಡೆದು, ಅದರಲ್ಲಿ ನಾಲ್ಕೂವರೆ ಸಾವಿರ ಎಲೆಬಳ್ಳಿ ಹಚ್ಚಿದ್ದು, ಕರಿ ವೀಳ್ಯದೆಲೆ ಬೆಳೆಯುತ್ತಿದ್ದಾರೆ. ಪೂಜೆ ಸೇರಿದಂತೆ ಇನ್ನಿತರ ಕಾರ್ಯಗಳಿಗೆ ಹಾಗೂ ಸಮಾರಂಭಗಳ ವೇಳೆ ಈ ವೀಳ್ಯದೆಲೆಗೆ ಬೇಡಿಕೆ ಹೆಚ್ಚು.
ತಾಂಬೂಲಕ್ಕೂ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಈ ವೀಳ್ಯದೆಲೆಯನ್ನು ಹೆಚ್ಚು ಬಳಸಲಾಗುತ್ತಿದ್ದು, ಹೀಗಾಗಿ ವರ್ಷದ ಹನ್ನೆರಡು ತಿಂಗಳೂ ಬೇಡಿಕೆ ಇರುತ್ತದೆ.
ಒಮ್ಮೆ ನಾಟಿ ಮಾಡಿದ ಬಳ್ಳಿ 15ರಿಂದ 20 ವರ್ಷಗಳವರೆಗೆ ಇರಲಿದೆ. ಸದ್ಯ ಇವರ ತೋಟದಲ್ಲಿ 7ರಿಂದ 8 ವರ್ಷಗಳ ಹಿಂದಿನ ಬಳ್ಳಿ ಉತ್ತಮ ಫಲ ನೀಡುತ್ತಿದೆ. ಆದರೆ, ಕಳೆದ ವರ್ಷ ಸುರಿದ ಭಾರೀ ಮಳೆಗೆ ಎರಡು ಸಾವಿರ ಬಳ್ಳಿಗಳು ಸಂಪೂರ್ಣ ಕೊಳೆತು ನಾಶವಾಗಿದ್ದವು. ಹೀಗಾಗಿ ಮತ್ತೆ ₹80 ಸಾವಿರ ರೂಪಾಯಿ ಖರ್ಚು ಮಾಡಿ ಬಳ್ಳಿಗಳನ್ನು ನಾಟಿ ಮಾಡಿದ್ದಾರೆ.
‘ಎಲೆಬಳ್ಳಿ ನಾಟಿಗೆ ಜುಲೈ ಸೂಕ್ತ. ನಾಟಿ ಮಾಡುವ ಪೂರ್ವದಲ್ಲಿ ಬಳ್ಳಿ ಹಬ್ಬುವ ಸಲುವಾಗಿ ಆಸರೆಯಾಗಿ ಸಾಲಿನಿಂದ ಸಾಲಿಗೆ ಐದು ಅಡಿ ಅಂತರದಲ್ಲಿ ನುಗ್ಗೆ ಗಿಡಗಳನ್ನು ಬೆಳೆಸಬೇಕು. ನಂತರ ನುಗ್ಗೆ ಗಿಡಕ್ಕೊಂದರಂತೆ ಒಂದು ಅಡಿ ಎತ್ತರ ಬೆಳೆದ ಬಳ್ಳಿಯನ್ನು ನಾಟಿ ಮಾಡಬೇಕು. ಯಾವುದೇ ರಾಸಾಯನಿಕ ಗೊಬ್ಬರ ಬಳಸದೆ ಕೇವಲ ಸಗಣಿ ಗೊಬ್ಬರ ಮಾತ್ರ ಬಳಸಿದರೆ ಬಳ್ಳಿ ಚೆನ್ನಾಗಿ ಬೆಳೆದು ಮೂರು ತಿಂಗಳಲ್ಲಿ ಫಸಲು ನೀಡುತ್ತದೆ ಎಂದು ರೈತ ನಾಗರಾಜ ಚಿಂಚಲಿ ಹೇಳಿದರು.
ಮುಂಗಾರು ಗಾಳಿ ಎಲೆಬಳ್ಳಿಗೆ ಮಾರಕ. ಈ ಗಾಳಿಗೆ ಎಲೆಬಳ್ಳಿಗಳು ಕತ್ತರಿಸಿ ಬೀಳುತ್ತವೆ. ಇದು ತೋಟಕ್ಕೆ ದೊಡ್ಡ ವೈರಿ ಇದ್ದಂತೆ. ಇದನ್ನು ಹೊರತು ಪಡಿಸಿದರೆ ಈ ಬೆಳೆಗೆ ಹೆಚ್ಚಿನ ರೋಗಬಾಧೆ ಇಲ್ಲ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.